ADVERTISEMENT

ಯೋಜನೆಗಳ ಸೂಕ್ತ ಮಾಹಿತಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 6:04 IST
Last Updated 14 ಸೆಪ್ಟೆಂಬರ್ 2013, 6:04 IST

ಮುಳಬಾಗಲು:ಅಭಿವೃದ್ಧಿ ಕಾಮಗಾರಿ­ಗಳ ಕುರಿತು ಸದಸ್ಯರಿಗೆ ಸೂಕ್ತ ಮಾಹಿತಿ ನೀಡುವಂತೆ ಶಾಸಕ ಕೊತ್ತೂರು ಮಂಜುನಾಥ್‌ ಸೂಚಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ನಡೆದ ವಿವಿಧ ಇಲಾಖೆಗಳ ಅಭಿವೃದ್ಧಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ,  ತೋಟಗಾರಿಕೆ, ಕೃಷಿ ಇಲಾಖೆಯಲ್ಲಿನ ನೂತನ ಯೋಜನೆ, ಅನುದಾನಗಳ ಬಗ್ಗೆ ಸದಸ್ಯ­ರಿಗೆ ಮಾಹಿತಿ ನೀಡಬೇಕು. ಸರ್ಕಾರದ ಯೋಜನೆಗಳು ಜನರಿಗೆ ಮಾಹಿತಿ ಇಲ್ಲ. ಅಧಿಕಾರಿಗಳು ಕಡ್ಡಾಯವಾಗಿ ಮಾಹಿತಿ ನೀಡಲೇಬೇಕು ಎಂದು ತಾಕೀತು ಮಾಡಿದರು.

ಮಾಹಿತಿ ದೊರೆಯದ ಕಾರಣ ನಾವು ಜನರಿಗೆ ಮಾಹಿತಿ ನೀಡಲು ಆಗುತ್ತಿಲ್ಲ ಎಂದು ಸದಸ್ಯರು ಶಾಸಕರ ಗಮನಕ್ಕೆ ತಂದರು.
ತೋಟಗಾರಿಕೆ ಇಲಾಖೆಯಿಂದ ನೀಡ­ಲಾದ ಹುರುಳಿಕಾಯಿ ಬಿತ್ತನೆ ಬೀಜ ಚಿಗುರೊಡೆಯದೆ ರೈತರಿಗೆ ನಷ್ಟವಾಗಿದೆ ಎಂದು ಸದಸ್ಯರು ಇದೇ ವೇಳೆ ಆಕ್ರೋಶ ವ್ಯಕ್ತಪಡಿ­ಸಿದರು.

ತಾಲ್ಲೂಕಿನಲ್ಲಿ  2.54 ಸೆಂ.ಮೀ ಮಳೆ ಬಿದ್ದಿದೆ. ಕಳೆದ ವಾರ ಬಿದ್ದ ಮಳೆಯ ಕಾರಣ ರಾಗಿ ಬೆಳೆ ಸ್ವಲ್ಪ ಸುಧಾರಿಸಿದೆ. 7.5 ಸಾವಿರ ಹೆಕ್ಟೆರ್‌ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿದೆ. ಶೇ 70ರಷ್ಟು ಇಳುವರಿ  ನಿರೀಕ್ಷೆ ಇದೆ. ಆದರೆ  3.5 ಸಾವಿರ ಹೆಕ್ಟೆರ್‌ ಪ್ರದೇಶದಲ್ಲಿ ಬಿತ್ತನೆಯಾಗಿರುವ ನೆಲಗಡಲೆ ಶೇ.90ರಷ್ಟು ನಷ್ಟವಾಗಿದೆ ಎಂದು ಕೃಷಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿ­ಸಿದ ಶಾಸಕರು ಮುಳಬಾಗಲು ತಾಲ್ಲೂ­ಕನ್ನು ಬರಗಾಲ ಪೀಡಿತ ಪ್ರದೇಶವಾಗಿ ಘೋಷಿಸಲು ತಾವು ಸರ್ಕಾರಕ್ಕೆ ಮನವಿ ಸಲ್ಲಿಸಿರು­ವುದಾಗಿ ಹೇಳಿದರು.

ಬೆಳೆ ನಷ್ಟ ಅಂದಾಜು ಮಾಡುವಾಗ ಕಂದಾಯ ಇಲಾಖೆ ಸಹಾಯ ಪಡೆ­ಯಲು ಸದಸ್ಯರಾದ ಶ್ರೀನಿವಾಸರೆಡ್ಡಿ ಸಭೆಯಲ್ಲಿ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯರಾದ ಲಕ್ಷ್ಮಿದೇವಮ್ಮ, ಪೆದ್ದೂರು ವೆಂಕಟ­ರಾಮ್‌, ಪಿ.ವಿ.ಶಿವರಾಮರೆಡ್ಡಿ ಹಾಜ­ರಿದ್ದರು. ತಾಲ್ಲೂಕು ವ್ಯೆದ್ಯಾಧಿಕಾರಿ ಡಾ.ಪ್ರಕಾಶ್‌ ಮಾತನಾಡಿ, ತಾಲ್ಲೂಕಿನ ಕೆಂಚನಹಳ್ಳಿ ಗ್ರಾಮದಲ್ಲಿ ಕಳೆದ ವಾರ ವರದಿಯಾದ ಜ್ವರದ ಪ್ರಕರಣಗಳು ನಿಯಂತ್ರಣಕ್ಕೆ ಬಂದಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.