ADVERTISEMENT

ಬಸ್‌ ಚಾಲಕನ ಮೇಲೆ ಲಾಂಗ್‌ನಿಂದ ಹಲ್ಲೆ; ಬಂಧನ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 6:35 IST
Last Updated 4 ಡಿಸೆಂಬರ್ 2013, 6:35 IST

ಕೆಜಿಎಫ್: ಬಸ್ ನಿಲ್ದಾಣ ದಲ್ಲಿ ಬಸ್‌ಗೆ ದಾರಿಬಿಡುವಂತೆ ಕೇಳಿದ ಬಸ್ ಚಾಲಕನ ಮೇಲೆ ಇಬ್ಬರು ಲಾಂಗ್‌ನಿಂದ ಹಲ್ಲೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.

ರಾಬರ್ಟಸನ್‌ಪೇಟೆ ನಗರಸಭೆ ಬಸ್ ನಿಲ್ದಾಣದಲ್ಲಿ ಸಂಜೆ 4 ಗಂಟೆ ವೇಳೆ ಲಾಂಗ್ ಹಿಡಿದು ಬಸ್ ಚಾಲಕನನ್ನು ಇಬ್ಬರು ದುಷ್ಕರ್ಮಿ ಗಳು ಅಟ್ಟಿಸಿಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಪ್ರಯಾಣಿಕರು ಭೀತಿಗೊಂಡಿದ್ದರು.

ಬಸ್ ನಿಲ್ದಾಣದಿಂದ ಹೊರ ಹೋಗಲು ಖಾಸಗಿ ಬಸ್ ನಿಂತಿತ್ತು. ಹಿಂಭಾಗದಲ್ಲಿದ್ದ ಕೆಎಸ್‌ಆರ್‌ಟಿಸಿ ಬಸ್ ಚಾಲಕ ದಾರಿಗಾಗಿ ಹಾರ್ನ್ ಮಾಡುತ್ತಿದ್ದ. ಈ ಸಂದರ್ಭ ಮುಂದೆ ಇದ್ದ ಬಸ್ ಚಾಲಕನ ಜೊತೆ ಇಬ್ಬರು ಜಗಳ ವಾಡುತ್ತಿದ್ದರು. ಜಗಳ ಕಂಡು ಅಸಹನೆ ವ್ಯಕ್ತಪಡಿಸಿದ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮುನಿಸ್ವಾಮಿ ವಿರುದ್ಧ ಕೋಪಗೊಂಡ ಈ ಇಬ್ಬರು ಲಾಂಗ್ ತೆಗೆದು ಆತನ ಮೇಲೆ ಹಲ್ಲೆ ನಡೆಸಲು ಯತ್ನಿಸಿದರು. ದುಷ್ಕರ್ಮಿಗಳಿಂದ ಪಾರಾಗಲು ಚಾಲಕ ಬಸ್ ನಿಲ್ದಾಣದಲ್ಲಿ ಓಡಲು ಶುರು ಮಾಡಿದ. ಅವನನ್ನು ಅಟ್ಟಿಸಿಕೊಂಡು ಹೋದ ದುಷ್ಕರ್ಮಿಗಳು ಹೊಟ್ಟೆಗೆ ತಿವಿದಿದ್ದಾರೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಾರ್ವಜನಿಕರ ನೆರವಿನಿಂದ ಇಬ್ಬರು ದುಷ್ಕರ್ಮಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳನ್ನು ಅಂಬೇಡ್ಕರ್ ನಗರ ನಿವಾಸಿ ಸುರೇಶ್ ಮತ್ತು ಸಂಜಯಗಾಂಧಿ ನಗರ ನಿವಾಸಿ ಶ್ರಿನಿವಾಸನ್ ಎಂದು ಗುರುತಿಸಲಾಗಿದೆ. ರಾಬರ್ಟಸನ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.