ಕೋಲಾರ: ಇದುವರೆಗೆ ನಡೆಸಿರುವ ಮೂರು ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯಲ್ಲೂ ಬಾಲಕಿಯರು ಮುಂದಿದ್ದು, ಬಾಲಕರು ಹಿಂದೆಯೇ ಉಳಿದಿದ್ದಾರೆ. ಮುಖ್ಯ ಪರೀಕ್ಷೆ ಇನ್ನು ಒಂಬತ್ತು ದಿನವಿದ್ದು ಅಷ್ಟರೊಳಗೆ ಬಾಲಕರ ಸಾಮರ್ಥ್ಯ ಹೆಚ್ಚಿಸಲು ಪ್ರಯತ್ನಪಡಬೇಕಿದೆ ಎಂದು ಪರೀಕ್ಷೆಯ ನೋಡೆಲ್ ಅಧಿಕಾರಿ ಎ.ಎನ್.ನಾಗೇಂದ್ರ ಪ್ರಸಾದ್ ಹೇಳಿದರು.
ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಮಂಗಳವಾರ, 3ನೇ ಪೂರ್ವಸಿದ್ಧತಾ ಪರೀಕ್ಷೆ ವಿಶ್ಲೇಷಣೆಗೆಂದು ಏರ್ಪಡಿಸಿದ್ದ ಮುಖ್ಯ ಶಿಕ್ಷಕರ ಸಭೆಯಲ್ಲಿ ಮಾತನಾಡಿ, ಮೊದಲ ಪರೀಕ್ಷೆಯಲ್ಲಿ ಬಾಲಕಿಯರಿಗಿಂತಲೂ ಬಾಲಕರು ಫಲಿತಾಂಶದಲ್ಲಿ ಶೇ 10ರಷ್ಟು ವ್ಯತ್ಯಾಸ ಕಂಡುಬಂದಿತ್ತು. ಈಗ ಅದು ಶೇ 4ಕ್ಕೆ ಇಳಿದಿದೆ. ಅದನ್ನೂ ಸರಿದೂಗಿಸುವ ಪ್ರಯತ್ನ ನಡೆಯಬೇಕು ಎಂದರು.
ವಿಶೇಷವಾಗಿ ಬಂಗಾರಪೇಟೆ, ಕೆಜಿಎಫ್ ಶೈಕ್ಷಣಿಕ ಬ್ಲಾಕ್‌ಗಳಲ್ಲಿ ಬಾಲಕರು ಹಿಂದೆ ಉಳಿದಿದ್ದಾರೆ. ಅದಕ್ಕೆ ಕಾರಣಗಳನ್ನು ಪತ್ತೆ ಹಚ್ಚಿ ಸೂಕ್ತ ಪರಿಹಾರೋಪಾಯ ಜಾರಿಗೆ ತರಬೇಕು ಎಂದು ಹೇಳಿದರು.
ಸರ್ಕಾರಿ ಶಾಲೆ ಹೆಚ್ಚು: ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಿರುವುದರಿಂದ ಈ ಶಾಲೆಗಳ ಫಲಿತಾಂಶ ಹೆಚ್ಚಳಕ್ಕೆ ಒತ್ತು ನೀಡಿದಾಗ ಮಾತ್ರ ಜಿಲ್ಲೆಯ ಫಲಿತಾಂಶದಲ್ಲಿ ಹೆಚ್ಚಳ ಸಾಧ್ಯವಾಗುತ್ತದೆ. ಜಿಲ್ಲೆಯ ಒಟ್ಟು 20,382 ವಿದ್ಯಾರ್ಥಿಗಳ ಪೈಕಿ ಸರ್ಕಾರಿ ಶಾಲೆಗಳ ಮಕ್ಕಳೇ 9926 ಮಂದಿ ಇದ್ದಾರೆ. ಹೀಗಾಗಿ ಶಿಕ್ಷಕರು ಕನಿಷ್ಠ ಕಲಿಕೆಯ ಮಕ್ಕಳ ಕಡೆ ಹೆಚ್ಚಿನ ಗಮನ ನೀಡಬೇಕು ಎಂದು ಕೋರಿದರು.
ಗಣಿತ, ಇಂಗ್ಲಿಷ್ ವಿಷಯಗಳಲ್ಲಿ ಹೆಚ್ಚಿನ ಹಿನ್ನಡೆ ಕಂಡು ಬರುತ್ತಿದ್ದು, ಇದು ಒಟ್ಟಾರೆ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ. ಈ ವಿಷಯಗಳ ಶಿಕ್ಷಕರು ಮಕ್ಕಳ ಕಡೆ ಹೆಚ್ಚಿನ ಗಮನ ನೀಡಬೇಕು ಎಂದು ಸೂಚಿಸಿದರು.
ನೆಲದಲ್ಲಿ ಪರೀಕ್ಷೆ ಬೇಡ: ಸಭೆ ಉದ್ಘಾಟಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ವಿ.ಪದ್ಮನಾಭ, ಮಾ.27ರಿಂದ ಪರೀಕ್ಷೆ ಆರಂಭವಾಗಲಿದೆ. ಪರೀಕ್ಷೆಯಲ್ಲಿ ಯಾವುದೇ ವಿದ್ಯಾರ್ಥಿಯನ್ನು ನೆಲದಲ್ಲಿ ಕುಳ್ಳಿರಿಸಿ ಪರೀಕ್ಷೆ ಬರೆಸುವಂತಿಲ್ಲ. ಅಂಥ ಪರಿಸ್ಥಿತಿ ನಿರ್ಮಾಣವಾದರೆ ಕೇಂದ್ರದ ಮುಖ್ಯ ಅಧೀಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗವುದು ಎಂದು ಎಚ್ಚರಿಕೆ ನೀಡಿದರು.
ಪರೀಕ್ಷಾ ಕೇಂದ್ರಗಳಿಗೆ ಅಗತ್ಯವಾದ ಡೆಸ್ಕ್‌ಗಳನ್ನು ಸಂಬಂಧಿಸಿದ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳು ಒದಗಿಸಿ ಸಹಕರಿಸಬೇಕು, ಗೊಂದಲಗಳಿಗೆ ಅವಕಾಶ ನೀಡಬಾರದು, ಸಿಟ್ಟಿಂಗ್ ಜಾಗೃತದಳದ ಸಿಬ್ಬಂದಿಯನ್ನು, ಕೊಠಡಿ ಮೇಲ್ವಿಚಾರಕರಾಗಿ ನೇಮಕಗೊಂಡ ಶಿಕ್ಷಕರನ್ನು ಮುಖ್ಯ ಶಿಕ್ಷಕರು ಬಿಡುಗಡೆ ಮಾಡಿ ಸೂಚಿಸಿದ ಸ್ಥಳಕ್ಕೆ ಹಾಜರಾಗುವಂತೆ ಸೂಚಿಸಬೇಕು ಎಂದರು.
ಏ.19 ರಿಂದ ಮೌಲ್ಯಮಾಪನ ಕಾರ್ಯ ನಡೆಯಲಿದ್ದು, ಅದಕ್ಕೆ ಹಾಜರಾಗದಿದ್ದರೆ ಶಿಕ್ಷಕರ ವಿರುದ್ಧಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.
ರಜೆ ನೀಡದಿರಿ: ಪರೀಕ್ಷೆ ಮುಗಿಯುವವರೆಗೂ ವಿದ್ಯಾರ್ಥಿಗಳಿಗೆ ರಜೆ ನೀಡಬಾರದು. ಶಿಕ್ಷಕರು ನಿರಂತರ ಸಂಪರ್ಕದಲ್ಲಿರಬೇಕು ಎಂದು ಶಿಕ್ಷಣಾಧಿಕಾರಿ ಕೆ.ಎಂ.ಜಯರಾಮರೆಡ್ಡಿ ಹೇಳಿದರು.
ಪರೀಕ್ಷಾ ಅವ್ಯವಹಾರ ನಡೆಯದಂತೆ ತಡೆಯಲು ಚಿಕ್ಕಬಳ್ಳಾಪುರ ಜಿಲ್ಲೆಯಿಂದಲೂ ಜಾಗೃತದಳ ಬರಲಿದೆ, ವಿನಾಕಾರಣ ಅನುಮಾನಗಳಿಗೆ ಅವಕಾಶ ನೀಡಬೇಡಿ. ಪರೀಕ್ಷೆಯ ಪಾವಿತ್ರ್ಯ ಕಾಪಾಡಬೇಕು. ವಿಷಯ ಶಿಕ್ಷಕರು ತಮ್ಮ ವಿಷಯದ ಪರೀಕ್ಷೆ ಇರುವ ದಿನ ಪರೀಕ್ಷಾ ಕೇಂದ್ರಕ್ಕೆ ಬರಲೇಬಾರದು ಎಂದು ಸೂಚಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ.ಜಗದೀಶ್, ಸುಬ್ರಹ್ಮಣ್ಯಂ, ದೇವರಾಜ್, ರಾಘವೇಂದ್ರ, ಕೃಷ್ಣಮೂರ್ತಿ ಮತ್ತು ಜಯರಾಜ್, ವಿಷಯ ಪರಿವೀಕ್ಷಕರಾದ ರಾಜಣ್ಣ, ವೆಂಕಟಸ್ವಾಮಿ, ಬಾಬು ಜನಾರ್ದನನಾಯ್ಡು ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.