ADVERTISEMENT

ಮಲೇರಿಯಾ ಅಧಿಕಾರಿ ಚಿತ್ರದುರ್ಗಕ್ಕೆ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2011, 11:15 IST
Last Updated 22 ಅಕ್ಟೋಬರ್ 2011, 11:15 IST

ಕೋಲಾರ: ಮಲೇರಿಯಾ ಪ್ರಕರಣ ಉಲ್ಬಣಗೊಂಡಿದ್ದರೂ ಮುಂಜಾಗ್ರತಾ ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿರುವುದು ಮತ್ತು ಸರ್ಕಾರಿ ವೈದ್ಯಾಧಿಕಾರಿಯಾಗಿ ಖಾಸಗಿ ಪ್ರಾಕ್ಟೀಸ್ ಮಾಡುತ್ತಿದ್ದ ಆರೋಪಕ್ಕೆ ಗುರಿಯಾಗಿದ್ದ ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಎಸ್.ಜಿ.ನಾರಾಯಣಸ್ವಾಮಿ ಅವರನ್ನು ಸರ್ಕಾರ ಚಿತ್ರದುರ್ಗ ಜಿಲ್ಲೆಯ ರಂಗೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಿ ಗುರುವಾರ ಆದೇಶ ಹೊರಡಿಸಿದೆ.

ಅದೇ ಸ್ಥಾನಕ್ಕೆ ಕಳೆದ ವರ್ಷ ಜೂ.29ರಂದು ವರ್ಗಾವಣೆ ಮಾಡಿದ್ದ ಸಂದರ್ಭದಲ್ಲಿ ಅಧಿಕಾರಿಯು ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ಆದೇಶ ಪ್ರಶ್ನಿಸಿದ್ದರು. ಇದೇ ಸೆ.13ರಂದು ತೀರ್ಪು ನೀಡಿರುವ ಮಂಡಳಿ ವರ್ಗಾವಣೆ ನಿಯಮ ಆಧರಿಸಿ 15 ದಿನದೊಳಗೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚನೆ ನೀಡಿತ್ತು. ಆ ಮೇರೆಗೆ, ಅ.4ರಂದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ವೃಂದ ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿದ ಬಳಿಕ ವರ್ಗಾವಣೆ ಆದೇಶ ಎತ್ತಿ ಹಿಡಿದು ಮತ್ತೆ ಆದೇಶ ಹೊರಡಿಸಲಾಗಿದೆ.

ತಮ್ಮ ಪತ್ನಿ ಬೇತಮಂಗಲದ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿರುವುದು, ಮಗ ಉನ್ನತ ವ್ಯಾಸಂಗದ ಕೌನ್ಸೆಲಿಂಗ್‌ಗೆ ಕಾಯುತ್ತಿರುವುದು, ಮಗಳು 8ನೇ ತರಗತಿಯಲ್ಲಿ ಕೋಲಾರದಲ್ಲಿ ವ್ಯಾಸಂಗ ಮಾಡುತ್ತಿರುವುದು, 2010ರ ಜನವರಿಯಲ್ಲಿ ತಮಗೆ ಹೃದಯದ ಶಸ್ತ್ರಚಿಕಿತ್ಸೆ ನಡೆಸಿರುವ ಅಂಶಗಳನ್ನು ವೈದ್ಯಾಧಿಕಾರಿ ಕಳೆದ ವರ್ಷ ಜೂ.30ರಂದು ತಮ್ಮ ಪುನರ್ ಪರಿಶೀಲನಾ ಮನವಿಯಲ್ಲಿ ಪ್ರಸ್ತಾಪಿಸಿದ್ದರು.

ಚಿತ್ರದುರ್ಗಕ್ಕೆ ಅವಧಿಪೂರ್ವ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಮಾರ್ಗಸೂಚಿಗಳ ಆದೇಶಕ್ಕೆ ವಿರುದ್ಧವಾಗಿದೆ. ಹೀಗಾಗಿ ವರ್ಗಾವಣೆ ರದ್ದುಪಡಿಸಿ ಮಲೇರಿಯಾ ಅಧಿಕಾರಿಯಾಗಿ ಮುಂದುವರಿಸಬೇಕು ಎಂದು ಕೋರಿದ್ದರು.

ಕಾರಣ: ಕಳೆದ ಬಾರಿ ಹೊರಡಿಸಿದ್ದ ವರ್ಗಾವಣೆ ಆದೇಶವನ್ನು ಮತ್ತೆ ಎತ್ತಿ ಹಿಡಿಯಲು ಮುಖ್ಯಮಂತ್ರಿ ಅಧ್ಯಕ್ಷತೆಯ ಸಮಿತಿ ಈ ಕೆಳಗಿನ ಅಂಶ ಗಮನಿಸಿತು. ಜಿಲ್ಲಾ ಮಟ್ಟದ ಕಾರ್ಯಕ್ರಮಾಧಿಕಾರಿ ಹುದ್ದೆಗೆ ನೇಮಕವಾಗಬೇಕಾದರೆ ಇರುವ ಮಾನದಂಡ ಪ್ರಕಾರ ಕನಿಷ್ಠ 13 ವರ್ಷ  ಸೇವೆ, ಆ ಪೈಕಿ ಮೂರು ವರ್ಷ ಗ್ರಾಮೀಣ ಸೇವೆ ಸಲ್ಲಿಸಿರಬೇಕು. ಉತ್ತಮ ಸೇವಾ ದಾಖಲೆ ಹೊಂದಿರಬೇಕು. ಅಂಥ ಅಧಿಕಾರಿಯನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಬೇಕು. ಆದರೆ ಎಸ್.ಜಿ.ನಾರಾಯಣ್ವಾಮಿಯವರು ಗುತ್ತಿಗೆ ವೈದ್ಯರಾಗಿ ನೇಮಕಗೊಂಡು 2006ರ ಮಾರ್ಚ್ 16ರಂದು ಸರ್ಕಾರಿ ಸೇವೆಯಲ್ಲಿ ಸಕ್ರಮಗೊಂಡಿದ್ದಾರೆ. ಐದೂವರೆ ವರ್ಷ ಮಾತ್ರ ಸೇವೆ ಸಲ್ಲಿಸಿರುವುದನ್ನು ಸಮಿತಿ ಗಮನಿಸಿತು.

ದೂರು: ಅಧಿಕಾರಿಯು ಕಚೇರಿ ಸಮಯದಲ್ಲಿ ಖಾಸಗಿ ಪ್ರಾಕ್ಟೀಸ್ ಮಾಡುತ್ತಿದ್ದರು ಎಂಬುದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಮುಖ್ಯ ಜಾಗೃತ ಅಧಿಕಾರಿ ನಡೆಸಿದ ತನಿಖೆಯಿಂದ ಮೇಲ್ನೋಟಕ್ಕೆ ಸಾಬೀತಾಗಿದೆ. ಅವರ ಕರ್ತವ್ಯ ನಿರ್ಲಕ್ಷ್ಯದಿಂದ ಜಿಲ್ಲೆಯಲ್ಲಿ ಮೂವರು ಮಲೇರಿಯಾ ಪ್ರಕರಣದಲ್ಲಿ ಸಾವನ್ನಪ್ಪಿದ್ದಾರೆ.

ಪ್ರಕರಣ ಉಲ್ಬಣಗೊಂಡಿದ್ದರೂ ಅಧಿಕಾರಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಕಳೆದ ವರ್ಷ ಜೂ.18ರಂದು ವರದಿ ಮಾಡಿದ್ದರು.

ಖಾಸಗಿ ಪ್ರಾಕ್ಟೀಸ್ ಮಾಡುತ್ತಿರುವ ಆರೋಪ ಸತ್ಯಾಂಶವಾಗಿರುವುದರಿಂದ ಅವರನ್ನು ಅಮಾನತಿನಲ್ಲಿಡಲು ಮತ್ತು ಜಿಲ್ಲೆಯಿಂದ ಹೊರಗೆ ವರ್ಗಾಯಿಸಲು ಶಿಫಾರಸು ಮಾಡಿದ್ದರು.

ದುರ್ನಡತೆ ಮತ್ತು ಕರ್ತವ್ಯ ನಿರ್ಲಕ್ಷ್ಯದ ಆಪಾದನೆಗಳಿರುವ ಕಾರಣ ಅಧಿಕಾರಿ ತಿಳಿಸಿರುವ ಪತಿ-ಪತ್ನಿ ಪ್ರಕರಣ, ಮಕ್ಕಳ ವಿದ್ಯಾಭ್ಯಾಸ, ವೈದ್ಯಕೀಯ ಕಾರಣ ನೀಡಿ ಮಲೇರಿಯಾದ ಅಧಿಕಾರಿ ಹುದ್ದೆಯಲ್ಲೆ ಮುಂದುವರಿಸಲು ಅವಕಾಶವಿರುವುದಿಲ್ಲ.

ಅಧಿಕಾರಿಯು ಗ್ರಾಮೀಣ ಸೇವೆಯನ್ನು ಸಲ್ಲಿಸಿಲ್ಲವಾದ್ದರಿಂದ ರಾಜ್ಯ ನಾಗರಿಕ ಸೇವೆಗಳ ಅಧಿನಿಯಮ 2011ರ ಸೆಕ್ಷನ್ 4(2)ರ ಪ್ರಕಾರ ಗ್ರಾಮೀಣ ಪ್ರದೇಶದ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುವುದು ಕಡ್ಡಾಯ ಎಂದು ಸಮಿತಿ ತೀರ್ಮಾನಿಸಿದ್ದರ ಹಿನ್ನೆಲೆಯಲ್ಲಿ ವರ್ಗಾವಣೆ ಆದೇಶ ಎತ್ತಿಹಿಡಿಯಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಚಿಕ್ಕೇಗೌಡ ಆದೇಶಕ್ಕೆ ಮುಂಚಿನ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.