ADVERTISEMENT

ಬಂಗಾರಪೇಟೆಗೆ ಉಪ ನಗರ ರೈಲು ಯೋಜನೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 8:53 IST
Last Updated 11 ಡಿಸೆಂಬರ್ 2013, 8:53 IST

ಬೆಂಗಳೂರು: ಬೆಂಗಳೂರಿನಿಂದ ತುಮಕೂರು, ಮಂಡ್ಯ, ಬಂಗಾರಪೇಟೆ, ದೊಡ್ಡಬಳ್ಳಾಪುರ ಮುಂತಾದ ಕಡೆ ವಿದ್ಯುತ್ ರೈಲು ಸಂಪರ್ಕ ಕಲ್ಪಿಸುವ ಉಪ ನಗರ ರೈಲು ಯೋಜನೆಯ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ವಿನಯಕುಮಾರ್‌ ಸೊರಕೆ ಹೇಳಿದರು.

ಮೂರು ಹಂತದ ಈ ಯೋಜನೆಯನ್ನು ರೂ. 8,500 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಮೊದಲ ಹಂತದಲ್ಲಿ ರೂ. 850 ಕೋಟಿ ವೆಚ್ಚದಲ್ಲಿ ಬೆಂಗಳೂರು– ಬಂಗಾರಪೇಟೆ, ಬೆಂಗಳೂರು – ಮಂಡ್ಯ, ಬೆಂಗಳೂರು– ತುಮಕೂರು ನಡುವೆ ರೈಲ್ವೆ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಎರಡನೇ ಹಂತದಲ್ಲಿ ಬೆಂಗಳೂರು– ದೊಡ್ಡಬಳ್ಳಾಪುರ ನಡುವೆ ರೈಲು ಸಂಪರ್ಕ ಕಲ್ಪಿಸಲಾಗುವುದು. ಮೂರನೇ ಹಂತದ ಯೋಜನೆ ಇನ್ನೂ ಅಂತಿಮವಾಗಿಲ್ಲ. ಒಟ್ಟಾರೆ ಉಪ ನಗರ ರೈಲು ಯೋಜನೆಯಿಂದ 25 ಲಕ್ಷ ಜನರಿಗೆ ಅನುಕೂಲ­ವಾಗ­ಲಿದೆ ಎಂದರು. ಯೋಜನಾ ವೆಚ್ಚದಲ್ಲಿ ಶೇ 50ರಷ್ಟನ್ನು ಕೇಂದ್ರ, ಶೇ 50ರಷ್ಟನ್ನು ರಾಜ್ಯ ಸರ್ಕಾರ ಭರಿಸಲಿದೆ. ಮುಂಬರುವ ರೈಲ್ವೆ ಬಜೆಟ್ ನಲ್ಲಿ ಈ ಯೋಜನೆ ಸೇರ್ಪಡೆಯಾಗುವ ವಿಶ್ವಾಸವಿದೆ. ಕೇಂದ್ರದ ಅನುಮತಿ ದೊರೆತ ಕೂಡಲೇ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.