ADVERTISEMENT

ಮಾವು ವೈಜ್ಞಾನಿಕ ಕಟಾವು ಅಗತ್ಯ: ಡಾ.ನಾಚೇಗೌಡ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2013, 8:41 IST
Last Updated 5 ಫೆಬ್ರುವರಿ 2013, 8:41 IST
ಕೋಲಾರದ ತೋಟಗಾರಿಕೆ ಇಲಾಖೆ ನರ್ಸರಿಯಲ್ಲಿ ಸೋಮವಾರ ಫಲಪುಷ್ಪ ಪ್ರದರ್ಶನದ ಪ್ರಯುಕ್ತ ಏರ್ಪಡಿಸಿದ್ದ ರೈತ-ತಜ್ಞರ ಸಂವಾದದಲ್ಲಿ ಸರ್ಕಾರಿ ತೋಟಗಾರಿಕೆ ಕಾಲೇಜಿನ ಡೀನ್ ಡಾ.ನಾಚೇಗೌಡ ಮಾತನಾಡಿದರು. ತೋಟಗಾರಿಕೆ ತಜ್ಞರಾದ ಶ್ರೀನಿವಾಸನಾಯ್ಕ, ಸೆಂಥಿಲ್‌ಕುಮಾರ್, ಡಾ.ವಿ.ಶ್ರೀನಿವಾಸ್ ಮತ್ತು ಡಾ.ತುಳಸಿರಾಂ ಇದ್ದಾರೆ.
ಕೋಲಾರದ ತೋಟಗಾರಿಕೆ ಇಲಾಖೆ ನರ್ಸರಿಯಲ್ಲಿ ಸೋಮವಾರ ಫಲಪುಷ್ಪ ಪ್ರದರ್ಶನದ ಪ್ರಯುಕ್ತ ಏರ್ಪಡಿಸಿದ್ದ ರೈತ-ತಜ್ಞರ ಸಂವಾದದಲ್ಲಿ ಸರ್ಕಾರಿ ತೋಟಗಾರಿಕೆ ಕಾಲೇಜಿನ ಡೀನ್ ಡಾ.ನಾಚೇಗೌಡ ಮಾತನಾಡಿದರು. ತೋಟಗಾರಿಕೆ ತಜ್ಞರಾದ ಶ್ರೀನಿವಾಸನಾಯ್ಕ, ಸೆಂಥಿಲ್‌ಕುಮಾರ್, ಡಾ.ವಿ.ಶ್ರೀನಿವಾಸ್ ಮತ್ತು ಡಾ.ತುಳಸಿರಾಂ ಇದ್ದಾರೆ.   

ಕೋಲಾರ: ಮಾವು ಬೆಳೆಗಾರರು ದಲ್ಲಾಳಿಗಳ ಶೋಷಣೆಯನ್ನು ಎದುರಿಸುವ ಜೊತೆಗೆ ವೈಜ್ಞಾನಿಕ ಕಟಾವು ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಸರ್ಕಾರಿ ತೋಟಗಾರಿಕೆ ಕಾಲೇಜಿನ ಡೀನ್ ಡಾ.ನಾಚೇಗೌಡ ಸಲಹೆ ನೀಡಿದರು.

ನಗರದ ತೋಟಗಾರಿಕೆ ಇಲಾಖೆ ನರ್ಸರಿಯಲ್ಲಿ ಸೋಮವಾರ ಫಲಪುಷ್ಪ ಪ್ರದರ್ಶನದ ಪ್ರಯುಕ್ತ ಏರ್ಪಡಿಸಿದ್ದ ರೈತ-ತಜ್ಞರ ಸಂವಾದದಲ್ಲಿ ಪಾಲ್ಗೊಂಡ ಅವರು, ಮಾವಿನ ಬೆಳೆಯನ್ನು ಕೋಲಿನಿಂದ ಹೊಡೆದು ಉದುರಿಸಿ, ದೊಡ್ಡ ವಾಹನಗಳಲ್ಲಿ ರಾಶಿ ಹಾಕಿಕೊಂಡು ಮಾರುಕಟ್ಟೆಗೆ ತರುವ ಪರಿಪಾಠವನ್ನು ನಿಲ್ಲಿಸಬೇಕು ಎಂದರು.

ಬೆಳೆಗಾರರು ಮಾರುಕಟ್ಟೆಗೆ ತರುವ ಮುನ್ನ ಮಾವಿನ ಗ್ರೇಡಿಂಗ್ ಮಾಡಬೇಕು. ವೈಜ್ಞಾನಿಕವಾಗಿ ಕಟಾವು ಮಾಡಬೇಕು. ಯಾವುದೇ ಕಾಯಿಗೆ ಹಾನಿಯಾಗದ ರೀತಿಯಲ್ಲಿ ಬಾಕ್ಸ್‌ಗಳಲ್ಲಿ ತುಂಬಿ ಮಾರುಕಟ್ಟೆಗೆ ತಂದರೆ ಬೆಳೆ ಲಾಭ ತರುವುದು ಖಚಿತ ಎಂದು ನುಡಿದರು.

ಮಾವು ಕಟಾವು, ಗ್ರೇಡಿಂಗ್ ಮೊದಲಾದ ಕುರಿತು ತೋಟಗಾರಿಕೆ ಕಾಲೇಜು ಮತ್ತು ಇಲಾಖೆ ವತಿಯಿಂದ ರೈತರಿಗೆ ಪ್ರಾತ್ಯಕ್ಷಿಕೆಗಳನ್ನು ನೀಡಲಾಗಿದೆ. ಶ್ರೀನಿವಾಸಪುರದಲ್ಲಿ ಮತ್ತೊಮ್ಮೆ ಪ್ರಾತ್ಯಕ್ಷಿಕೆ ನೀಡಲಾಗುವುದು ಎಂದರು.

ತೋತಾಪುರಿಯಿಂದ ನಷ್ಟ: ಎರಡು ವರ್ಷದಿಂದ ತೋತಾಪುರಿ ಪಲ್ಪ್ ರಫ್ತಾಗದೆ ಉಳಿದಿರುವ ಹಿನ್ನೆಲೆಯಲ್ಲಿ ಅದರ ಬೆಲೆ ಕುಸಿದಿದೆ. ಹೀಗಾಗಿ ಬೆಳೆಗಾರರು ಅದನ್ನೇ ಬೆಳೆಯುವ ಬದಲು ಮಾವಿನ ಬೇರೆ ತಳಿಗಳನ್ನು ಬೆಳೆಯುವ ಕಡೆಗೆ ಗಮನ ಹರಿಸಬೇಕು ಎಂದು ಅಭಿವೃದ್ಧಿ ಆಯುಕ್ತರು ಸೂಚಿಸಿದ್ದಾರೆ. ಈ ವಿಷಯವ ಬೆಳೆಗಾರರು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಮಾವು ಬೆಳೆಗಾರರ ಪರವಾಗಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾದ ಬಳಿಕ ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಚುರುಕಾಗಿ ಕಾರ್ಯನಿರ್ವಹಿಸುತ್ತಿವೆ. ದಲ್ಲಾಳಿಗಳಿಂದ ನಡೆಯುತ್ತಿರುವ ಶೋಷಣೆಯನ್ನು ತಡೆಯಬೇಕು ಎಂದು ಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಬೆಳೆಗಾರರಿಗೆ ಶುಭದಿನಗಳು ಬರಲಿವೆ ಎಂದರು.

ಆಗ್ರಹಿಸಿ: ಮಾವು ಬೆಳೆಗಾರರ ಪರವಾಗಿ ತೋಟಗಾರಿಕೆ ಇಲಾಖೆಯೇ ಮಾರುಕಟ್ಟೆಯಲ್ಲಿ ವ್ಯವಹರಿಸಲು ಸಾಧ್ಯವಿಲ್ಲ. ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರ ಪ್ರತಿನಿಧಿಗಳಿದ್ದಾರೆ. ಅವರ ಮೇಲೆ ರೈತರು ಒತ್ತಡ ಹೇರಬೇಕು. ದಲ್ಲಾಳಿಗಳ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಅಧಿಕ ಸಾಂದ್ರತೆಯಲ್ಲಿ ಹಣ್ಣುಗಳ ಬೇಸಾಯ ಕುರಿತು ಮಾತನಾಡಿದ ಶ್ರೀನಿವಾಸನಾಯ್ಕ, ಹನಿ ನೀರಾವರಿಯ ಸಮರ್ಪಕ ನಿರ್ವಹಣೆ ಅತ್ಯಗತ್ಯ. ಹನಿನೀರಾವರಿ ಮೂಲಕವೇ ಬೆಳೆಗಳಿಗೆ ರಸಗೊಬ್ಬರವನ್ನು ಕೊಡದವರು ವರ್ಷಕ್ಕೆ ಮೂರು ಬಾರಿಯಾದರೂ ಆಸಿಡ್ ಟ್ರೀಟ್‌ಮೆಂಟ್ ಮಾಡಲೇಬೇಕು. ರಸಗೊಬ್ಬರ ಕೊಡುವವರು ವರ್ಷಕ್ಕೆ ಎರಡು ಬಾರಿಯಾದರೂ ಆಸಿಡ್ ಟ್ರೀಟ್‌ಮೆಂಟ್ ಕೊಡಬೇಕು ಎಂದು ಸಲಹೆ ನೀಡಿದರು.

ಹಸಿರು ಮನೆಯಲ್ಲಿ ತರಕಾರಿ ಬೇಸಾಯ ಕುರಿತು ಡಾ.ವಿ.ಶ್ರೀನಿವಾಸ್, ಹಸಿರು ಮನೆಯಲ್ಲಿ ಹೂವಿನ ಬೇಸಾಯ ಕುರಿತು ಸೆಂಥಿಲ್‌ಕುಮಾರ್, ತೋಟಗಾರಿಕೆ ಬೆಳೆಗಳ ಕೀಟ, ರೋಗ ನಿಯಂತ್ರಣ ಕುರಿತು ಡಾ.ತುಳಸಿರಾಂ ಮಾತನಾಡಿದರು.

ಸನ್ಮಾನ: ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಜಿಲ್ಲೆಯ 10 ರೈತರನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವೀರಣ್ಣ ಜಿ.ತಿಗಡಿ, ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಸನ್ಮಾನಿಸಿದರು. ಮುಳಬಾಗಲು ತಾಲ್ಲೂಕಿನ ಪಾಲೂರಹಳ್ಳಿಯ ಹನುಮಂತರೆಡ್ಡಿ, ಚಿಕ್ಕನಹಳ್ಳಿಯ ವೆಂಕಟಪ್ಪ, ಮಾಲೂರು ತಾಲ್ಲೂಕಿನ ಜಯಮಂಗಲದ ಭಾಸ್ಕರ್ ಮತ್ತು ಕದಿರೇನಹಳ್ಳಿ ಅನಂತಯ್ಯ, ಕೋಲಾರ ತಾಲ್ಲೂಕಿನ ಅರಹಳ್ಳಿಯ ಗೋಪಾಲಕೃಷ್ಣಗೌಡ ಮತ್ತು ಛತ್ರಕೋಡಿಹಳ್ಳಿಯ ಮುನೇಗೌಡ, ಶ್ರೀನಿವಾಸಪುರ ತಾಲ್ಲೂಕಿನ ಹೊಸನೆಲವಂಕಿಯ ಶ್ರೀನಿವಾಸರೆಡ್ಡಿ, ಶೆಟ್ಟಿಹಳ್ಳಿಯ ಮುರಳಿ, ಬಂಗಾರಪೇಟೆ ಕಂಗಾಂಡ್ಲಹಳ್ಳಿಯ ನವೀನ್‌ನಾಯ್ಡು ಮತ್ತು ಸೀತಂಪಲ್ಲಿಯ ಬಿ.ಎಸ್.ರಾಮಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು.

ತೋಟಗಾರಿಕೆ ಇಲಾಖೆಯ ಹೆಚ್ಚುವರಿ ನಿರ್ದೇಶಕ ಎಸ್‌ವಿ.ಹಿತ್ತಲಮನವಿ, ಹಾಪ್‌ಕಾಮ್ಸ ನಿರ್ದೇಶಕ ಅರಹಳ್ಳಿ ಗೋಪಾಲಕೃಷ್ಣೇಗೌಡ, ಇಲಾಖೆ ಉಪನಿರ್ದೇಶಕ ಕದಿರೇಗೌಡ, ಸಹಾಯಕ ನಿರ್ದೇಶಕರಾದ ಕೆ.ವೆಂಕಟೇಶ್, ಮಂಜುನಾಥ  ಉಪಸ್ಥಿತರಿದ್ದರು.

ಸಾವಿರಾರು ಮಂದಿ: ಫಲಪುಷ್ಪ ಪ್ರದರ್ಶನದ ಕೊನೆಯ ದಿನವಾದ ಸೋಮವಾರ ವಿವಿಧ ಶಾಲೆ-ಕಾಲೇಜುಗಳ ನೂರಾರು ವಿದ್ಯಾರ್ಥಿಗಳು, ವಕೀಲರು, ಅಧಿಕಾರಿಗಳು, ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದು ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.