ADVERTISEMENT

ಮಾಕಿ ಕರ್ನಾಟಕಮೇ ಲೇಸು!

ಕೆ.ನರಸಿಂಹ ಮೂರ್ತಿ
Published 1 ಜುಲೈ 2012, 8:30 IST
Last Updated 1 ಜುಲೈ 2012, 8:30 IST

ಕೋಲಾರ: `ವರ್ಷ ಲೇ, ಪಂಟ ಲೇ, ಏಮೀ ಲೇ, ಬೋರ್‌ಲೋ ನೀಳ್ಳು ಲೇ, ಪರುವು ಮಾತ್ರ ಮುಂದಿ~ (ಮಳೆ ಇಲ್ಲ, ಬೆಳೆ ಇಲ್ಲ, ಬೋರಲ್ಲಿ ನೀರಿಲ್ಲ, ಬರ ಮಾತ್ರ ಇದೆ)... -ಮುಳಬಾಗಲು ತಾಲ್ಲೂಕಿನ ನಂಗಲಿ ಸಮೀಪದಿಂದ ಕೇವಲ 19 ಕಿ.ಮೀ. ದೂರದಲ್ಲಿರುವ ಆಂಧ್ರಪ್ರದೇಶದ ಕಟ್ಟಕಡೆಯ ಗಡಿ ಗ್ರಾಮ ಆಲಕುಪ್ಪಂನ ಇಬ್ಬರು ಸಹೋದರ ವೃದ್ಧರು ನಿರಾಶೆಯ ದನಿಯಲ್ಲಿ ಹೇಳಿದ ಮಾತುಗಳಿವು.

ಆಂಧ್ರದ ಗಂಡರಾಜುಪಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗಂಗವರಂ ಮಂಡಲ್‌ಗೆ ಸೇರಿದ ಆಲಕುಪ್ಪಂ ಗ್ರಾಮದ ಕೆ.ನಾರಾಯಣಪ್ಪ ಮತ್ತು ಆಂಜಪ್ಪ ಎರಡು ವರ್ಷದಿಂದ ಬರದ ನೆರಳಲ್ಲೆ ದಿನ ನೂಕುತ್ತಿದ್ದಾರೆ. 10 ಜನರಿರುವ ಮನೆಯ ಯಜಮಾನರಾದ ಅವರು ತಮ್ಮ 5 ಎಕರೆ ಜಮೀನಿನ ಕೆಲವೇ ಗುಂಟೆಯಲ್ಲಿ ಸ್ವಲ್ಪ ಟೊಮೆಟೊ, ಮೆಣಸಿನಕಾಯಿ ಮತ್ತು ಹುರುಳಿಕಾಯಿ ಬೆಳೆಯುತ್ತಿದ್ದಾರೆ. ಉಳಿದ ಜಮೀನೆಲ್ಲವೂ ಬರಡಾಗಿದೆ. ಬೆಳೆ ಇಟ್ಟಿರುವುದು ನೆಪಕ್ಕಷ್ಟೆ.

ಜಮೀನಿನಲ್ಲಿರುವ ತೆರೆದ ಬಾವಿಯಲ್ಲೂ ತೇವ ಆರಿ ಹಲವು ತಿಂಗಳಾಗಿವೆ. ಆಗಾಗಾ ಆಸೆ ತೋರಿಸುವಂತೆ ಕಾಣಿಸಿಕೊಂಡು ಮರೆಯಾಗುವ ಮಳೆಯ ಮೇಲೆ ಅವರು ಇನ್ನೂ ಭರವಸೆ ಇಟ್ಟಿದ್ದಾರೆ. ಈ ನಡುವೆಯೇ ಕೂಲಿ ಕೆಲಸ ಅವರನ್ನು ಮುಳಬಾಗಲಿನಿಂದ ಬೆಂಗಳೂರಿನವರೆಗೂ ಕರೆದೊಯ್ದಿದೆ. ಅವರಿಗೆ ತಾವು ಆಂಧ್ರಪ್ರದೇಶಕ್ಕೆ ಸೇರಿದವರಾಗಿರುವುದಕ್ಕಿಂತಲೂ ಕರ್ನಾಟಕವೇ ಲೇಸೆನಿಸಿದೆ!

ಬೆಳೆಯುವ ಅಷ್ಟಿಷ್ಟು ತರಕಾರಿಗಳನ್ನು ಅವರು ಆಂಧ್ರದ ಪಲಮನೇರಿಗೆ ಕೊಂಡೊಯ್ಯುವಂತೆ ಮುಳಬಾಗಲಿನ ಎನ್.ವಡ್ಡಹಳ್ಳಿಯಲ್ಲಿರುವ ಮಾರುಕಟ್ಟೆಗೂ ಒಯ್ದು ಮಾರುತ್ತಾರೆ. ತೆಲುಗು ಮಾತೃಭಾಷೆಯಾದರೂ ಅವರು ಬಲ್ಲ ಕನ್ನಡ ಅವರಿಗೆ ಬದುಕು ಕರುಣಿಸುತ್ತಿದೆ. ಕೂಲಿಯೇ ಅವರ ಬದುಕು. ಅದಕ್ಕೆ ಅವರು ಒಗ್ಗಿಹೋಗಿದ್ದಾರೆ ಎದೆಯಾಳದಲ್ಲಿ ವಿಷಾದವಿದ್ದರೂ ಕಟು ವಾಸ್ತವಕ್ಕೆ ಅವರು ಬೆನ್ನು ಹಾಕಿಲ್ಲ ಎಂಬುದೇ ವಿಶೇಷ.

ಗ್ರಾಮಕ್ಕೆ ಭೇಟಿ ನೀಡಿದ `ಪ್ರಜಾವಾಣಿ~ಯೊಡನೆ ಮಾತನಾಡಿದ ಅವರು, `ಇಪ್ಪಡಿವರೆಕೂ ಆಂಧ್ರವಾಳ್ಳು ಎವ್ವರೂ ತಲೆಕಾಯಿ ಪೆಟ್ಟಲೇದು~ (ಇಲ್ಲಿಯವರೆಗೆ ನಮ್ಮ ಕಷ್ಟ ಏನೆಂದು ಕೇಳಲು ಆಂಧ್ರದ ಯಾರೊಬ್ಬರೂ ತಲೆ ಹಾಕಿಲ್ಲ) ಎಂದು ನಿಷ್ಠುರವಾಗಿ ನುಡಿದರು. ಎರಡು ರಾಜ್ಯದ ಗಡಿಭಾಗದಲ್ಲಿರುವ ಅವರು ಯಾರಿಗೂ ಬೇಡದ ಸ್ಥಿತಿಯಲ್ಲಿದ್ದಾರೆ. ಆದರೆ ಹಾಗೆಂದು ಅವರು ಸುಮ್ಮನೆ ಕೂರುವಂತಿಲ್ಲ. ಏನಾದರೂ ಕೆಲಸ ಮಾಡಲೇಬೇಕು.

ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲೇ ಇರುವ ಸುಮಾರು 70 ಮನೆ, 300 ಜನಸಂಖ್ಯೆಯುಳ್ಳ ಈ ಹಳ್ಳಿಯಲ್ಲಿ ನೀರಿನ ಸಮಸ್ಯೆಯೂ ತೀವ್ರವಾಗಿದೆ. ಜಮೀನುಗಳಲ್ಲಿರುವ ಕೊಳವೆಬಾವಿಗಳು, ತೆರೆದ ಬಾವಿಗಳು ಬತ್ತಿರುವುದರಿಂದ ಕೃಷಿಗೂ ಸಮಸ್ಯೆಯಾಗಿದೆ. ಈ ಯಜಮಾನರ ಜಮೀನಿನಲ್ಲೆ ಇರುವ ಹತ್ತಾರು ವರ್ಷಗಳ ಹಿಂದಿನ ಬಾವಿಗೆ ಅಳವಡಿಸಿದ ಪಂಪ್-ಮೋಟರ್ ಮೌನವಾಗಿ ವರ್ಷಗಳುರುಳಿವೆ.

ಆಲಕುಪ್ಪಂನಿಂದ 53 ಕಿಮೀ ದೂರವಿರುವ ಕೋಲಾರದಲ್ಲೂ ಬರವಿದೆ. ಮುಳಬಾಗಲಿನಲ್ಲೂ ನೀರಿನ ಸಮಸ್ಯೆ ಇದೆ. ಅಲ್ಲೂ ರೈತರು ಸಂಕಟದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಭಾಗದಲ್ಲಿರುವ ನಿಮಗೆ ಏನನ್ನಿಸುತ್ತದೆ ಎಂದು ಕೇಳಿದರೆ, `ಮಾ ಪರಿಸ್ಥಿತಿನಿ ದೇವುಡೇ ಚೂಸ್ಕೋವಾಲ. ಮಾಕಿ ಕರ್ನಾಟಕಮೇ ಪರ್ವಾಲೇದು (ನಮ್ಮ ಪರಿಸ್ಥಿಯನ್ನು ದೇವರೇ ನೋಡ್ಕೋಬೇಕು ನಮಗೆ ಕರ್ನಾಟಕವೇ ಪರವಾಗಿಲ್ಲ) ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.