ಕೋಲಾರ: ಅಲ್ಲಿದ್ದವರೆಲ್ಲರೂ ಸರ್ಕಾರಿ ನೌಕರರೇ ಆಗಿದ್ದರು. ಆದರೆ ಅವರ ಚುನಾವಣೆ ಪ್ರಚಾರದ ಕಾರ್ಯವೈಖರಿ ಎದುರು ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತರ ಕಾರ್ಯವೈಖರಿಯು ಕಡಿಮೆ ಬರುವಂತೆ ತೋರುತ್ತಿತ್ತು.
ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಪ್ರತಿನಿಧಿಗಳ ಆಯ್ಕೆಯ ಸಲುವಾಗಿ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಚುನಾವಣೆ ಸಂದರ್ಭದಲ್ಲಿ ಸರ್ಕಾರಿ ನೌಕರರು ರಾಜಕೀಯ ಪಕ್ಷಗಳ ಕಾರ್ಯಕರ್ತರಂತೆ ಓಡಾಡಿದರು.
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಮತ್ತು ಅಲ್ಪಸಂಖ್ಯಾತರ ಇಲಾಖೆ ಸೇರಿ ಇರುವ 1 ಸ್ಥಾನ, ಕರ್ನಾಟಕ ಸರ್ಕಾರ ವಿಮಾ ಇಲಾಖೆಯ 1 ಸ್ಥಾನ, ಪ್ರಾಥಮಿಕ ಶಾಲೆಗಳ 4 ಸ್ಥಾನ, ಪ್ರೌಢಶಾಲೆಗಳ 2 ಸ್ಥಾನ ಮತ್ತು ಎನ್‌ಸಿಸಿ ಮತ್ತು ಕಾರಾಗೃಹ ಇಲಾಖೆಯ 1 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಒಟ್ಟು 23 ಸ್ಪರ್ಧಿಗಳಿದ್ದರು.
ಚುನಾವಣೆ ಸಲುವಾಗಿ 8 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಕಾಲೇಜಿನ ಹೊರ ಆವರಣದಲ್ಲಿ ಅಳವಡಿಸಲಾಗಿದ್ದ ಪೆಂಡಾಲುಗಳ ಕೆಳಗೆ ನಿಂತ ಪ್ರತಿಯೊಬ್ಬ ಆಕಾಂಕ್ಷಿ ಮತ್ತು ಅವರ ಬೆಂಬಲಿಗರು, ಮತ ಚಲಾಯಿಸಲಿದ್ದ ಒಟ್ಟು 1530 ಮತದಾರರನ್ನು ಸೆಳೆಯಲು ತೀವ್ರ ರೀತಿಯ ಪ್ರಯತ್ನ ನಡೆಸಿದ್ದರು.
ಕೆಲವು ಅಭ್ಯರ್ಥಿಗಳು ಕಾರ್ಯಕರ್ತರಿಗೆ ಟೋಪಿಗಳನ್ನೂ ಹಂಚಿದರು. ಅಭ್ಯರ್ಥಿಗಳ ಪರವಾಗಿ ಪೆಂಡಾಲುಗಳ ಕೆಳಗೆ ಉದ್ದಕ್ಕೂ ಕುಳಿತು ಮತದಾರರ ಪಟ್ಟಿಗಳೊಂದಿಗೆ ಸಿದ್ಧರಾಗಿದ್ದ ಕಾರ್ಯಕರ್ತರಿದ್ದರು. ಮತದಾರರನ್ನು ಓಲೈಸುವ ಸಲುವಾಗಿಯೇ ಹಲವರು ಗುಂಪು ಮಾಡಿಕೊಂಡು ಉದ್ದಕ್ಕೂ ನಡೆದಾಡುತ್ತಿದ್ದರು. ಮತದಾರರನ್ನು ವಾಹನಗಳಲ್ಲಿ ಕರೆತಂದು ಮತಗಟ್ಟೆಯವರೆಗೆ ಕರೆದೊಯ್ಯುವ ವ್ಯವಸ್ಥೆಯೂ ಇತ್ತು. ಮುಖ್ಯ ಗೇಟ್‌ನಲ್ಲೇ ಕೈಮುಗಿದು ನಿಂತು ಮತ ಯಾಚಿಸುತ್ತಿದ್ದ ಅಭ್ಯರ್ಥಿಗಳಿದ್ದರು. ಅವರ ಪರವಾಗಿ ಚೀಟಿಗಳನ್ನು ಕೊಟ್ಟು ಪ್ರಚಾರ ನಡೆಸುವ ಮಂದಿಯೂ ಇದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡಿದರು.
ಮತಗಟ್ಟೆ ಸಮೀಪಕ್ಕೆ ಬಂದು ಮತದಾರರನ್ನು ಓಲೈಸುತ್ತಿದ್ದ ಕಾರ್ಯಕರ್ತ ನೌಕರರನ್ನು ಕಾಲೇಜು ಆವರಣದಿಂದ ಹೊರಕ್ಕೆ ಕಳಿಸಲೂ ಅವರು ಶ್ರಮಪಡಬೇಕಾಯಿತು.
ಚುನಾವಣಾಧಿಕಾರಿಯಾಗಿ ನರಸಿಂಹಯ್ಯ ಮತ್ತು ಸಹಾಯಕ ಚುನಾವಣಾಧಿಕಾರಿಯಾಗಿ ಎಚ್.ಎಂ.ರಾಮಚಂದ್ರ ಕಾರ್ಯನಿರ್ವಹಿಸಿದರು.
ಆಯ್ಕೆಯಾದವರು: ವಿಮಾ ಇಲಾಖೆ ಪ್ರತಿನಿಧಿಯಾಗಿ ಆರ್.ತಿಮ್ಮಪ್ಪ ಆಯ್ಕೆಯಾದರು. 11 ಮತಗಳ ಪೈಕಿ 10 ಚಲಾವಣೆಗೊಂಡಿದ್ದವು. ತಿಮ್ಮಪ್ಪ ಮತ್ತು ನಾಗರಾಜ ತಲಾ 5 ಮತ ಗಳಿಸಿದ ಹಿನ್ನೆಲೆಯಲ್ಲಿ ಲಾಟರಿ ಮೂಲಕ ತಿಮ್ಮಪ್ಪ ಅವರನ್ನು ಆಯ್ಕೆ ಮಾಡಲಾಯಿತು.
ಪ್ರೌಢಶಾಲೆ ವಿಭಾಗದ ಎರಡು ಸ್ಥಾನಗಳಿಗೆ ವಿ.ಮುರಳಿ ಮೋಹನ್ 138 ಮತ ಮತ್ತು ಎಸ್.ಚೌಡಪ್ಪ 114 ಮತ ಗಳಿಸಿ ಆಯ್ಕೆಯಾದರು. ಎನ್‌ಸಿಸಿ ಮತ್ತು ಕಾರಾಗೃಹ ಇಲಾಖೆಯಲ್ಲಿ ವಿ.ಶ್ರೀರಾಂ (6 ಮತ) , ಸಮಾಜ ಕಲ್ಯಾಣ-ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಎಚ್.ಎನ್.ರವಿಕುಮಾರ್ (20) ಆಯ್ಕೆಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.