ADVERTISEMENT

ರಾಜ್ಯದ ಅನುದಾನ ಕಾಂಗ್ರೆಸ್‌ ಹೈಕಮಾಂಡ್‌ಗೆ

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಗಂಭೀರ ಆರೋಪ

​ಪ್ರಜಾವಾಣಿ ವಾರ್ತೆ
Published 6 ಮೇ 2018, 11:44 IST
Last Updated 6 ಮೇ 2018, 11:44 IST

ಕೋಲಾರ: ‘ರಾಜ್ಯದ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನವನ್ನು ಕಾಂಗ್ರೆಸ್‌ನವರು ಹೈಕಮಾಂಡ್‌ಗೆ ತಲುಪಿಸುತ್ತಿದ್ದಾರೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.

ನಗರದಲ್ಲಿ ಶನಿವಾರ ನಡೆದ ಜೆಡಿಎಸ್‌ ಮತ್ತು ಬಿಎಸ್‌ಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ‘ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲುವ ಭೀತಿಯಿಂದ ಪ್ರಚಾರಕ್ಕಾಗಿ ಚಿತ್ರ ನಟರನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಆದರೆ, ಎರಡೂ ಕ್ಷೇತ್ರಗಳಲ್ಲಿ ಅವರ ಸೋಲು ಖಚಿತ’ ಎಂದರು.

‘ಪಕ್ಷವು ಚುನಾವಣೆಯಲ್ಲಿ 115 ಸ್ಥಾನ ಗೆಲ್ಲುವ ವಿಶ್ವಾಸವಿದೆ. ಹೀಗಾಗಿ ಬೇರೆ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯವಿಲ್ಲ. ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಜೆಡಿಎಸ್‌ಗೆ ಸರ್ಕಾರ ನಡೆಸಲು ಅವಕಾಶ ಕೊಡಬೇಕು’ ಎಂದು ಮನವಿ ಮಾಡಿದರು.

ADVERTISEMENT

‘ರಾಜ್ಯದಲ್ಲಿ ಪಕ್ಷವು ಅಧಿಕಾರಕ್ಕೆ ಬಂದ 24 ತಾಸಿನಲ್ಲಿ ರೈತರ ಸಾಲ ಮನ್ನಾ ಮಾಡುತ್ತೇವೆ. ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಮಾಡುವ ಮೂಲಕ ರೈತರ ಸಬಲೀಕರಣಕ್ಕೆ ಒತ್ತು ನೀಡುತ್ತೇವೆ. ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೆಲ್ಲಾ ತಡೆಯುವುದು ಪಕ್ಷದ ಉದ್ದೇಶ’ ಎಂದು ಹೇಳಿದರು.

ಬೆಳೆ ನಷ್ಟಕ್ಕೆ ಪರಿಹಾರ: ‘ತಾಯಿ ಮಗುವಿನ ಖಾತೆಗೆ ತಿಂಗಳಿಗೆ ₹ ೬ ಸಾವಿರ ಹಾಕುವುದರ ಜತೆಗೆ ಇಡೀ ದೇಶಕ್ಕೆ ಮಾದರಿಯಾಗುವ ಕಾರ್ಯಕ್ರಮ ರೂಪಿಸಲು ಚಿಂತಿಸಲಾಗಿದೆ. ವಿಧವಾ ವೇತನ ಮತ್ತು ಅಂಗವಿಲಕರ ಮಾಸಾಶನ ಹೆಚ್ಚಿಸುತ್ತೇವೆ. ಮಾವು ಬೆಳೆ ನಷ್ಟಕ್ಕೆ ಪರಿಹಾರ ಕಲ್ಪಿಸುತ್ತೇವೆ ಮತ್ತು ಮಾವನ್ನು ವಿದೇಶಕ್ಕೆ ರಫ್ತು ಮಾಡಲು ಸಹಕರಿಸುತ್ತೇವೆ’ ಎಂದು ಭರವಸೆ ನೀಡಿದರು.

‘ರಾಷ್ಟ್ರೀಯ ಪಕ್ಷಗಳನ್ನು ರಾಜ್ಯದಿಂದ ಹೊರ ಹಾಕಲು ಹೋರಾಟ ನಡೆಸುತ್ತಿದ್ದೇವೆ. ಇಸ್ರೇಲ್ ಮಾದರಿಯ ಕೃಷಿ ಪದ್ಧತಿ ಅಳವಡಿಸಿಕೊಳ್ಳುವಂತೆ ರೈತರನ್ನು ಪ್ರೋತ್ಸಾಹಿಸಲಾಗುತ್ತದೆ. ಥೈಲ್ಯಾಂಡ್‌ನಲ್ಲಿ ರೇಷ್ಮೆಯಿಂದ 32ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಆದೇ ರೀತಿಯ ಕಾರ್ಖಾನೆಗಳನ್ನು ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಾಪನೆ ಮಾಡಲಾಗುತ್ತದೆ’ ಎಂದು ಹೇಳಿದರು.

ಶಿಕ್ಷೆ ನೀಡಿದೆ: ‘ಕ್ಷೇತ್ರದಲ್ಲಿ ದಲಿತರ ಭೂಮಿ ಕಬಳಿಸಿರುವ ಶಾಸಕ ವರ್ತೂರು ಪ್ರಕಾಶ್‌, ವಿಧಾನ ಸೌಧದಲ್ಲಿ ಭ್ರಷ್ಟಾಚಾರದ ಪಾಠ ಮಾಡುವ ಸಚಿವ ರಮೇಶ್‌ಕುಮಾರ್‌ಗೆ ಮತದಾರರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು. ದಲಿತ ಮುಖಂಡರನ್ನು ಶೂಗೆ ಹೊಲಿಸಿದ್ದ ಶಾಸಕ ಕೊತ್ತೂರು ಮಂಜುನಾಥ್‌ಗೆ ನ್ಯಾಯಾಲಯವೇ ಶಿಕ್ಷೆ ನೀಡಿದೆ’ ಎಂದು ಕುಟುಕಿದರು.

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ, ಸಂಸದ ಸತೀಶ್ ಶರ್ಮ, ವಿವಿಧ ಕ್ಷೇತ್ರಗಳ ಅಭ್ಯರ್ಥಿಗಳಾದ ಜಿ.ಕೆ.ವೆಂಕಟಶಿವಾರೆಡ್ಡಿ, ಕೆ.ಶ್ರೀನಿವಾಸಗೌಡ, ಕೆ.ಎಸ್.ಮಂಜುನಾಥ್‌ಗೌಡ, ಮಲ್ಲೇಶ್‌ಬಾಬು, ಭಕ್ತವತ್ಸಲಂ, ಸಮೃದ್ಧಿ ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ರಮೇಶ್‌ಬಾಬು, ಆರ್.ಚೌಡರೆಡ್ಡಿ, ಶರವಣ ಪಾಲ್ಗೊಂಡಿದ್ದರು.

ಟೊಮೆಟೊ ಹಾರ

ಸಮಾವೇಶಕ್ಕೆ ಬಂದಿದ್ದ ಕುಮಾರಸ್ವಾಮಿ ಅವರನ್ನು ಸ್ವಾಗತಿಸಲು ಎಪಿಎಂಸಿ ಮಾರುಕಟ್ಟೆ ದಲ್ಲಾಳಿಗಳ ಸಂಘದ ಸದಸ್ಯರು ಸುಮಾರು 1 ಕ್ವಿಂಟಾಲ್‌ ತೂಕದ ಟೊಮೆಟೊ ಹಾರ ಸಿದ್ಧ ಮಾಡಿಸಿದ್ದರು. ಸಮಾವೇಶ ಸ್ಥಳದ ಪ್ರವೇಶ ಭಾಗದಲ್ಲಿ ಕ್ರೇನ್‌ನ ಸಹಾಯದಿಂದ ಆ ಹಾರವನ್ನು ಮೇಲೆತ್ತಿ ಕುಮಾರಸ್ವಾಮಿ ಅವರನ್ನು ಸ್ವಾಗತಿಸಲಾಯಿತು.

**
ರಾಜ್ಯದಲ್ಲಿ ಜನ ಜೆಡಿಎಸ್ ಪರ ಒಲವು ತೋರುತ್ತಿರುವುದನ್ನು ಕಂಡು ದಿಗಿಲು ಬಿದ್ದಿರುವ ಯಡಿಯೂರಪ್ಪ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಸಾಲ ಮನ್ನಾ ಘೋಷಿಸಿದ್ದಾರೆ
– ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.