ADVERTISEMENT

ಬಂದ್‌ಗೆ ಬೆಂಬಲ ನೀಡಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 9:35 IST
Last Updated 13 ಫೆಬ್ರುವರಿ 2011, 9:35 IST

ಶ್ರೀನಿವಾಸಪುರ: ಅವಿಭಾಜಿತ ಕೋಲಾರ ಜಿಲ್ಲೆಯಲ್ಲಿ ಫೆ.14 ರಂದು ಶಾಶ್ವತ ನೀರಾವರಿಗಾಗಿ ಆಗ್ರಹಿಸಿ ನಡೆಸುತ್ತಿರುವ ಬಂದ್‌ಗೆ ಎಲ್ಲ ಪಕ್ಷಗಳೂ ಬೆಂಬಲ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮನವಿ ಮಾಡಿದರು.
 
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ರ್ಏಡಿಸಲಾಗಿದ್ದ ಸರ್ವಪಕ್ಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಜನ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಆದರೆ ಅದು ಆಳುವ ಸರ್ಕಾರಗಳ ಕಣ್ಣಿಗೆ ಬೀಳುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಭಟನೆಯ ದಾರಿ ಹಿಡಿಯದೆ ಅನ್ಯ ಮಾರ್ಗವಿಲ್ಲ ಎಂದು ಹೇಳಿದರು.
  ಪ್ರತಿಭಟನೆ ಒಂದು ಬಂದ್‌ಗೆ ಸೀಮಿತಗೊಳ್ಳಬಾರದು. ಅದು ಉದ್ದೇಶ ಪೂರ್ಣಗೊಳ್ಳುವ ವರೆಗೆ ಮುಂದುವರಿಯಬೇಕು. ವ್ಯರ್ಥವಾಗಿ ಸಮುದ್ರಕ್ಕೆ ಹರಿದು ಹೋಗುತ್ತಿರುವ ನದಿ ನೀರನ್ನು ಈ ಭಾಗಕ್ಕೆ ಹರಿಸಲು ಸರ್ಕಾರ ಮೀನ ಮೇಷ ಎಣಿಸುತ್ತಿದೆ. ನದಿ ಭಾಗದ ಕೆಲವು ಮುಖಂಡರು ಈ ಯೋಜನೆಗೆ ಅಡ್ಡಗಾಲು ಹಾಕುತ್ತಿದ್ದಾರೆ. ಈ ಎಡರು ತೊಡರುಗಳನ್ನು ನಿವಾರಿಸಬೇಕಾದರೆ ಈ ಭಾಗದ ಎಲ್ಲ ವರ್ಗದ ಜನ ಒಂದಾಗಿ ಹೋರಾಟಕ್ಕೆ ಇಳಿಯಬೇಕು ಎಂದು ಹೇಳಿದರು.
 
ರಾಜಕೀಯ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು, ರೈತರು, ಕಾರ್ಮಿಕರು, ವ್ಯಾಪಾರಿಗಳು, ಸರ್ಕಾರಿ ನೌಕರರು ಹೀಗೆ ಸಮಾಜದ ಎಲ್ಲ ವರ್ಗದ ಜನ ಸಂಪೂರ್ಣ ಶಾಂತಿಯುತ ಬಂದ್‌ಗೆ ಸಹಕರಿಸಬೇಕು. ಬಂದ್ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಬೇಕು ಎಂದು ಕೋರಿದರು.

  ಕಾಂಗ್ರೆಸ್ ಮುಖಂಡ ಬಿ.ವೆಂಕಟರೆಡ್ಡಿ, ಜೆಡಿಎಸ್ ಮುಖಂಡರಾದ ಜಿಪಂ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸ್, ಮಾಜಿ ಸದಸ್ಯ ಜಿ.ರಾಜಣ್ಣ, ಕೆ.ಕೆ.ಮಂಜು, ತೂಪಲ್ಲಿ ಮಧು, ಬಿಜೆಪಿ ಮುಖಂಡರಾದ ಜಯರಾಮರೆಡ್ಡಿ, ಇ.ಶಿವಣ್ಣ, ಕೊಟ್ರಗುಳಿ ನಾರಾಯಣಸ್ವಾಮಿ, ಪಟ್ಟಣ ವ್ಯಾಪಾರಿಗಳ ಸಂಘದ ಮುಖ್ಯಸ್ಥರಾದ ವೈ.ಆರ್.ಶಿವಪ್ರಕಾಶ್, ಸೂರ್ಯನಾರಾಯಣಶೆಟ್ಟಿ, ಮುಖಂಡರಾದ ಇ.ನಾರಾಯಣಸ್ವಾಮಿ, ಕೊಂಡಸಂದ್ರ ಶಿವಾರೆಡ್ಡಿ, ನಿವೃತ್ತ ಪ್ರಾಂಶುಪಾಲ ಮುನಿವೆಂಕಟರೆಡ್ಡಿ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ನಾಗರಾಜ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಸಿ.ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.