ADVERTISEMENT

ಮುಕ್ತ ಮತದಾನಕ್ಕೆ ಸೂಕ್ಷ್ಮ ವೀಕ್ಷಕರು ಸಹಕರಿಸಿ

ಚುನಾವಣಾ ಸೂಕ್ಷ್ಮ ವೀಕ್ಷಕರಿಗೆ ತರಬೇತಿ ಕಾರ್ಯಾಗಾರದಲ್ಲಿ ತರಬೇತುದಾರ ತಿಲಗಾರ್ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಮೇ 2018, 12:47 IST
Last Updated 7 ಮೇ 2018, 12:47 IST

ಕೋಲಾರ: ‘ವಿಧಾನ ಸಭಾ ಚುನಾವಣೆಯ ಮುಕ್ತ ಮತದಾನ ನಡೆಸಲು ಸೂಕ್ಷ್ಮ ವೀಕ್ಷಕರು ಸಹಕರಿಸಬೇಕು’ ಎಂದು ಚುನಾವಣಾ ತರಬೇತುದಾರ ತಿಲಗಾರ್ ತಿಳಿಸಿದರು.

ನಗರದಲ್ಲಿ ಚುನಾವಣಾ ಸೂಕ್ಷ್ಮ ವೀಕ್ಷಕರಿಗಾಗಿ ಭಾನುವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ‘ಮತದಾನ ಪ್ರಕ್ರೀಯೆ ಆರಂಭದಿಂದ ಕಡೇಯವರೆಗೆ ಸೂಕ್ಷ್ಮ ವೀಕ್ಷಕರು ಎಲ್ಲ ರೀತಿಯ ಚಟುವಟಿಕೆಗಳ ಮೇಲೆ ನಿಗಾ ಇಡಬೇಕು’ ಎಂದರು.

‘ಸೂಕ್ಷ್ಮ, ಅತೀಸೂಕ್ಷ್ಮ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸುವ ಸೂಕ್ಷ್ಮ ವೀಕ್ಷಕರಿಗೆ ತಮ್ಮ ಜವಾಬ್ದಾರಿಗಳನ್ನು ತಿಳಿಸಿಕೊಡುವ ದಿಸೆಯಲ್ಲಿ ತರಬೇತಿ ಹಮ್ಮಿಕೊಳ್ಳಲಾಗಿದೆ. ತಪ್ಪುಗಳು ನಡೆದಲ್ಲಿ ನಿರ್ಲಕ್ಷ್ಯ ತಾಳದೆ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು. ಸೂಕ್ಷ್ಮ ವೀಕ್ಷಕರು ಮತಗಟ್ಟೆಯ ನಿರೀಕ್ಷಕರಂತೆ ಕಾರ್ಯನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಜಿಲ್ಲೆಯಲ್ಲಿ 6 ವಿಧಾನಸಭಾ ಕ್ಷೇತ್ರಗಳಿದ್ದು, ಒಟ್ಟು 1,588 ಮತಗಟ್ಟೆಗಳಿವೆ. ಸೂಕ್ಷ್ಮ, ಅತೀಸೂಕ್ಷ್ಮ ಮತಗಟ್ಟೆ
ಗಳಿಗೆ ಮಾತ್ರ ಸೂಕ್ಷ್ಮ ವೀಕ್ಷಕರನ್ನು ನಿಯೋಜಿಸಲಾಗಿದೆ. ಈ ವೀಕ್ಷಕರು ನೇರವಾಗಿ ಕ್ಷೇತ್ರದ ಸಾಮಾನ್ಯ ವೀಕ್ಷಕರ ಅಡಿಯಲ್ಲಿ ಕಾರ್ಯನಿರ್ವಹಿಸಬೇಕು’ ಎಂದು ಹೇಳಿದರು.

‘ಸೂಕ್ಷ್ಮ ವೀಕ್ಷಕರು ಮೇ 11ರಂದು ಮಸ್ಟರಿಂಗ್ ಕೇಂದ್ರದಿಂದ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿ ಜತೆಗೆ ಚುನಾವಣಾ ಆಯೋಗದ ವಾಹನದೊಂದಿಗೆ ತೆರಳಬಹುದು. ಇಲ್ಲವೇ ಸ್ವಂತ ವ್ಯವಸ್ಥೆಯೊಂದಿಗೆ ಮತದಾನದ ದಿನ ಬೆಳಗಿನ ಜವವೇ ಹಾಜರಿರಬೇಕು. ಯಾವ ಮತ ಕೇಂದ್ರದಲ್ಲಿ ಕಾರ್ಯನಿರ್ವಹಿಸಬೇಕು ಎಂಬುದನ್ನು ಮೇ 11ರಂದು ತಿಳಿಸಲಾಗುವುದು’ ಎಂದರು.

ಕಾರ್ಯಗಾರದಲ್ಲಿ ಗೊಂದಲ: ಚುನಾವಣಾ ಕರ್ತವ್ಯಕ್ಕೆ ಸೂಕ್ಷ್ಮ ವೀಕರಾಗಿ ನೇಮಗೊಂಡಿರುವ ಕೇಂದ್ರ ಸ್ವಾಮ್ಯದ ಅಂಚೆ ಇಲಾಖೆ, ಬ್ಯಾಂಕ್‌ ಅಧಿಕಾರಿಗಳು ಕನ್ನಡ ಬಲ್ಲವರು ಶೇ.70ಕ್ಕಿಂತ ಕಡಿಮೆ ಸಂಖ್ಯೆಯಲ್ಲಿದ್ದದು ಕಂಡುಬಂತು. ಇದರಿಂದಾಗಿ ಕೆಲ ಕಾಲ ಗೊಂದಲ ಉಂಟಾಯಿತು.

ತರಬೇತುದಾರರು ತರಬೇತಿ ಆರಂಭಿಸುವ ಮುನ್ನ ಕನ್ನಡ ಭಾಷೆ ಬಾರದವರು ಹೆಚ್ಚು ಮಂದಿ ಅನ್ಯಭಾಷಿಗರು ಇದ್ದದು ಕಂಡುಬಂತು. ಇದನ್ನು ಗಮನಿಸಿದ ಕೇಂದ್ರದ ವೀಕ್ಷಕ ಮಹೇಂದ್ರ ಕುಮಾರ್ ಸ್ಥಳೀಯ ಭಾಷೆ ಬಾರದೇ ಇದ್ದರೆ ದಿನನಿತ್ಯದ ಕಚೇರಿ ವ್ಯವಹಾರಗಳನ್ನು ಹೇಗೆ ಮಾಡ್ತಾರೆ. ಮತಗಟ್ಟೆಯಲ್ಲಿ ಹೇಗೆ ಕೆಲಸ ಮಾಡುತ್ತಾರೆ ಎಂದು ಪ್ರಶ್ನಿಸಿದರು.

‘ಕೆಲ ಅಧಿಕಾರಿಗಳು ಕನ್ನಡದಲ್ಲೇ ತರಬೇತಿ ನೀಡಿ. ಅನ್ಯಭಾಷಿಗರು ಕನ್ನಡ ತಿಳಿದುಕೊಂಡು ಭಾಷೆ ಕಲಿಯಲಿ ಎಂದರು. ಕನ್ನಡ ಬಾರದವರು ಇಂಗ್ಲಿಷ್‌ನಲ್ಲಿ ತರಬೇತಿ ನೀಡುವಂತೆ ಮನವಿ ಮಾಡಿದರು. ಇಂಗ್ಲೀಷ್ ಅರ್ಥವಾಗದವರು ಯಾರಾದರೂ ಇದ್ದಾರೆಯೇ ಎಂದು ತರಬೇತುದಾರರು ಪ್ರಶ್ನಿಸಿದಾಗ ಇಲ್ಲ ಎಂಬ ಉತ್ತರ ಬಂದ ಹಿನ್ನಲೆಯಲ್ಲಿ ಪವರ್ ಪಾಯಿಂಟ್ ಪ್ರಸಂಟೇಷನ್‍ ಇಂಗ್ಲಿಷ್‌ನಲ್ಲಿ ಇದೆ ಕನ್ನಡ ಬಾರದವರು ಓದಿ ಅರ್ಥೈಸಿಕೊಳ್ಳಿ ಎಂದು ವೀಕ್ಷಕರು ಸೂಚಿಸಿದರು.

ಚುನಾವಣಾ ಆಯೋಗದ ವೀಕ್ಷಕ ಮಹೇಂದ್ರ ಕುಮಾರ್, ತರಬೇತಿಯ ನೋಡಲ್ ಅಧಿಕಾರಿ ಎಸ್. ವೆಂಕಟಸ್ವಾಮಿ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ಎಸ್.ಎನ್. ಕೃಷ್ಣಪ್ಪ, ಪಿಆರ್‍ಇಡಿ ವಿಭಾಗದ ಅಧಿಕಾರಿ ಎಂ.ಎಂ.ಗುಳಪ್ಪನವರ್, ಕೈಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.