ADVERTISEMENT

ಬಯಲು ತುಂಬಿದ ಪಾರ್ಥೇನಿಯಂ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 8:38 IST
Last Updated 23 ಅಕ್ಟೋಬರ್ 2017, 8:38 IST
ಶ್ರೀನಿವಾಸಪುರ ಹೊರ ವಲಯದ ಗದ್ದೆ ಬಯಲಲ್ಲಿ ದಟ್ಟವಾಗಿ ಬೆಳೆದಿರುವ ಪಾರ್ಥೇನಿಯಂ
ಶ್ರೀನಿವಾಸಪುರ ಹೊರ ವಲಯದ ಗದ್ದೆ ಬಯಲಲ್ಲಿ ದಟ್ಟವಾಗಿ ಬೆಳೆದಿರುವ ಪಾರ್ಥೇನಿಯಂ   

ಶ್ರೀನಿವಾಸಪುರ: ತಾಲ್ಲೂಕಿನ ರಾಯಲ್ಪಾಡ್‌ ಸಮೀಪದ ಗುಡ್ಡಗಾಡಿನಲ್ಲಿ ಕಾಡಿನ ಗಿಡಗಳಿಗೆ ಬಂತೆ ಹುಳುವಿನ ಕಾಟ ಹೆಚ್ಚಿದೆ. ಅವು ಯಳಚಿಯಂತಹ ಕೆಲವು ಆಯ್ದ ಗಿಡಗಳ ಎಲೆ ತಿಂದು ನಾಶ ಮಾಡುತ್ತಿವೆ.

ಕಾಡಿನ ಗಿಡಗಳೂ ಸಹ ಹುಳು ಬಾಧೆಯಿಂದ ಎಲೆ ಕಳೆದುಕೊಳ್ಳುತ್ತಿವೆ. ವಿಶೇಷವಾಗಿ ಯಳಚಿ ಗಿಡಗಳಿಗೆ ಬಂತೆ ಹುಳುಗಳ ಕಾಟ ಹೆಚ್ಚಿದೆ. ಪೊದೆಯಾಕಾರವಾಗಿ ಬೆಳೆಯುವ ಯಳಚಿ ಗಿಡಗಳು ಮೇಲೆ ಲೆಕ್ಕವಿಲ್ಲದಷ್ಟು ಬಂತೆ ಹುಳುಗಳು ಕಾಣಿಸಿಕೊಂಡು ಎಲೆಗಳನ್ನು ತಿಂದು ತೇಗುತ್ತಿವೆ.

’ಕಾಡಿನ ಗಿಡಗಳ ಮೇಲೆ ಕಾಣಿಸಿಕೊಂಡಿರುವ ಬಂತೆ ಹುಳುಗಳು ರಾಗಿ ಹಾಗೂ ಅವರೆ ಬೆಳೆಗೆ ಹೆಚ್ಚು ಹಾನಿ ಉಂಟುಮಾಡುತ್ತವೆ. ಅವೇನಾದರೂ ಸಮೀಪದ ಹೊಲಗಳತ್ತ ಹರಿದು ಬಂದರೆ ಅವರೆ ಎಲೆ ಹಾಗೂ ರಾಗಿ ತೆನೆಗೆ ಹೆಚ್ಚಿನ ಹಾನಿ ಸಂಭವಿಸುವ ಅಪಾಯವಿದೆ’ ಎಂದು ಚಿಂತಮಾನಿಪಲ್ಲಿ ಗ್ರಾಮದ ರೈತ ನರಸಿಂಹನಾಯಕ್‌ ಆತಂಕ ವ್ಯಕ್ತಪಡಿಸುತ್ತಾರೆ.

ADVERTISEMENT

ಮಾವಿನ ತೋಟಗಳು ಹಾಗೂ ಬಿತ್ತನೆಯಾಗದ ಜಮೀನಲ್ಲಿ ಕಳೆ ಗಿಡಗಳು ದಟ್ಟವಾಗಿ ಬೆಳೆದು ನಿಂತಿವೆ. ಅದರಲ್ಲೂ ಪಾರ್ಥೇನಿಯಂ ಹುಲುಸಾಗಿ ಬೆಳೆದು ಸಮಸ್ಯೆ ಸೃಷ್ಟಿಸಿದೆ. ಪಾರ್ಥೇನಿಯಂ ಗಿಡ ಕೀಳಲು ಜನ ಮುಂದೆ ಬರುವುದಿಲ್ಲ. ಕಾರಣ ಅದು ಜನರ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುತ್ತದೆ.

ಪಾರ್ಥೇನಿಯಂ ಗಿಡಗಳಲ್ಲಿ ದಟ್ಟವಾಗಿ ಹೂ ಕಾಣಿಸಿಕೊಂಡಿದೆ. ಸಾಮಾನ್ಯವಾಗಿ ಪಾರ್ಥೇನಿಯಂ ಗಿಡಗಳಿಗೆ ಒಂದು ಜಾತಿಯ ಕೀಟ ಸೇರುತ್ತದೆ. ಅದು ಎಲೆಗಳನ್ನು ತಿಂದು ಬೆಳವಣಿಗೆ ಕುಂಠಿತಗೊಳಿಸುತ್ತದೆ. ಆದರೆ ಈ ಬಾರಿ ಯಾವುದೇ ಕೀಟ ಪಾರ್ಥೇನಿಯಂ ಗಿಡ ಆಶ್ರಯಿಸಿ ಬಂದಿಲ್ಲ. ಕೆಲವು ರೈತರು ಕಳೆ ನಾಶಕ ಸಿಂಪರಣೆ ಮಾಡುತ್ತಿದ್ದಾರೆ.

ಈ ಬಾರಿ ತಾಲ್ಲೂಕಿನಾದ್ಯಂತ ರಾಗಿ ಬೆಳೆ ಹುಲುಸಾಗಿ ಬೆಳೆದಿದೆ. ತೆನೆ ವಿವಿಧ ಹಂತದಲ್ಲಿದೆ. ಎರಡು ಹಂತದಲ್ಲಿ ಬಿತ್ತನೆ ಮಾಡಲಾದ ಹೊಲಗಳು ಕಾಳು ಕಟ್ಟುತ್ತಿವೆ. ಕೆಲವು ಕಡೆಗಳಲ್ಲಿ ರಾಗಿ ತೆನೆಗೆ ಹುಳುವಿನ ಕಾಟ ಕಾಣಿಸಿಕೊಂಡಿವೆ.

ರೈತರು ಇದೇ ಮೊದಲ ಬಾರಿಗೆ ಕೃಷಿ ಇಲಾಖೆ ಅಧಿಕಾರಿಗಳ ಸಲಹೆ ಮೇರೆಗೆ ರಾಗಿ ಹೊಲಗಳಿಗೆ ಔಷಧ ಸಿಂಪರಣೆ ಮಾಡುತ್ತಿದ್ದಾರೆ. ಆದರೆ ತಾಲ್ಲೂಕಿನ ಉತ್ತರ ಭಾಗದ ಗುಡ್ಡಗಾಡಿನ ಅಂಚಿನ ಬೆಳೆಗಳಿಗೆ ಹೊಸ ಸಮಸ್ಯೆ ಪ್ರಾರಂಭವಾಗುವ ಸೂಚನೆ ಕಂಡುಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.