ADVERTISEMENT

ಮರುಜೀವ ಪಡೆದ ಗೊಟ್ಟಿಗಡ್ಡೆ

​ಪ್ರಜಾವಾಣಿ ವಾರ್ತೆ
Published 20 ಮೇ 2018, 13:42 IST
Last Updated 20 ಮೇ 2018, 13:42 IST
ತೊಳೆದು ಸಾಂಬಾರು ಮಾಡಲು ಸಿದ್ಧಪಡಿಸಲಾಗಿರುವ ಗೊಟ್ಟಿಗಡ್ಡೆ
ತೊಳೆದು ಸಾಂಬಾರು ಮಾಡಲು ಸಿದ್ಧಪಡಿಸಲಾಗಿರುವ ಗೊಟ್ಟಿಗಡ್ಡೆ   

ಶ್ರೀನಿವಾಸಪುರ ತಾಲ್ಲೂಕಿನ ಕೆರೆಗಳಲ್ಲಿ ಗೊಟ್ಟಿಗಡ್ಡೆ ಮರುಜೀವ ಪಡೆದಿದೆ. ಇದರಿಂದ ಗ್ರಾಮೀಣ ಪ್ರದೇಶದ ಜನರು ಸಾಂಪ್ರದಾಯಿಕ ಗೊಟ್ಟಿಗಡ್ಡೆ ಸಾಂಬಾರು ಸವಿಯುತ್ತಿದ್ದಾರೆ.

ತಾಲ್ಲೂಕಿನ ಕೆರೆಗಳು ಗೊಟ್ಟಿಗಡ್ಡೆಗೆ ಹೆಸರುವಾಸಿಯಾಗಿದ್ದವು. ಕಾಲಾಂತರದಲ್ಲಿ ಮಳೆ ಕೊರತೆ ಹಾಗೂ ಕೆರೆಗಳಲ್ಲಿ ಹೂಳು ತುಂಬಿದ ಪರಿಣಾಮವಾಗಿ, ಕೆರೆಗಳಲ್ಲಿ ನೀರು ನಿಲ್ಲದಾಯಿತು. ಇದು ಗೊಟ್ಟಿಗಡ್ಡೆಯ ಅವನತಿಗೆ ಕಾರಣವಾಯಿತು. ಆದರೆ ಕಳೆದ ವರ್ಷ ಹಾಗೂ ಈ ಸಲ ತಾಲ್ಲೂಕಿನಲ್ಲಿ ಉತ್ತಮ ಮಳೆಯಾದ ಪರಿಣಾಮ, ತಾಲ್ಲೂಕಿನ ಉತ್ತರ ಭಾಗದ ಕೆಲವು ಆಳವಾದ ಪುಟ್ಟ ಕೆರೆಗಳಲ್ಲಿ ನೀರಿದೆ. ಬಿತ್ತನೆಯೇ ಹೋಯಿತು ಎಂದುಕೊಂಡಿದ್ದ ಗೊಟ್ಟಿಗಡ್ಡೆ ಮತ್ತೆ ಕಾಣಿಸಿಕೊಂಡಿದೆ.

ಗೊಟ್ಟಿಗಡ್ಡೆ ಒಂದು ಕೆರೆ ಉತ್ಪನ್ನ. ಈ ಜಲ ಸಸ್ಯ ಕೆರೆಯಲ್ಲಿ ಬೆಳೆಯುತ್ತದೆ. ಅದರ ಎಲೆಗಳು ನೀರಿನ ಮೇಲೆ ತೇಲುತ್ತವೆ. ಗಡ್ಡೆಕಟ್ಟಿದ ಸಸ್ಯ ಬಿಳಿ ಬಣ್ಣದ ಹೂ ಬಿಡುತ್ತದೆ. ಒಟ್ಟಾಗಿ ಹೂ ಬಿಟ್ಟಾಗ ಕೆರೆಯ ಅಂದ ಹೆಚ್ಚುತ್ತದೆ.

ADVERTISEMENT

ಗೊಟ್ಟಿಗಡ್ಡೆ ರುಚಿಯನ್ನು ತಿಂದವರೇ ಬಲ್ಲರು. ಹಳ್ಳಿಗಾಡಿನ ಜನ ಬಿಡುವಿನ ವೇಳೆಯಲ್ಲಿ ಕೆರೆಗೆ ಹೋಗಿ ಗೊಟ್ಟಿಗಡ್ಡೆ ಸಂಗ್ರಹಿಸಿ ತರುತ್ತಿದ್ದರು. ಮಹಿಳೆಯರು ಗಡ್ಡೆಯನ್ನು ತೊಳೆದು, ಮೇಲಿನ ಹೊಟ್ಟು ಬಿಡಿಸಿ, ಹುರುಳಿಯೊಂದಿಗೆ ಹುಳಿ ಮಾಡುತ್ತಿದ್ದರು. ಮನೆ ಮಂದಿ ಮುದ್ದೆಯೊಂದಿಗೆ ಸವಿಯುತ್ತಿದ್ದರು. ಆದರೆ ಕೆರೆಗಳಲ್ಲಿ ನೀರಿನ ಕೊರತೆಯಿಂದಾಗಿ ಕೆಲವು ವರ್ಷಗಳ ಕಾಲ ಈ ರುಚಿಗೆ ತಡೆ ಬಿದ್ದಿತ್ತು.

ಮತ್ತೆ ಸುರಿದ ಮಳೆ ಗೊಟ್ಟಿಗಡ್ಡೆಯನ್ನು ಹೊತ್ತು ತಂದಿದೆ. ಸಾಂಪ್ರದಾಯಿಕ ಅಡುಗೆ ಪ್ರಿಯರ ಬಾಯಲ್ಲಿ ನೀರೂರಿಸಿದೆ. ಕಾಲ ಕಾಲಕ್ಕೆ ಒಂದೊಂದು ವಿಶೇಷ ಇರುತ್ತದೆ. ತಾಲ್ಲೂಕಿನಲ್ಲಿ ಒಮ್ಮೆ ಅಣಬೆ ಸಿಗುತ್ತದೆ, ಇನ್ನೊಮ್ಮೆ ಈಸುರುಳ್ಳಿ ಸಿಗುತ್ತದೆ, ಮತ್ತೊಮ್ಮೆ ಗೊಟ್ಟಿಗಡ್ಡೆ ಸಿಗುತ್ತದೆ. ಹಳ್ಳಿಗರು ಆಯಾ ಕಾಲದಲ್ಲಿ ದೊರೆಯುವ ವಿಶೇಷಗಳನ್ನು ಸ್ವೀಕರಿಸಿ ಬಳಸಿಕೊಳ್ಳುತ್ತಾರೆ.

ಕೆರೆಯೆಂದರೆ ಬರಿ ನೀರೇ ಅಲ್ಲ. ಜೀವಜಲದ ಉಸಿರು. ನೀರನ್ನು ಬಳಸಿಕೊಂಡು ಭತ್ತ ಬೆಳೆಯುವುದು ಮುಖ್ಯವಾದರೂ, ಕೆರೆ ಉತ್ಪನ್ನಗಳು ಗ್ರಾಮೀಣ ಜನರ ಬದಕಿನ ಅವಿಭಾಜ್ಯ ಅಂಗ ಎನ್ನುವುದರಲ್ಲಿ ಎರಡು ಮಾತಿಲ್ಲ.

ಕೆರೆಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಅತ್ಯಂತ ಪ್ರಿಯವಾದ ಮೀನು, ಏಡಿ, ಸಿಗಡಿ, ಮೀನು ಸೊಪ್ಪು, ಗೊಟ್ಟಿಗಡ್ಡೆ ಸಿಗುತ್ತದೆ. ಜನರು ಈ ನೈಸರ್ಗಿಕ ಆಹಾರವನ್ನು ಸಂಗ್ರಹಿಸಿ ಸೇವಿಸುತ್ತಿದ್ದರು. ದುಡಿಯುವ ಜನರ ಆರೋಗ್ಯದ ಗುಟ್ಟು ಇದೇ ಆಗಿತ್ತು.

–ಆರ್‌.ಚೌಡರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.