ADVERTISEMENT

ಬಿಡುಗಡೆಯಾಗದ ಅನುದಾನ

ಎಚ್‌ಐವಿ ಸೋಂಕಿತರ ಮಕ್ಕಳ ಪಾಲನೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 9:53 IST
Last Updated 17 ಜುಲೈ 2013, 9:53 IST

ಕೋಲಾರ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಎಚ್‌ಐವಿ-ಏಡ್ಸ್ ಸೋಂಕಿತರ ಮಕ್ಕಳ ಪಾಲನೆಗಾಗಿ ಇರುವ ವಿಶೇಷ ಪಾಲನೆ ಯೋಜನೆಯ ಅನುದಾನ ಹಲವು ತಿಂಗಳಾದರೂ ಬಿಡುಗಡೆಯಾಗದಿರುವ ಸಂಗತಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ಲಸಿಕಾ ಕಾರ್ಯಪಡೆಯ ಸಭೆಯಲ್ಲಿ ಬೆಳಕಿಗೆ ಬಂತು.

ಜಿಲ್ಲೆಯಲ್ಲಿ  ಎಚ್‌ಐವಿ-ಏಡ್ಸ್ ಸೋಂಕಿತ 290 ಮಕ್ಕಳಿದ್ದಾರೆ. 18 ವರ್ಷ ವಯಸ್ಸಿನವರೆಗೆ ವಿವಿಧ ವಯೋಮಾದ ಮಕ್ಕಳಿಗೆ ಅನುದಾನ ನೀಡಬೇಕು ಎಂದು ಇಲಾಖೆಯ ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ರಾಜ್ಯ ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ ಎಂದು ಶಿಶು ಕಲ್ಯಾಣಾಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪ್ರಭಾರಿ ಜಿಲ್ಲಾಧಿಕಾರಿ ಡಾ.ವಿ.ವೆಂಕಟೇಶಮೂರ್ತಿ, ಮತ್ತೊಂದು ಪ್ರಸ್ತಾವನೆಯನ್ನು ಸಲ್ಲಿಸಿದರೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು.

ಮಾತ್ರೆ ವಿತರಣೆ:
ರಕ್ತಹೀನತೆಯಿಂದ ಬಳಲುವ ಮಕ್ಕಳಿಗೆ ಕಬ್ಬಿಣಾಂಶವುಳ್ಳ ಮಾತ್ರೆಗಳನ್ನು ನೀಡುವ ಕಾರ್ಯಕ್ರಮ ಜಿಲ್ಲೆಯಲ್ಲಿ ಜು.17ರಿಂದ ಆರಂಭವಾಗಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪ್ರಕಾಶ್‌ಕುಮಾರ ತಿಳಿಸಿದರು.

ಕಾರ್ಯಕ್ರಮವು ರಾಜ್ಯಾದ್ಯಂತ ಬುಧವಾರದಿಂದ ಆರಂಭವಾಗುತ್ತಿದೆ. ಪ್ರತಿ ಸೋಮವಾರ ಮಕ್ಕಳಿಗೆ ಮಾತ್ರೆ ವಿತರಿಸಲಾಗುವುದು ಎಂದರು.

ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 6ರಿಂದ 10ನೇ ತರಗತಿಯಲ್ಲಿರುವ 10ರಿಂದ 16 ವರ್ಷ ವಯಸ್ಸಿನ ಮಕ್ಕಳಿಗೆ ಮಾತ್ರ ಕಬ್ಬಿಣಾಂಶ ಮಾತ್ರವನ್ನು ನೀಡಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲೆಯ ಪ್ರತಿ ತಾಲ್ಲೂಕು ಮಟ್ಟದಲ್ಲೂ ಎರಡು ತಂಡಗಳನ್ನು ರಚಿಸಲಾಗಿದೆ ಎಂದರು.

ದೇಹದಲ್ಲಿ ಕಬ್ಬಿಣದ ಅಂಶ-ಹಿಮೋಗ್ಲೋಬಿನ್-10ರಿಂದ 12ರಷ್ಟಿದ್ದರೆ ಅದು ಸಮತೋಲಿತ ಪ್ರಮಾಣ. ಆದರೆ ಅದು 7ಕ್ಕಿಂತ ಕಡಿಮೆ ಇದ್ದರೆ ವ್ಯಕ್ತಿಯಲ್ಲಿ ಅತಿಯಾದ ರಕ್ತಹೀನತೆ ಇದೆ ಎಂದು ನಿರ್ಧರಿಸಲಾಗುತ್ತದೆ. ಅಂಥ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದರು.

ಜಿಲ್ಲೆಯ ವಿವಿಧ ತಾಲ್ಲೂಕು ಆರೋಗ್ಯಾಧಿಕಾರಿಗಳು ಮತ್ತು ಮಹಿಳಾ-ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.