ADVERTISEMENT

ರಥೋತ್ಸವದಲ್ಲಿ ರಾಜಕೀಯ ಬೇಡ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 6:13 IST
Last Updated 22 ಮಾರ್ಚ್ 2014, 6:13 IST

ಕೆಜಿಎಫ್: ನಗರದಲ್ಲಿ ನಡೆಯುತ್ತಿರುವ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಾ­ಲಯದ ಜಾತ್ರೆ ಅಂಗವಾಗಿ ದಲಿತ ಚಿನ್ನದ ರಥವನ್ನು ಎಲ್ಲ ರಾಜಕೀಯ ಪಕ್ಷಗಳು ಸಂಘಟಿಸಿದ್ದು, ಶಾಸಕಿ ವೈ.­ರಾಮಕ್ಕ, ಮಾಜಿ ಶಾಸಕ ವೈ.ಸಂಪಂಗಿ ಪಾಲ್ಗೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷ ಎಂ.ಭಕ್ತವತ್ಸಲಂ ಮನವಿ ಮಾಡಿದರು.

ಮೂರು ವರ್ಷಗಳಿಂದ ಚಿನ್ನದ ರಥ (ಗೋಲ್ಡನ್‌ ಚಾರಿಯೆಟ್‌) ಯಶಸ್ವಿ­ಯಾಗಿ ನಡೆಯಲು ಎಲ್ಲ ಪಕ್ಷಗಳ ಮುಖಂಡರು ಮಾಜಿ ಶಾಸಕ ವೈ.­ಸಂಪಂಗಿ ಅವರಿಗೆ ಬೆಂಬಲ ನೀಡಿದ್ದಾರೆ.  ಅದನ್ನು ದುರುಪಯೋಗ ಪಡಿಸಿ­ಕೊಂಡು ರಥದ ನೆಪದಲ್ಲಿ ಕೋಟ್ಯಂತರ ರೂಪಾ­ಯಿ­­ಯನ್ನು ವಸೂಲಿ ಮಾಡಿ­ದ್ದಾರೆ. ಅವರ ಅಧಿಕಾರಾವಧಿಯಲ್ಲಿ ಆರಾ­ಧನಾ ಯೋಜನೆಯಡಿ ವಿವಿಧ ದೇವಾಲ­ಯಗಳಿಗೆ ನೀಡಬೇಕಾದ ₨ 48ಲಕ್ಷ ಹಣ ದುರುಪಯೋಗವಾಗಿದೆ ಎಂದು  ಗುರು­ವಾರ ಪತ್ರಿಕಾ­ಗೋಷ್ಠಿ­ಯಲ್ಲಿ ಆರೋಪಿಸಿದರು.

ಕಳೆದ ಜಾತ್ರೆಯಲ್ಲಿ ಯುವಕರಿಗೆ ಪುಕ್ಕಟೆಯಾಗಿ ನಕಲಿ ಮದ್ಯ ನೀಡಿದಿ­ದ್ದರಿಂದ ಯುವಕನೊಬ್ಬ ಸಾವನ್ನಪ್ಪಿದ. ಇಂತಹ ಘಟನೆಗಳು ದೇವರ ಕಾರ್ಯ­ದಲ್ಲಿ ಕಪ್ಪು ಚುಕ್ಕೆಯಾಗಿದೆ. ಈ ಬಾರಿಯ ಜಾತ್ರೆಯಲ್ಲಿ ಯಾವುದೇ ಗಲಭೆಗೆ ಆಸ್ಪದ ನೀಡದಂತೆ ಉಪವಿಭಾಗಾಧಿಕಾರಿ ಸೂಚನೆ ನೀಡಿದ್ದಾರೆ, ಅದರಂತೆ ನಾವು ಕಾರ್ಯ ನಿರ್ವಹಿಸುತ್ತೇವೆ ಎಂದು ಹೇಳಿದರು.

ತಿರುಪತಿ ದೇವಾಲಯದ ಮಾದರಿ­ಯಲ್ಲಿ ಚಿನ್ನದ ಗೋಪುರದ ದಲಿತ ರಥವನ್ನು ತಯಾರು ಮಾಡಲಾಗಿದೆ. ರಥೋತ್ಸವದಲ್ಲಿ 80ಕ್ಕೂ ಹೆಚ್ಚು ವಾದ್ಯ ಕಲಾವಿದರು, ಸಾಂಸ್ಕೃತಿಕ ಕಲಾವಿದರು  ಭಾಗವಹಿಸುತ್ತಾರೆ. ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ರಥದ ಉದ್ಘಾಟನೆ ಮಾಡಲಿದ್ದಾರೆ ಎಂದು ಭಕ್ತವತ್ಸಲಂ ಹೇಳಿದರು.

ಮಾಜಿ ಶಾಸಕ ಎಸ್‌.ರಾಜೇಂದ್ರನ್‌ ಮಾತನಾಡಿ, ರಥೋತ್ಸವ ಮಾಡು­ವುದು ಇಲ್ಲಿನ ಜನರ ಹಕ್ಕು. ಅದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಶಾಸಕಿ ಮತ್ತು ಮಾಜಿ ಶಾಸಕರು ತಮ್ಮ ಜತೆ ಕೈಜೋಡಿಸಿ ಜಾತ್ರೆಯನ್ನು ಯಶಸ್ವಿಗೊಳಿಸಬೇಕು ಎಂದರು.

ನೋಟಿಸ್‌: ಈ ಮಧ್ಯೆ ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯ­ದಂತೆ ಸಹಕರಿಸಬೇಕು ಎಂದು ಪೊಲೀ­ಸರು ಮಾಜಿ ಶಾಸಕರಾದ ವೈ.ಸಂಪಂಗಿ, ಎಸ್‌.ರಾಜೇಂದ್ರನ್‌ ಮತ್ತು ಎಂ.ಭಕ್ತ­ವತ್ಸಲಂರವರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

ಏನಿದು ಚಿನ್ನದ ರಥ?
ರಾಬರ್ಟಸನ್‌ಪೇಟೆಯಲ್ಲಿರುವ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದ ಜಾತ್ರೆಯಲ್ಲಿ ಹನ್ನೆರಡು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದವು. ಪ್ರತಿ ದಿನ ಒಂದೊಂದು ಸಮುದಾಯಕ್ಕೆ ಸೇರಿದ ಸಾರ್ವಜನಿಕರು ಈ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು.

ವೈ.ಸಂಪಂಗಿ ಶಾಸಕರಾಗಿ ಆಯ್ಕೆಯಾದ ನಂತರ ಹದಿಮೂರನೇ ದಿನದಂದು ದಲಿತರಿಗಾಗಿ ಒಂದು ಉತ್ಸವ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು. ಅದರಂತೆ ಅವರಿಗೆ ಹದಿಮೂರನೇ ದಿನದಂದು ಚಿನ್ನದ ರಥ ಎಂಬ ಹೆಸರಿನಲ್ಲಿ ಉತ್ಸವ ಮಾಡಲು ಅವಕಾಶ ಮಾಡಿಕೊಡಲಾಯಿತು.

ಉತ್ಸವಕ್ಕೆ ದೇವಾಲಯದ ಉತ್ಸವ ಮೂರ್ತಿಯನ್ನು ಅಧಿಕೃತವಾಗಿ ನೀಡ­ಲಾ­ಯಿತು. ಸಂಪಂಗಿ ಅವರ ಈ ಕ್ರಮದಿಂದ ಅವರು ರಾಜಕೀಯ ಲಾಭ ಮಾಡಿ­ಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಮಾಜಿ ಶಾಸಕ ಎಂ.ಭಕ್ತವತ್ಸಲಂ ತಮಗೂ ಈ ರೀತಿಯ ಉತ್ಸವ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು. ಇತರ ಸಂಘಟನೆಗಳು ಸಹ ಇದೇ ಮಾದರಿಯಲ್ಲಿ ಮನವಿ ಸರ್ಕಾರಕ್ಕೆ ಸಲ್ಲಿಸಿದ್ದವು.

ಜಿಲ್ಲಾಡಳಿತ ಮತ್ತು ಮುಜರಾಯಿ ಇಲಾಖೆಗೆ ಈ ಬೇಡಿಕೆಗಳು ಸಾಕಷ್ಟು ಮುಜು­ಗರವನ್ನುಂಟು ಮಾಡಿತ್ತು. ಈ ಬಾರಿ ವಿವಾದ ದೊಡ್ಡದಾಗಿದ್ದು, ಜಿಲ್ಲಾ­ಡಳಿತ ಯಾವ ರೀತಿ ಸಮಸ್ಯೆ ಪರಿಹರಿಸುತ್ತದೆ ಎಂಬುದು ಕುತೂಹಲ ಕೆರಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT