ADVERTISEMENT

ರಸ್ತೆ ದುರಸ್ತಿಗೆ ಒತ್ತಾಯ: ರೈತ ಸಂಘ ಧರಣಿ

ಕೆಯುಡಬ್ಲ‍್ಯುಎಸ್‌ಡಿಬಿ ಅಧಿಕಾರಿಗಳ ವಿರುದ್ಧ ಹಸಿರು ಸೇನೆ ಸದಸ್ಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 8:33 IST
Last Updated 13 ಮಾರ್ಚ್ 2018, 8:33 IST
ಒಳಚರಂಡಿ ಕಾಮಗಾರಿಗಾಗಿ ರಸ್ತೆ ಅಗೆದು ದುರಸ್ತಿ ಮಾಡದ ಕ್ರಮ ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೋಲಾರದಲ್ಲಿ ಸೋಮವಾರ ಕೆಯುಡಬ್ಲ್ಯೂಎಸ್‌ಡಿಬಿ ಕಚೇರಿ ಎದುರು ಧರಣಿ ನಡೆಸಿದರು.
ಒಳಚರಂಡಿ ಕಾಮಗಾರಿಗಾಗಿ ರಸ್ತೆ ಅಗೆದು ದುರಸ್ತಿ ಮಾಡದ ಕ್ರಮ ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕೋಲಾರದಲ್ಲಿ ಸೋಮವಾರ ಕೆಯುಡಬ್ಲ್ಯೂಎಸ್‌ಡಿಬಿ ಕಚೇರಿ ಎದುರು ಧರಣಿ ನಡೆಸಿದರು.   

ಕೋಲಾರ: ಒಳಚರಂಡಿ ಕಾಮಗಾರಿಗಾಗಿ ನಗರದ ರಸ್ತೆಗಳನ್ನು ಅಗೆದು ದುರಸ್ತಿ ಮಾಡದ ಕ್ರಮ ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ನಗರದಲ್ಲಿ ಸೋಮವಾರ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಕೆಯುಡಬ್ಲ್ಯೂಎಸ್‌ಡಿಬಿ) ಕಚೇರಿ ಎದುರು ಧರಣಿ ನಡೆಸಿದರು.

‘ಕೆಯುಡಬ್ಲ‍್ಯುಎಸ್‌ಡಿಬಿ ವತಿಯಿಂದ ಅಮೃತ್‌ ಯೋಜನೆಯಡಿ ನಗರದಲ್ಲಿ ಯುಜಿಡಿ ಕಾಮಗಾರಿ ನಡೆಸಲಾಗಿದೆ. ಕಾಮಗಾರಿಗಾಗಿ ಬಹುಪಾಲು ರಸ್ತೆಗಳನ್ನು ಅಗೆಯಲಾಗಿದ್ದು, ನಗರವು ಗುಂಡಿಮಯವಾಗಿದೆ. ಕೆಯುಡಬ್ಲ‍್ಯುಎಸ್‌ಡಿಬಿ ಅಧಿಕಾರಿಗಳು ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆಗಳನ್ನು ದುರಸ್ತಿ ಮಾಡದೆ ನಿರ್ಲಕ್ಷ್ಯ ತೋರಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅಧಿಕಾರಿಗಳು ಚೆನ್ನಾಗಿದ್ದ ರಸ್ತೆಗಳನ್ನು ಯುಜಿಡಿ ಕಾಮಗಾರಿಗಾಗಿ ಅಗೆದು ಹಾಳು ಮಾಡಿದ್ದಾರೆ. ಯುಜಿಡಿ ಕಾಮಗಾರಿಯಿಂದ ರಸ್ತೆಗಳ ಚಿತ್ರಣವೇ ಬದಲಾಗಿದ್ದು, ಸಾರ್ವಜನಿಕರು ಪ್ರತಿನಿತ್ಯ ಬವಣೆ ಪಡುವಂತಾಗಿದೆ. ನಗರದಲ್ಲಿ ದೂಳಿನ ಪ್ರಮಾಣ ಹೆಚ್ಚಿದ್ದು, ಜನ ಮನೆಯಿಂದ ಹೊರ ಬರುವುದೇ ಕಷ್ಟವಾಗಿದೆ. ಇದಕ್ಕೆಲ್ಲಾ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ದೂರಿದರು.

ADVERTISEMENT

ರಸ್ತೆಗಳ ದುಸ್ಥಿತಿಯಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ. ಈಗಾಗಲೇ ಹಲವು ಬೈಕ್‌ ಸವಾರರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಆದರೆ, ಅಧಿಕಾರಿಗಳಿಗೆ ರಸ್ತೆ ಸರಿಪಡಿಸುವ ಜವಾಬ್ದಾರಿ ಇಲ್ಲ. ಸಾರ್ವಜನಿಕರು ರಸ್ತೆ ದುರಸ್ತಿಗೆ ಒತ್ತಾಯಿಸಿದರೆ ಕುಂಟು ನೆಪ ಹೇಳುತ್ತಾ ಕಾಲ ದೂಡುತ್ತಿದ್ದಾರೆ ಎಂದು ಆರೋಪಿಸಿದರು.

ನೀರು ಪೋಲಾಗುತ್ತಿದೆ: ‘ಯುಜಿಡಿ ಕಾಮಗಾರಿಯಿಂದ ಹಲವೆಡೆ ಕುಡಿಯುವ ನೀರು ಸರಬರಾಜಿನ ಪೈಪ್‌ಗಳಿಗೆ ಹಾನಿಯಾಗಿದೆ. ಇದರಿಂದ ಕುಡಿಯುವ ನೀರು ಪೋಲಾಗುತ್ತಿದೆ. ಹಲವು ಮನೆಗಳ ನಲ್ಲಿಯಲ್ಲಿ ಕೊಳಚೆ ನೀರು ಬರುತ್ತಿದೆ. ಸಾಕಷ್ಟು ಬಡಾವಣೆಗಳಲ್ಲಿ ಯುಜಿಡಿ ಸೌಕರ್ಯವಿದ್ದರೂ ಅಧಿಕಾರಿಗಳು ಮತ್ತೆ ಅದೇ ಭಾಗದಲ್ಲಿ ಕಾಮಗಾರಿ ನಡೆಸಿದ್ದಾರೆ’ ಎಂದು ಧರಣಿನಿರತರು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಯು ರಸ್ತೆಗಳ ದುಸ್ಥಿತಿ ಬಗ್ಗೆ ಗಮನ ಹರಿಸುತ್ತಿಲ್ಲ. ಕ್ಷೇತ್ರದ ಶಾಸಕರು ಇತ್ತ ತಿರುಗಿಯೂ ನೋಡಿಲ್ಲ. ರಸ್ತೆ ದುರಸ್ತಿ ಮಾಡದ ಗುತ್ತಿಗೆದಾರರಿಗೆ ಬಿಲ್‌ ಪಾವತಿಸಬಾರದು. ರಸ್ತೆಗಳಿಗೆ ಶೀಘ್ರವೇ ಡಾಂಬರು ಹಾಕಬೇಕು. ಕಳಪೆ ಕಾಮಗಾರಿ ಸಂಬಂಧ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಕಾರ್ಯಾಧ್ಯಕ್ಷ ಸಾಗರ್, ಪ್ರಧಾನ ಕಾರ್ಯದರ್ಶಿ ಶಿವಾರೆಡ್ಡಿ, ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್, ಬಂಗಾರಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಅಂಬರೀಶ್‌ ಪಾಲ್ಗೊಂಡಿದ್ದರು.

*
ಅಮೃತ್‌ ಯೋಜನೆಯಡಿ ಕೈಗೆತ್ತಿಕೊಂಡಿರುವ ಯುಜಿಡಿ ಕಾಮಗಾರಿ ಅವೈಜ್ಞಾನಿಕವಾಗಿದೆ. ಕೆಯುಡಬ್ಲ್ಯೂಎಸ್‌ಡಿಬಿ ಅಧಿಕಾರಿಗಳು ಕಾಮಗಾರಿ ನೆಪದಲ್ಲಿ ಸರ್ಕಾರಿ ಹಣ ಲೂಟಿ ಮಾಡಿದ್ದಾರೆ.
–ಕೆ.ನಾರಾಯಣಗೌಡ, ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.