ಕೋಲಾರ: ಮಂಗಳೂರಿನ ಹೋಂ ಸ್ಟೇನಲ್ಲಿ ಯುವತಿಯರ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿ ದೌರ್ಜನ್ಯ ಎಸಗಿರುವ ಕಿಡಿಗೇಡಿಗಳನ್ನು ದೇಶದ್ರೋಹ ಕಾಯ್ದೆಯಡಿ ಬಂಧಿಸಬೇಕು ಎಂದು ದಲಿತ ಸಂಘಟನೆಗಳ ಸಂಯುಕ್ತ ರಂಗದ ಪ್ರಮುಖ ಡಾ.ಎಂ.ಚಂದ್ರಶೇಖರ್ ಆಗ್ರಹಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹುಟ್ಟುಹಬ್ಬದ ಆಚರಣೆಯಲ್ಲಿದ್ದ ಯುವಕ-ಯುವತಿಯರ ಮೇಲೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ನಡೆಸಿರುವ ಹಲ್ಲೆ ಖಂಡಿಸುತ್ತೇವೆ ಎಂದರು.
ಹಿಂದುತ್ವ ಎಂಬ ಮುಖವಾಡ ಧರಿಸಿ ಭಾರತ ಸಂವಿಧಾನದ ಆಶಯಗಳನ್ನು ಮಣ್ಣುಪಾಲು ಮಾಡುತ್ತಿರುವ ಇಂಥ ಸಂಘಟನೆಗಳನ್ನು ನಿಷೇಧಿಸಬೇಕು. ಸರ್ಕಾರ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಾಲ ಮನ್ನಾ: ದಲಿತರ ಸಾಲ ಮನ್ನಾ ಮಾಡದ ಬಿಜೆಪಿ ಸರ್ಕಾರದಿಂದ ದಲಿತ ಸಚಿವರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳು, ಪ್ರಮುಖರು, ಕಾರ್ಯಕರ್ತರು ಪಕ್ಷವನ್ನು ತೊರೆಯಬೇಕು ಎಂದು ಆಗ್ರಹಿಸಿದರು.
ರೈತರಿಗೆ ಸಾಲಮನ್ನಾ ವಿಷಯದಲ್ಲಿ ರಾಜ್ಯದ ಬಹುತೇಕ ದಲಿತರಿಗೆ ಅನ್ಯಾಯವಾಗಿದೆ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮ, ರಾಷ್ಟ್ರೀಕೃತ ಮತ್ತು ಷೆಡ್ಯೂಲ್ಡ್ ಬ್ಯಾಂಕ್‌ಗಳು, ಕೇಂದ್ರ ಸರ್ಕಾರದ ಅಡಿಯಲ್ಲಿರುವ ಕೆಲವು ಹಣಕಾಸಿನ ಸಂಸ್ಥೆಗಳು ದಲಿತರಿಗೆ ನೀಡಿರುವ ಸಾಲದ ಮೊತ್ತ ಬಹಳ ಕಡಿಮೆ.
ಹೀಗಾಗಿ ದಲಿತರು ಪಡೆದಿರುವ ಎಲ್ಲ ಸಾಲವನ್ನೂ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು. ಮುನಿರಾಜು, ವಿ.ನಾರಾಯಣಸ್ವಾಮಿ, ವಿ.ಶ್ರೀನಿವಾಸ್, ಶ್ರೀರಂಗ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.