ADVERTISEMENT

ರಸ್ತೆಯಲ್ಲೇ ಒಕ್ಕಣೆ; ತಪ್ಪದ ಬವಣೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 9:23 IST
Last Updated 22 ಡಿಸೆಂಬರ್ 2012, 9:23 IST

ಮುಳಬಾಗಲು: ತಾಲ್ಲೂಕಿನ ಬಹುತೇಕ ರಸ್ತೆಗಳು ಸುಗ್ಗಿ ಕಣಗಳಾಗಿ ಮಾರ್ಪಟ್ಟಿವೆ. ನಿತ್ಯ ಮುಂಜಾನೆಯಿಂದ ಮುಸ್ಸಂಜೆ ತನಕ ಒಕ್ಕಣೆ ಎಗ್ಗಿಲ್ಲದೆ ನಡೆಯುತ್ತಿದೆ.

ಕಣ ಸಂಸ್ಕೃತಿ ಈಚಿನ ದಿನಗಳಲ್ಲಿ ಕಣ್ಮರೆಯಾಗಿದೆ. ಹಳ್ಳಿಗಳಲ್ಲಿ ಊರಿಗೊಂದು, ಎರಡು ಕಣ ಕಂಡು ಬರುವುದು ಅಪರೂಪ. ರಸ್ತೆ ಸುಗ್ಗಿ ರೈತರಿಗೆ ಸುಲಭವಾದರೂ; ಉತ್ತಮವಾದುದಲ್ಲ ಎಂಬ ಅಭಿಪ್ರಾಯ ಕೃಷಿ ತಜ್ಞರದ್ದು.

ದಶಕಗಳ ಹಿಂದೆ ಸುಗ್ಗಿ ಸಂಭ್ರಮ ಎಲ್ಲ ಹಳ್ಳಿಗಳಲ್ಲಿ ಮನೆ ಹಬ್ಬವಾಗಿ ಆಚರಿಸಲ್ಪಡುತ್ತಿತ್ತು. ಪ್ರತಿಯೊಬ್ಬರೂ ವಿಶೇಷ ಆಸಕ್ತಿ ವಹಿಸುತ್ತಿದ್ದರು. ಆದರೆ ಇದೀಗ ಈ ಮನೋಭಾವ ಕುಗ್ಗುತ್ತದೆ. ಈ ಪರಿಣಾಮದಿಂದ ಒಂದೆಡೆ ರೂಪುಗೊಳ್ಳುತ್ತಿದ್ದ ಕಣಗಳು ನಾಪತ್ತೆಯಾಗಿ, ರಸ್ತೆಯೇ ಒಕ್ಕಣೆಯ ಸ್ಥಳವಾಗಿ ಮಾರ್ಪಟ್ಟಿದೆ.

ರಸ್ತೆ ಒಕ್ಕಣೆ ರೈತರ ಶ್ರಮವನ್ನು ಕಡಿಮೆ ಬೇಡಿದರೂ ಅಪಾಯ ಹೆಚ್ಚು. ಸದಾ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು. ಇದರ ಜತೆ ಸಮಸ್ಯೆಯೂ ಅಷ್ಟೇ ಗಂಭೀರ ಎನ್ನುತ್ತಾರೆ ಕೃಷಿ ತಜ್ಞರು.

ಅಪಾಯ ಹೆಚ್ಚಿದ್ದರೂ ಗ್ರಾಮಗಳಲ್ಲಿ ಮಾತ್ರ ರಸ್ತೆ ಒಕ್ಕಣೆ ನಿಂತಿಲ್ಲ. ಸಂಬಂಧಿಸಿದವರೂ ಏನೂ ಕ್ರಮಕ್ಕೆ ಮುಂದಾಗದಿರುವುದು ಸಮಸ್ಯೆ ಹೆಚ್ಚಳಕ್ಕೆ ಕಾರಣ ಎನ್ನುತ್ತಾರೆ ಪ್ರಗತಿಪರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.