ADVERTISEMENT

ಮಾಲೂರು: ರಂಗೇರುತ್ತಿರುವ ಪ್ರಚಾರ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 9:41 IST
Last Updated 26 ಏಪ್ರಿಲ್ 2013, 9:41 IST

ಮಾಲೂರು: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕ್ಷೇತ್ರದಲ್ಲಿ ಪ್ರಚಾರ ಕಣ ರಂಗೇರುತ್ತಿದೆ. ಪ್ರತಿ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳ ನಡುವೆ ಉಂಟಾಗುತ್ತಿದ್ದ ಸ್ಪರ್ಧೆ ಮರೆಯಾಗಿ ಈ ಬಾರಿ ಪಕ್ಷೇತರರು ಪ್ರಬಲ ಸ್ಪರ್ಧೆ ನೀಡುತ್ತಿರುವುದು ಗಮನಾರ್ಹ.

ಬಿಜೆಪಿ ಟಿಕೆಟ್ ದೊರಕದೆ ಪಕ್ಷೇತರರಾಗಿ ಸ್ಪರ್ಧಿಸಿರುವ ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟಿ ಪಕ್ಷೇತರ ಅಭ್ಯರ್ಥಿಗಳ ಪೈಕಿ ಹೆಚ್ಚು ಪ್ರಭಾವಿಯಂತೆ ಕಾಣುತ್ತಿದ್ದಾರೆ. ಅವರೊಂದಿಗೆ ಮತ್ತೊಬ್ಬ ಪಕ್ಷೇತರ ಜಿ.ಇ.ರಾಮೇಗೌಡ ಕೂಡ ಸೆಡ್ಡು ಹೊಡೆಯುತ್ತಿದ್ದಾರೆ. ನಾಮಪತ್ರ ಸಲ್ಲಿಸುವ ದಿನವೇ ಭರ್ಜರಿ ವೆುರವಣಿಗೆ ಮೂಲಕ ಪ್ರವೇಶ ಪಡೆದ ಕಾಂಗ್ರೆಸ್ ಅಭ್ಯರ್ಥಿ ಚೆನ್ನಕೇಶವ, ಜೆಡಿಎಸ್ ಅಭ್ಯರ್ಥಿ ಕೆ.ಎಸ್.ಮಂಜುನಾಥ್ ಪಕ್ಷದ ಬಲದ ಜೊತೆಗೆ ಪ್ರಚಾರ ನಡೆಸಿದ್ದಾರೆ.

ಕ್ಷೇತ್ರದಲ್ಲಿ ಪ್ರಚಾರ ಅಬ್ಬರದಿಂದ ಸಾಗಿದ್ದು, ಪ್ರಚಾರದಲ್ಲಿ ನಾಯಕನಿಷ್ಠೆಯಿದೆ. ಕಾರ್ಯಕರ್ತರಲ್ಲಿ ಸಮರದ ಉತ್ಸಾಹವಿದೆ. ತಾಲ್ಲೂಕಿಗೆ ಶಾಶ್ವತ ನೀರಾವರಿ ಕಲ್ಪಿಸಲು ಪರಮಶಿವಯ್ಯ ವರದಿ ಜಾರಿಗೆ ತರುವುದು -ಎಲ್ಲ ಅಭ್ಯರ್ಥಿಗಳ ಪ್ರಚಾರದ ಪ್ರಮುಖ ವಿಷಯವಾಗಿದೆ.

ಮಾಜಿ ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟಿ, ಎರಡು ಬಾರಿ ಬಿಜೆಪಿಯಿಂದ ಶಾಸಕರಾಗಿದ್ದು, ಬಿಜೆಪಿಯಿಂದ ಟಿಕೆಟ್ ನೀಡದ ದೊರಕದ ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದಾರೆ. ಬಿಜೆಪಿಯಿಂದ ಅಭ್ಯರ್ಥಿಯಾಗಿ ಯಾರೇ ಸ್ಪರ್ಧಿಸಿದರೂ ಸಾಂಪ್ರದಾಯಿಕ ಮತಗಳು ಆ ಅಭ್ಯರ್ಥಿಗೆ ದೊರಕುವುದರಿಂದ ತಮಗೆ ತೊಂದರೆಯಾಗುತ್ತದೆ ಎಂಬಅವರ ಲೆಕ್ಕಾಚಾರದ ಪರಿಣಾಮವಾಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿಯ ನಡೆಯ ಬಗ್ಗೆ ಆಕ್ಷೇಪಣೆಯ ಮಾತುಗಳನ್ನು ಆಡದೆಯೇ ಶೆಟ್ಟರು ಪ್ರಚಾರ ನಡೆಸಿದ್ದಾರೆ.

ಕ್ಷೇತ್ರದಲ್ಲಿ ತಾವು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಮತ ಯಾಚನೆ ಮಾಡುತ್ತಿರುವ ಅವರು 2013ರ ಚುನಾವಣೆ ತಮ್ಮ ಸ್ಪರ್ಧೆಯ ಕೊನೆಯ ಚುನಾವಣೆ ಎಂಬ ಮಾತನ್ನೂ ಹೇಳುತ್ತಿದ್ದಾರೆ.

ಕ್ಷೇತ್ರಕ್ಕೆ ಹೊಸಬರಾಗಿರುವ ಕಾಂಗ್ರೆಸ್ ಅಭ್ಯರ್ಥಿ ಬಿಳಿಶಿವಾಲೆ ಗ್ರಾಮದ ಚೆನ್ನಕೇಶವ ಕಾಂಗ್ರೆಸ್ ಪಕ್ಷ ನೋಡಿ ಮತ ಕೊಡಿ ಎನ್ನುತ್ತಿದ್ದಾರೆ. ತಮ್ಮ ಬೆಂಗಳೂರಿನ ಬೆಂಬಲಿಗರೊಡನೆ ಅವರು ಮತಯಾಚನೆ ನಡೆಸುತ್ತಿದ್ದಾರೆ.

ಮಾಜಿ ಶಾಸಕ ಎ.ನಾಗರಾಜು ಅವರಿಗೆ ಕೊನೆ ಘಳಿಗೆಯಲ್ಲಿ ಪಕ್ಷದ ಟಿಕೆಟ್ ಅನ್ನು ಜಿಲ್ಲಾ ಪ್ರಮುಖರು ತಪ್ಪಿಸಿದ್ದಾರೆ ಎಂಬ ಭಾವನೆಯಿಂದ ಇನ್ನೂ ಹಲವು ಕಾರ್ಯಕರ್ತರು ಕ್ಷೇತ್ರದಲ್ಲಿ ಪ್ರಚಾರಕ್ಕೆ ಇಳಿದಿಲ್ಲ.

ಜೆಡಿಎಸ್ ಅಭ್ಯರ್ಥಿ ಕೆ.ಎಸ್.ಮಂಜುನಾಥ್ ದಾನ ಧರ್ಮದ ಕಾರ್ಯಕ್ರಮಗಳ ಮೂಲಕ ಕ್ಷೇತ್ರಕ್ಕೆ ಬಂದವರು. ಅವರೂ ಶಾಶ್ವತ ನೀರಾವರಿ ಭರವಸೆ ನೀಡಿ ಮತಯಾಚನೆ ನಡೆಸುತಿದ್ದಾರೆ.

ತಮ್ಮ ಟ್ರಸ್ಟ್ ಮೂಲಕ `ಸಮಾಜ ಸೇವೆ' ಮಾಡುತ್ತಿರುವ ಪಕ್ಷೇತರ ಅಭ್ಯರ್ಥಿ ಜಿ.ಇ.ರಾಮೇಗೌಡ, ತಮ್ಮ ಆಪ್ತ ಜ್ಯೋತಿಷಿಯೊಬ್ಬರ ಮಾತಿನಂತೆ, ಪಕ್ಷೇತರರಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಗೆಲುವು ನಿಶ್ಚಿತ ಎಂಬ ಮಾತಿಗೆ ಕಟ್ಟು ಬಿದ್ದು, ಸ್ಪರ್ಧೆ ನಡೆಸುತಿದ್ದಾರೆ. ಸ್ಥಳೀಯ ವಿದ್ಯಾವಂತ ಯುವಕನಿಗೆ ಮತ ನೀಡಿ ಕ್ಷೇತ್ರದ ಅಭಿವೃದ್ಧಿ ನೋಡಿ ಎನ್ನುತ್ತಿದ್ದಾರೆ.

ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಪ್ರಚಾರದಲ್ಲಿ ಅಬ್ಬರ ಕಂಡುಬಂದಿಲ್ಲ. ಉಳಿದ ಅಭ್ಯರ್ಥಿಗಳು ಶಕ್ತ್ಯಾನುಸಾರ ಪ್ರಚಾರ ನಡೆಸಿ ಮತ ಯಾಚಿಸುತ್ತಿದ್ದಾರೆ.

ಬಂಗಾರಪೇಟೆ: ಪ್ರಚಾರ ಬಿರುಸು
ಬಂಗಾರಪೇಟೆ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕ್ಷೇತ್ರದಲ್ಲಿ ಪ್ರಚಾರದ ಕಾವು ಏರುತ್ತಿದೆ. ಕೆಲ ಅಭ್ಯರ್ಥಿಗಳ ಪರ ಮೂರ‌್ನಾಲ್ಕು ಗುಂಪುಗಳು ಕ್ಷೇತ್ರದ ನಾಲ್ಕು ಹೋಬಳಿಯಲ್ಲಿ ಸಂಚರಿಸಿ, ಪ್ರಚಾರದಲ್ಲಿ ತೊಡಗಿವೆ.

ಕೆಲವರು ಆಟೋರಿಕ್ಷಾದಲ್ಲಿ ಧ್ವನಿವರ್ಧಕ ಬಳಸಿ ಪ್ರಚಾರ ನಡೆಸುತ್ತಿದ್ದಾರೆ. ಇನ್ನೂ ಕೆಲವರು ಮನೆ ಮನೆಗೆ ತೆರಳಿ ಕರ ಪತ್ರ ಹಂಚಿ ಮತಯಾಚಿಸುತ್ತಿದ್ದಾರೆ.

ಪ್ರಚಾರ ಶಾಂತಿಯುತವಾಗಿ ನಡೆಯುತ್ತಿದೆ. ಅಭ್ಯರ್ಥಿ ಪರ ಪತ್ನಿ, ಮಕ್ಕಳು ಪ್ರಚಾರಕ್ಕೆ ಇಳಿದಿರುವುದು ಇಲ್ಲಿನ ವಿಶೇಷ. ಚುನಾವಣೆ ನೀತಿ ಸಂಹಿತೆಯಡಿ ಇಲ್ಲಿಯವರೆಗೂ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.

14 ಅಭ್ಯರ್ಥಿಗಳು ಕಣದಲ್ಲಿದ್ದರೂ ಮೂರು ಪಕ್ಷಗಳ ಮಧ್ಯೆ ತ್ರಿಕೋನ ಸ್ಪರ್ಧೆ ಕಂಡು ಬಂದಿದೆ. ಶಾಶ್ವತ ನೀರಾವರಿ, ನಡೆದಿರುವ ಅಭಿವದ್ಧಿ ಕಾರ್ಯ, ವಿಶೇಷ ಸವಲತ್ತುಗಳು ಪ್ರಚಾರದ ಬಂಡವಾಳ ಆಗಿದೆ.

ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಪರಮಶಿವಯ್ಯ ವರದಿ ಜಾರಿ, ಯುವಕ, ವೃದ್ಧರಿಗೆ ವಿಶೇಷ ಸವಲತ್ತುಗಳು ನೀಡುವುದಾಗಿ ಪ್ರಚಾರದಲ್ಲಿ ಹೇಳುತ್ತಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ತಿಳಿಸುವ  ಮೂಲಕ ಕಾಂಗ್ರೆಸ್ ಅಭ್ಯರ್ಥಿ ಎಸ್.ಎನ್.ನಾರಾಯಣಸ್ವಾಮಿ ಮತ ಯಾಚಿಸುತ್ತಿದ್ದಾರೆ. ಕೆಜೆಪಿ ಅಭ್ಯರ್ಥಿ ವಿ.ಶೇಷು ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದಾಗ ಜಾರಿಗೆ ತಂದ ಅಭಿವೃದ್ಧಿ ಯೋಜನೆಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ತಾನು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಜಪಿಸುವ ಮೂಲಕ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಮತದಾರರ ಮನೆ ಬಾಗಿಲಿಗೆ ತೆರಳುತ್ತಿದ್ದಾರೆ.

ಬಿಎಸ್‌ಆರ್ ಅಭ್ಯರ್ಥಿ ಕಳವಂಚಿ ವೆಂಕಟೇಶ್ ಪರ ನಾಲ್ಕು ತಂಡಗಳು ಕ್ಷೇತ್ರದ ನಾಲ್ಕು ಹೋಬಳಿಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಹಿಂದುಳಿದ ವರ್ಗದವರಿಗೆ ವಿದ್ಯಾಭ್ಯಾಸ, ನೀರು, ನಿರುದ್ಯೋಗ ಸಮಸ್ಯೆ ನಿವಾರಣೆ ವಿಷಯಗಳನ್ನು ಅವರು ಪ್ರಚಾರದ ಮುಖ್ಯ ವಿಷಯ ಮಾಡಿಕೊಂಡಿದ್ದಾರೆ.

ಲೋಕಜನ ಶಕ್ತಿ, ಎಸ್‌ಪಿ, ಎಸ್‌ಜೆಪಿಯಲ್ಲಿ ಕೆಲ ಕಾರ್ಯಕರ್ತರೊಂದಿಗೆ ಅಭ್ಯರ್ಥಿಗಳು ಪ್ರಚಾರ ನಡೆಸುತ್ತಿದ್ದಾರೆ. ಕೆಲ ಪಕ್ಷೇತರ ಅಭ್ಯರ್ಥಿಗಳು ನಾಮಕಾವಸ್ಥೆಗೆ ಉಮೇದುವಾರಿಕೆ ಸಲ್ಲಿಸಿ ಪ್ರಚಾರದಿಂದ ದೂರ ಉಳಿದಿದ್ದಾರೆ.

ಜೆಡಿಎಸ್ ಪರ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ ನಡೆಸಿದ ಪ್ರಚಾರ ಬಿಟ್ಟರೆ ಬೇರೆ ಯಾವ ಪಕ್ಷದಲ್ಲೂ ದೊಡ್ಡ ವ್ಯಕ್ತಿಗಳ ಪ್ರಚಾರದ ಭರಾಟೆ ಇಲ್ಲ. ಜೆಡಿಎಸ್ ವರಿಷ್ಠರ ನಿರ್ಧಾರದಿಂದ ಮುನಿಸಿಕೊಂಡಿರುವ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಇನ್ನೂ ತಟಸ್ಥವಾಗಿ ಉಳಿದಿದ್ದಾರೆ. ಆದರೆ ಪಕ್ಷಾಂತರ ಮಾಡುವುದಿಲ್ಲ ಎಂದು ಕೆಲ ದಿನದ ಹಿಂದೆ ನಡೆದ ಸಭೆಯಲ್ಲಿ ಅವರು ಸ್ಪಷ್ಟಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT