ADVERTISEMENT

ಭಾಷಣ ಅರ್ಧಕ್ಕೆ ಮೊಟುಕು: ಸಂಘಟಕರ ಬಗ್ಗೆ ಅಧ್ಯಕ್ಷರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 19 ಜೂನ್ 2011, 7:30 IST
Last Updated 19 ಜೂನ್ 2011, 7:30 IST
ಭಾಷಣ ಅರ್ಧಕ್ಕೆ ಮೊಟುಕು: ಸಂಘಟಕರ ಬಗ್ಗೆ ಅಧ್ಯಕ್ಷರ ಅಸಮಾಧಾನ
ಭಾಷಣ ಅರ್ಧಕ್ಕೆ ಮೊಟುಕು: ಸಂಘಟಕರ ಬಗ್ಗೆ ಅಧ್ಯಕ್ಷರ ಅಸಮಾಧಾನ   

ಕೋಲಾರ: `102 ಕಳಶಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬರುವ ಸ್ವಾಗತವನ್ನು ಪಡೆಯುವ ನೈತಿಕತೆ ಯಾವ ಸರಸ್ವತಿ ಪುತ್ರರಿಗೂ ಇಲ್ಲ. ಅದು ಅರ್ಥಹೀನ ಸಂ್ರಪದಾಯ. ಅಂಥ ಸಂಪ್ರದಾಯಗಳನ್ನು ಸಾಹಿತ್ಯ ಪರಿಷತ್ತು ಮುರಿಯಬೇಕು~ ಎಂದು 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕೋಟಿಗಾನಹಳ್ಳಿ ರಾಮಯ್ಯ ಆಗ್ರಹಿಸಿದರು.

ಬಂಗಾರಪೇಟೆಯ  ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶನಿವಾರ ಸಮ್ಮೇಳನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಹಿತ್ಯ ಪರಿಷತ್ತಿನ ಕಾರ್ಯವೈಖರಿ ಮತ್ತು ಸಮ್ಮೇಳನಗಳ ರೂಪ-ರೇಷೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ವ್ಯಂಗ್ಯ, ಟೀಕೆ, ಆಕ್ರೋಶ, ಅಸಮಾಧಾನ, ಪ್ರತಿರೋಧ ಭಾವಗಳು ಅವರ ಮಾತುಗಳಲ್ಲಿ ತೂರಿಬಂದವು.

`ನೇಗಿಲ ಬುಡದ ಮೇಲೆ ಧರ್ಮ ಇರಬೇಕು ಎಂದು ಕುವೆಂಪು ಪ್ರತಿಪಾದಿಸಿದರು. ಇದು ರಾಜಕಾರಣಿಗಳಿಗೆ, ಸಮುದಾಯದ ಮುಂದಿನ ನಡೆಗಳಿಗೆ ದಾರಿದೀಪವಾಗಬೇಕು. ಆದರೆ, ಇಂದು ನೇಗಿಲ ಯೋಗಿ ಹಾಡು ಕೇಳಿದಾಗ ಮಾತ್ರ ರೈತ ನೆನಪಾಗುತ್ತಾನೆ. ಅಂದರೆ ನಾವು ಅಪಾಯದಲ್ಲಿದ್ದೇವೆ ಎಂದೇ ಅರ್ಥ. ಕೋಲಾರ ಇನ್ನೂ ಚಿನ್ನದ ಜಿಲ್ಲೆಯಾಗಿ ಉಳಿದಿಲ್ಲ. ಆದರೆ ಅದರ ಅರಿವು ಹಲವು ಸಾಹಿತಿಗಳಿಗೇ ಇಲ್ಲ. ಈಗಲೂ ಕೋಲಾರದ ಬಗ್ಗೆ ಚಿನ್ನದ ನಾಡು ಎಂದೇ ಬರೆಯುತ್ತಾರೆ~ ಎಂದು ಟೀಕಿಸಿದರು.

`ರಾಜಪ್ರಭುತ್ವದ ದ್ವಿಗ್ವಿಜಯ ಯಾತ್ರೆ ಮಾದರಿಯನ್ನು ಅನು ಸರಿಸಿ ಪರಿಷತ್ತು ರೂಪುಗೊಂಡಿತು. ಅದನ್ನು ಮೈಸೂರು ಒಡೆ ಯರು ರೂಪಿಸಿದರು. ಹೀಗಾಗಿಯೇ ಸಾಹಿತಿಗೂ ರಾಜನಿಗೆ ದೊರಕಿದಂಥದ್ದೇ ಉಪಚಾರ ದೊರಕಬೇಕು ಎಂಬ ವ್ಯಾಖ್ಯಾನ ಸಿದ್ಧವಾಗಿ ಸಂಪ್ರದಾಯವಾಗಿ ಮುಂದುವರಿದಿದೆ. ರಾಜಮಾರ್ಯದೆಯನ್ನು ಕಲಾಮರ್ಯಾದೆಯನ್ನಾಗಿ ಮಾಡಿದ ಕಾಲಘಟ್ಟದಲ್ಲೆ ಪರಿಷತ್ತು ರೂಪುಗೊಂಡಿತು ಎಂಬುದನ್ನು ಅರಿಯಬೇಕು~ ಎಂದರು.

ನೆಲದೊಡೆಯರ ಗುಡಿಗಳಲ್ಲಿ ಅಂಧಕಾರ ಕವಿದಿರುವಾಗ ಧರ್ಮಪ್ರೇರಿತ ರಾಜಕಾರಣ ಹೇಳುತ್ತಾ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿ ಎಂಬ ಸಂದೇಶವನ್ನು ನೀಡುವ ಕಾಲವಿದು. ಇಂಥ ಸಂದರ್ಭದಲ್ಲೆ, ಸರಸ್ವತಿಯನ್ನು ಬಂಧಿಸಿಡುವ ಪ್ರಯತ್ನ ನಿಲ್ಲದೇ ನಡೆದಿದೆ~ ಎಂದರು.

`ಉಪಕಾರ ಸ್ಮರಣೆಯೇ ಧರ್ಮ ಎಂಬ ನಯಸಂದೇಶದ ಮೂಲಕ ಸಮ್ಮೇಳನದ ಅಧ್ಯಕ್ಷರನ್ನು ಎದುರುಗೊಳ್ಳುವ ವಿವೇಕ ಇಲ್ಲಿನ ಜನಪ್ರತಿನಿಧಿಗಳಿಗೆ, ಪರಿಷತ್ ಪದಾಧಿಕಾರಿಗಳಿಗೆ ಇಲ್ಲ.  ಅಧ್ಯಕ್ಷರ ಭಾಷಣವನ್ನು ನಿಗದಿ ಮಾಡುವ ಮೂಲಕ ಗಂಭೀರ ಮಾತುಗಳನ್ನು ಸಭಿಕರು ಕೇಳದ ರೀತಿಯಲ್ಲಿ ಸಮ್ಮೇಳನ ಸಂಘಟಿಸಲಾಗಿದೆ~ ಎಂದ ಅಸಮಾಧಾನ ವ್ಯಕ್ತಪಡಿಸಿ ತಮ್ಮ ಭಾಷಣವನ್ನು ಅರ್ಧಕ್ಕೆ ಮೊಟುಕುಗೊಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.