ADVERTISEMENT

ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 10:33 IST
Last Updated 11 ಜೂನ್ 2018, 10:33 IST

ಕೋಲಾರ: ‘ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸಿ ಗಿಡ ಮರ ಬೆಳೆಸುವ ಮನೋಭಾವ ಬಲಗೊಳಿಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ’ ಎಂದು ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಆಯುಕ್ತ ಕೆ.ವಿ.ಶಂಕರಪ್ಪ ಅಭಿಪ್ರಾಯಪಟ್ಟರು.

ನಗರದ ರೈಲ್ವೆನಿಲ್ದಾಣದ ಆವರಣದಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್ ಸಂಸ್ಥೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಹಾಗೂ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ‘ಸಮಾಜದಲ್ಲಿ ಗಿಡ- ಮರಗಳಿಲ್ಲದಿದ್ದರೆ ಉಸಿರಾಡಲು ಗಾಳಿಯೂ ಸಿಗದೇ ಪ್ರಾಣಕಳೆದುಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಎಲ್ಲಿ ನೋಡಿದರೂ ಕಾಡು, ಗಿಡಮರಗಳಿದ್ದ ಕಾಲವಿತ್ತು. ಆಧುನಿಕತೆಯ ನೆಪ, ಜನಸಂಖ್ಯೆಗೆ ಅಗತ್ಯತೆಗಳನ್ನು ಪೂರೈಸುವ ಕಾತುರದಲ್ಲಿ ಅವುಗಳೆಲ್ಲವನ್ನು ಹಾಳು ಮಾಡುತ್ತಿದ್ದೇವೆ. ಸ್ಕೌಟ್ಸ್ ಮತ್ತು ಸಂಸ್ಥೆ ಪ್ರತಿ 2ನೇ ಶನಿವಾರ ರೈಲ್ವೆ ನಿಲ್ದಾಣ ಸ್ವಚ್ಚತಾ ಕಾರ್ಯಕ್ರಮ ನಡೆಸುವುದರ ಜತೆಗೆ ಇಲ್ಲಿರುವ ಗಿಡಗಳಿಗೆ ನೀರು ಹರಿಸುವ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ನಾಗರಿಕರು ಸಹಕಾರ ನೀಡಬೇಕು’ ಎಂದು ಕೋರಿದರು.

ADVERTISEMENT

‘ಸಂಸ್ಥೆಯ ಮಕ್ಕಳಲ್ಲಿ ಶಿಸ್ತು, ದೇಶಪ್ರೇಮ ಬೆಳೆಸುವುದರ ಜತೆಗೆ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಪೋಷಕರು ಹೆಚ್ಚು ಸಂಖ್ಯೆಯಲ್ಲಿ ಮಕ್ಕಳನ್ನು ಸಂಸ್ಥೆಗೆ ಸೇರಿಸಬೇಕು. ಇದರಿಂದ ಅವರ ಶೈಕ್ಷಣಿಕ ಪ್ರಗತಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ಹೇಳಿದರು.

‘ಪರಿಸರ ರಕ್ಷಣೆಯ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದ್ದು, ಅದರ ರಕ್ಷಣೆಗೆ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು’ ಎಂದು ಪರಿಸರ ತಜ್ಞ ತ್ಯಾಗರಾಜ್ ಸಲಹೆ ನೀಡಿದರು.

‘ಪರಿಸರದೊಳಗೆ ಪ್ರಾಣಿ, ಪಕ್ಷಿಜೀವ ಜಲ, ಮಣ್ಣು, ಗುಡ್ಡಬೆಟ್ಟಗಳು ಸೇರಿದ್ದು, ಅವುಗಳ ರಕ್ಷಣೆಯೂ ಅಗತ್ಯ. ಪ್ರಕೃತಿಯಲ್ಲಿ ಅನೇಕ ಜೀವಿಗಳು ಕಾಣದಾಗಿವೆ. ಕೆಲವನ್ನು ಕೇವಲ ಮೃಗಾಲಯಗಳಲ್ಲಿ ಮಾತ್ರ ನೋಡುವಂತಾಗಿದೆ’ ಎಂದರು.

‘ಜಿಲ್ಲೆ ಕೆರೆಗಳ ಬೀಡು. ಇಲ್ಲಿನ ಕೆರೆಗಳನ್ನು ಉಳಿಸುವ ಅಗತ್ಯವಿದೆ. ಅಂತರ್ಜಲ ವೃದ್ದಿಗೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ಜಿಲ್ಲೆಗೆ ಕೆಸಿ ವ್ಯಾಲಿ ಹರಿದು ಬರುತ್ತಿರುವುದು ಸಂತಸವಾದರೂ, ಆ ನೀರು ಇಲ್ಲಿನ ಪ್ರಾಣಿ, ಪಕ್ಷಗಳಿಗೆ ಎಷ್ಟರಮಟ್ಟಿಗೆ ಸೂಕ್ತವಾಗಿದೆ ಎಂಬುದನ್ನು ತಜ್ಞರು ಗಮನಿಸಿ, ಮೂರು ಭಾರಿ ಶುದ್ಧೀಕರಿಸಿ ಹರಿಸಬೇಕು’ ಎಂದು ಒತ್ತಾಯಿಸಿದರು.

ರೈಲ್ವೆ ಸ್ಟೇಷನ್ ಮಾಸ್ಟರ್ ಅಂಬರೀಷ್, ಸಂಸ್ಥೆಯ ತಾಲ್ಲೂಕು ಉಪಾಧ್ಯಕ್ಷ ನಾರಾಯಣಸ್ವಾಮಿ, ನಗರಸಭೆ ಸದಸ್ಯ ರವೀಂದ್ರ, ಮಾಜಿ ಉಪಾಧ್ಯಕ್ಷ ವಿ.ಕೆ.ರಾಜೇಶ್, ಆಯುಕ್ತ ಕೆ.ಆರ್.ಸುರೇಶ್, ಜಿಲ್ಲಾ ಸಂಘಟನಾ ಆಯುಕ್ತ ವಿ.ಬಾಬು, ಸಂಘಟಕ ವಿಶ್ವನಾಥ್, ಡಾ.ಶಿವಣ್ಣ, ಮುಖಂಡರಾದ ವೆಂಕಟೇಶ್, ಜೈಪ್ರಕಾಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.