ADVERTISEMENT

ಬರದ ಜಿಲ್ಲೆಗಳಲ್ಲಿ ಹಾಲಿನ ಹೊಳೆ

ಹಾಲು ಉತ್ಪಾದನೆ ಹೆಚ್ಚಳ: ನಿತ್ಯ 10.80 ಲಕ್ಷ ಗಡಿ ದಾಟಿದ ಹಾಲು ಸಂಗ್ರಹಣಾ ಪ್ರಮಾಣ, ರೈತರ ಮೊಗದಲ್ಲಿ ಸಂತಸ

ಜೆ.ಆರ್.ಗಿರೀಶ್
Published 1 ಜೂನ್ 2018, 13:38 IST
Last Updated 1 ಜೂನ್ 2018, 13:38 IST
ಕೋಲಾರದ ಕೋಚಿಮುಲ್‌ ಘಟಕದಲ್ಲಿ ಕಾರ್ಮಿಕರು ಹಾಲಿನ ಪ್ಯಾಕೆಟ್‌ ಜೋಡಿಸುತ್ತಿರುವುದು
ಕೋಲಾರದ ಕೋಚಿಮುಲ್‌ ಘಟಕದಲ್ಲಿ ಕಾರ್ಮಿಕರು ಹಾಲಿನ ಪ್ಯಾಕೆಟ್‌ ಜೋಡಿಸುತ್ತಿರುವುದು   

ಕೋಲಾರ: ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಜೀವಜಲಕ್ಕೆ ಬರ ಇರಬಹುದು. ಆದರೆ, ಹಾಲಿಗೆ ಬರವಿಲ್ಲ. ಬರಪೀಡಿತ ಜಿಲ್ಲೆಗಳೆಂಬ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಈಗ ಹಾಲಿನ ಹೊಳೆಯೇ ಹರಿಯುತ್ತಿದೆ.

ಹೈನುಗಾರಿಕೆಯೇ ಜೀವನಾಡಿಯಾಗಿರುವ ಅವಳಿ ಜಿಲ್ಲೆಗಳಲ್ಲಿ ಹಾಲಿನ ಉತ್ಪಾದನೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದ್ದು, ದಿನನಿತ್ಯದ ಹಾಲು ಸಂಗ್ರಹಣೆ ಪ್ರಮಾಣ 10.80 ಲಕ್ಷದ ಗಡಿ ದಾಟಿದೆ. ಹಿಂದಿನ ವರ್ಷದ ಮೇ ತಿಂಗಳಲ್ಲಿ ಸರಾಸರಿ ಹಾಲು ಶೇಖರಣೆ ಪ್ರಮಾಣ 10.37 ಲಕ್ಷವಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ 44 ಸಾವಿರ ಲೀಟರ್‌ ಹೆಚ್ಚಳವಾಗಿದೆ.

ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ವ್ಯಾಪ್ತಿಯ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1,840 ಪ್ರಾಥಮಿಕ ಹಾಲು ಸಹಕಾರ ಸಂಘಗಳಿವೆ. 2.83 ಲಕ್ಷ ಹಾಲು ಉತ್ಪಾದಕರು ಒಕ್ಕೂಟದ ಸದಸ್ಯರಾಗಿದ್ದು, ಹಾಲು ಸಂಗ್ರಹಣೆಯಲ್ಲಿ ಕೋಚಿಮುಲ್‌ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ.

ADVERTISEMENT

ದಶಕದ ಕಾಲ ವರುಣ ದೇವನ ಅವಕೃಪೆಗೆ ತುತ್ತಾಗಿದ್ದ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೈತರಿಗೆ ಕೃಷಿ ನಿರ್ವಹಣೆ ಕಷ್ಟವಾಯಿತು. ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದು, 2 ಸಾವಿರ ಅಡಿ ಆಳ ಕೊಳವೆ ಬಾವಿ ಕೊರೆದರೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಯಿತು. ಹೀಗಾಗಿ ರೈತರು ಕೃಷಿಯ ಬದಲಿಗೆ ಹೈನುಗಾರಿಕೆಯತ್ತ ಮುಖ ಮಾಡಿದ್ದಾರೆ. ಕೃಷಿಗೆ ಪರ್ಯಾಯವಾಗಿ ಹೈನುಗಾರಿಕೆಯು ಪ್ರಮುಖ ಆದಾಯ ಮೂಲವಾಗಿದೆ.

ಉತ್ತಮ ಮಳೆ: ಅವಳಿ ಜಿಲ್ಲೆಗಳಲ್ಲಿ ಹಿಂದಿನ ವರ್ಷದ ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ಹಾಗೂ ಈ ಬಾರಿ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಉತ್ತಮ ಮಳೆಯಾಗಿರುವುದರಿಂದ ಎಲ್ಲೆಡೆ ಹಸಿರು ಮೇವು ಬಂದಿದೆ. ಜಾನುವಾರುಗಳಿಗೆ ಸದ್ಯಕ್ಕೆ ಮೇವು ಮತ್ತು ಕುಡಿಯುವ ನೀರಿನ ಸಮಸ್ಯೆ ಇಲ್ಲ. ಜಾನುವಾರುಗಳ ಮಾಲೀಕರು ಮೇವು ಮತ್ತು ನೀರಿನ ಚಿಂತೆಯಿಂದ ನಿರಾಳರಾಗಿದ್ದಾರೆ.

ಹವಾಮಾನ ತಂಪಾಗಿರುವುದರಿಂದ ಜಾನುವಾರುಗಳು ಆರೋಗ್ಯಕರವಾಗಿದ್ದು, ಜಿಡ್ಡು ಮತ್ತು ಘನ ಕೊಬ್ಬಿನ ಅಂಶವನ್ನು (ಎಸ್‌ಎನ್‌ಎಫ್‌) ಒಳಗೊಂಡ ಗುಣಮಟ್ಟದ ಹಾಲು ಉತ್ಪಾದನೆ ಪ್ರಮಾಣ ಹೆಚ್ಚಳವಾಗಿದೆ. ಮೇವು ಸಮೃದ್ಧವಾಗಿರುವುದರಿಂದ ಜಾನುವಾರುಗಳು ದಷ್ಟಪುಷ್ಟವಾಗಿ ಬೆಳೆದಿದ್ದು, ಹೆಚ್ಚಿನ ಪ್ರಮಾಣದಲ್ಲಿ ಹಾಲು ಕೊಡುತ್ತಿವೆ. ಇದರಿಂದ ಸಂಪಾದನೆ ಹೆಚ್ಚಿ ರೈತರ ಮೊಗದಲ್ಲಿ ಸಂತಸ ಮೂಡಿದೆ.

ಮಾರಾಟ ವೃದ್ಧಿ: ಹಾಲಿನ ಉತ್ಪಾದನೆಗೆ ಅನುಗುಣವಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟವೂ ವೃದ್ಧಿಸಿದೆ. ಒಕ್ಕೂಟದಿಂದ ಬೆಂಗಳೂರಿನ ಮದರ್‌ ಡೇರಿಗೆ ಪ್ರತಿನಿತ್ಯ 1.30 ಲಕ್ಷ ಲೀಟರ್‌ ಹಾಗೂ ಖಾಸಗಿ ಡೇರಿಗಳಿಗೆ 1 ಲಕ್ಷ ಲೀಟರ್‌ ಹಾಲು ಕಳುಹಿಸಲಾಗುತ್ತಿದೆ. 2.83 ಲಕ್ಷ ಲೀಟರ್‌ ಸ್ಯಾಚೆಟ್‌ ಹಾಲು, 2.08 ಲಕ್ಷ ಲೀಟರ್‌ ಗುಡ್‌ ಲೈಫ್‌ ಹಾಲು ಮಾರಾಟವಾಗುತ್ತಿದೆ. 31 ಸಾವಿರ ಲೀಟರ್‌ ಹಾಲು ಮೊಸರು ಉತ್ಪಾದನೆಗೆ, 5 ಸಾವಿರ ಲೀಟರ್‌ ಹಾಲು ಚೀಸ್‌ ಉತ್ಪಾದನೆಗೆ ಬಳಕೆಯಾಗುತ್ತಿದೆ. ಕ್ಷೀರ ಭಾಗ್ಯ ಯೋಜನೆ, ಹಾಲಿನ ಪುಡಿ ತಯಾರಿಕೆ, ಬೆಣ್ಣೆ ಮತ್ತು ತುಪ್ಪ ಉತ್ಪಾದನೆಗೆ 2.57 ಲಕ್ಷ ಲೀಟರ್ ಹಾಲು ಬಳಕೆಯಾಗುತ್ತಿದೆ.

ದರ ಹೆಚ್ಚಳ ವಾಪಸ್‌

ಕೋಚಿಮುಲ್‌ ಆಡಳಿತ ಮಂಡಳಿಯು ಬೇಸಿಗೆ ಹಿನ್ನೆಲೆಯಲ್ಲಿ ಮಾರ್ಚ್‌ 16ರಿಂದ ಮೇ 31ರವರೆಗೆ ಅನ್ವಯವಾಗುವಂತೆ ಹಾಲು ಖರೀದಿ ದರದಲ್ಲಿ ₹ 1 ಹೆಚ್ಚಳ ಮಾಡಿತ್ತು. ಇದೀಗ ಹಾಲು ಉತ್ಪಾದನೆ ಹೆಚ್ಚಿರುವುದರಿಂದ ಒಕ್ಕೂಟವು ದರ ಹೆಚ್ಚಳದ ಕ್ರಮ ಹಿಂಪಡೆದಿದೆ. ಇದರೊಂದಿಗೆ ಹಾಲು ಖರೀದಿ ದರ ಲೀಟರ್‌ಗೆ ₹ 24 ಆಗಿದ್ದು, ಪರಿಷ್ಕೃತ ದರ ಶುಕ್ರವಾರದಿಂದ (ಜೂನ್‌ 1) ಜಾರಿಗೆ ಬರಲಿದೆ.

**
ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಒಕ್ಕೂಟಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಾಲು ಬರುತ್ತಿದೆ. ಬೇಸಿಗೆ ಕಾರಣಕ್ಕೆ ರೈತರ ಹಿತದೃಷ್ಟಿಯಿಂದ ಮಾರ್ಚ್‌ನಲ್ಲಿ ಹಾಲು ಖರೀದಿ ಹೆಚ್ಚಿಸಿದ್ದೆವು
ಎನ್‌.ಜಿ.ಬ್ಯಾಟಪ್ಪ, ಕೋಚಿಮುಲ್‌ ಅಧ್ಯಕ್ಷ 
**
ಜಿಲ್ಲೆಯಲ್ಲಿ ಎರಡು ತಿಂಗಳಿಂದ ಉತ್ತಮ ಮಳೆಯಾಗಿರುವುದರಿಂದ ಎಲ್ಲೆಡೆ ಹಸಿ ಮೇವು ಚೆನ್ನಾಗಿ ಬಂದಿದೆ. ಜಾನುವಾರುಗಳಿಗೆ ಮೇವು, ನೀರಿನ ಸಮಸ್ಯೆ ಇಲ್ಲದ ಕಾರಣ ಹಾಲಿನ ಉತ್ಪಾದನೆ ಹೆಚ್ಚಿದೆ 
ಲಕ್ಷ್ಮಿ, ರೈತ ಮಹಿಳೆ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.