ADVERTISEMENT

ಮುಗಿದ ಮುಂಗಾರು: ಶೇ 84 ಬಿತ್ತನೆ

ಕೆ.ನರಸಿಂಹ ಮೂರ್ತಿ
Published 9 ಸೆಪ್ಟೆಂಬರ್ 2011, 7:20 IST
Last Updated 9 ಸೆಪ್ಟೆಂಬರ್ 2011, 7:20 IST

ಕೋಲಾರ: ಜಿಲ್ಲೆಯಲ್ಲಿ ಮುಂಗಾರು ಮಳೆ ಅವಧಿ ಮುಗಿದಿದ್ದು, ಇದುವರೆಗೆ ಶೇ.84ರಷ್ಟು ಬಿತ್ತನೆ ಮಾತ್ರ ಪೂರ್ಣಗೊಂಡಿದೆ.

ಈ ಬಾರಿ ಅಸಮರ್ಪಕವಾಗಿ ಮುಂಗಾರು ಮಳೆ ಸುರಿದಿರುವುದರಿಂದ ರೈತರಿಗೆ ಸಂಭ್ರಮ ಪಡುವಂತ ಲಾಭಕರ ವಾತಾವರಣವೂ ಕಡಿಮೆಯಾಗಿದೆ. ಪ್ರಧಾನ ಬೆಳೆಯಾದ ರಾಗಿ ಬೆಳೆಯುವ ರೈತರು ಸೂಕ್ತ ವಾತಾವರಣಕ್ಕಾಗಿ ಕಾದು ತಡವಾಗಿ ಬಿತ್ತನೆ ಮಾಡಿರುವ ರೈತರಿಗೆ ಅದೃಷ್ಟ ಪರೀಕ್ಷೆ ಎದುರಾಗಿದೆ.

ಬಿತ್ತನೆಯಾಗಿರುವ ಬೆಳೆಗಳು ಮತ್ತೆ ಮಳೆಯ ನಿರೀಕ್ಷೆಯಲ್ಲಿವೆ. ಮಳೆ ಬರದಿದ್ದರೆ ಬೆಳೆ ಒಣಗುವ ಸಾಧ್ಯತೆ ಹೆಚ್ಚಿದೆ. ಅಲ್ಲಲ್ಲಿ ಬೆಳೆಗಳು ಬಾಡುತ್ತಿವೆ.

ರಾಗಿ ಶೇ 90: ಜಿಲ್ಲೆಯ ಪ್ರಧಾನ ಬೆಳೆಯಾದ ರಾಗಿಯನ್ನು ಸರಾಸರಿ 62,500 ಹೆಕ್ಟೇರ್‌ನಲ್ಲಿ ಬೆಳೆಯುತ್ತಿದ್ದು, ಈ ಬಾರಿ 56,131 (ಶೇ 90) ರಷ್ಬು ಬಿತ್ತನೆಯಾಗಿದೆ. ಜಿಲ್ಲೆಯ ಹಲವು ರೈತರು ಮುಂಗಾರು ಅವಧಿಯ ಕೊನೆ ದಿನಗಳಾದ ಆಗಸ್ಟ್ ಕೊನೆಯ ವಾರದಲ್ಲೂ ಬಿತ್ತನೆ ಮಾಡಿದ್ದಾರೆ. ಮಳೆ ಅಸಮರ್ಪಕವಾಗಿ ಸುರಿದ ಪರಿಣಾಮ ಸೂಕ್ತ ವಾತಾವರಣಕ್ಕಾಗಿ ಎದುರು ನೋಡುತ್ತಿದ್ದ ರೈತರಿಗೆ ಮುಂಗಾರು ಕೊನೆಗೊಂಡಿರುವುದು ನಿರಾಶೆ ಮೂಡಿಸಿದೆ.

ಜಿಲ್ಲೆಯ ಒಟ್ಟಾರೆ 1.02 ಲಕ್ಷ ಹೆಕ್ಟೇರ್ ಕೃಷಿ ಭೂಮಿಯ ಪೈಕಿ 85,668 ಹೆಕ್ಟೇರ್‌ನಷ್ಟು ಭೂಮಿ ಬಿತ್ತನೆಯಾಗಿದೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
ಏಕದಳಧಾನ್ಯಗಳಾದ ರಾಗಿ, ಮುಸುಕಿನ ಜೋಳ, ಮೇವಿನಜೋಳ, ತೃಣಧಾನ್ಯಗಳು ಬೆಳೆಯುವ ಒಟ್ಟು 71,500 ಹೆಕ್ಟೇರ್ ಪೈಕಿ 60,878ರಷ್ಟು (ಶೇ 85) ಬಿತ್ತನೆಯಾಗಿದೆ. ದ್ವಿದಳ ಧಾನ್ಯಗಳಾದ ತೊಗರಿ, ಅಲಸಂದೆ, ಅವರೆ, ಹುರುಳಿ ಸೇರಿ ದ್ವಿದಳ ಧಾನ್ಯಗಳು ಬೆಳೆಯುವ ಒಟ್ಟು 15,500 ಹೆಕ್ಟೇರ್ ಪೈಕಿ 13, 217 (ಶೇ 85)ರಷ್ಟು ಬಿತ್ತನೆಯಾಗಿದೆ.

ನೆಲಗಡಲೆ, ಸೂರ್ಯಕಾಂತಿ, ಎಳ್ಳು, ಹುಚ್ಚೆಳ್ಳು, ಹರಳು, ಸೋಯಾ ಅವರೆ, ಸಾಸುವೆ ಸೇರಿ ಎಣ್ಣಕಾಳು ಧಾನ್ಯಗಳು ಬೆಳೆಯುವ ಒಟ್ಟು 14,600 ಹೆಕ್ಟೇರ್ ಪೈಕಿ 11,493 (ಶೇ 79)ರಷ್ಟು ಬಿತ್ತನೆಯಾಗಿದೆ. ವಾಣಿಜ್ಯ ಬೆಳೆಯಾದ ಕಬ್ಬು ಬೆಳೆಯು 400 ಹೆಕ್ಟೇರ್ ಪೈಕಿ 80 (ಶೇ 20) ರಷ್ಟು ಬಿತ್ತನೆಯಾಗಿದೆ.  ಪ್ರಮುಖ ಎಣ್ಣೆಕಾಳು ಬೆಳೆಯಾದ ನೆಲಗಡಲೆ ಸರಾಸರಿ 13 ಸಾವಿರ ಹೆಕ್ಟೇರ್‌ನಲ್ಲಿ ಬೆಳೆಯುತ್ತಿದ್ದು, ಈ ಬಾರಿ 10,473 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಮುಂಗಾರು ಆರಂಭದಲ್ಲೆ ಬಿತ್ತನೆ ಮಾಡಿದವರ ಭೂಮಿಯಲ್ಲಿ ನೆಲಗಡಲೆ ಬಲಿತಿದೆ. ತಡವಾಗಿ ಬಿತ್ತನೆ ಮಾಡಿದವರ ಭೂಮಿಯಲ್ಲಿ ಕಾಳುಗಟ್ಟುತ್ತಿದೆ.

ಬಾಡುತ್ತಿವೆ: ಈ ಬಾರಿ ಮುಂಗಾರಿನಲ್ಲಿ ಗಟ್ಟಿ ಮಳೆಯೇ ಬರಲಿಲ್ಲ. ತುಂತುರು ಮಳೆಯೇ ಹೆಚ್ಚು ಸುರಿಯುತ್ತಿತ್ತು. ಅದರಿಂದ ಹೆಚ್ಚು ಪ್ರಯೋಜನವಿಲ್ಲ. 
 
ಕೆರೆ-ಕುಂಟೆಗಳು ತುಂಬಿಲ್ಲ. ಒಣಭೂಮಿಯಲ್ಲಿ ಮಳೆಯನ್ನು ನೆಚ್ಚಿಕೊಂಡು ಕೃಷಿ ನಡೆಸುವವರಿಗೆ ತೊಂದರೆಯಾಗಿದೆ, ಜಿಲ್ಲೆಯ ಅಲ್ಲಲ್ಲಿ ಬೆಳೆಗಳು ಬಾಡುತ್ತಿವೆ. ಪರಿಶೀಲನೆ ನಡೆಸಿ ವರದಿಯನ್ನು ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಎಂದು ಇಲಾಖೆಯ ಜಂಟಿ ನಿರ್ದೇಶಕ ಚಿಕ್ಕಣ್ಣ `ಪ್ರಜಾವಾಣಿ~ಗೆ ಗುರುವಾರ ತಿಳಿಸಿದ್ದಾರೆ.

ಮುಂಗಾರು ಅವಧಿಯಲ್ಲೂ ಮಳೆ ಸಮರ್ಪಕವಾಗಿ ಸುರಿಯಲಿಲ್ಲ, ಹಿಂಗಾರು ಅವಧಿಯ ಮಳೆ ಶುರುವಾಗಬೇಕಿತ್ತು.ಇನ್ನು ಒಂದು ವಾರ ಕಾಲ ಬೆಳೆಗಳಿಗೆ ಯಾವ ತೊಂದರೆಯೂ ಇಲ್ಲ. ಮುಂದೆಯೂ ಮಳೆ ಸಮರ್ಪಕವಾಗಿ ಸುರಿಯದಿದ್ದರೆ ತೊಂದರೆ ಎದುರಿಸಬೇಕಾಗುತ್ತದೆ ಎಂಬುದು ತಾಲ್ಲೂಕಿನ ನೆನಮನಹಳ್ಳಿಯ ರೈತ ಎನ್.ಆರ್.ಚಂದ್ರಶೇಖರ್ ಅವರ ನುಡಿ.

15 ದಿನದ ಹಿಂದೆ ಮಳೆ ಸುರಿದ ಬಳಿಕ ಮತ್ತೆ ಮಳೆಯಾಗಿಲ್ಲ. ಕಳೆ ತೆಗೆದಿರುವ ಹಂತದಲ್ಲಿರುವ ರಾಗಿಗೆ ಮಳೆ ಅತ್ಯಗತ್ಯ, ನೆಲಗಡಲೆಗೂ ಮಳೆ ಅಗತ್ಯವಾಗಿದೆ, ಇಲ್ಲದಿದ್ದರೆ ಎರಡೂ ಪ್ರಧಾನ ಬೆಳೆಗಳಿಗೆ ತೊಂದರೆ ಯಾಗುತ್ತದೆ ಎನ್ನುತ್ತಾರೆ ಕೃಷಿ ತಜ್ಞ ನೀಲಕಂಠೇಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT