ADVERTISEMENT

ವಂತಿಗೆ ಹಾವಳಿ ತಡೆಗೆ ದಲಿತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 13:24 IST
Last Updated 1 ಜೂನ್ 2018, 13:24 IST

ಕೋಲಾರ: ಖಾಸಗಿ ಶಿಕ್ಷಣ ಸಂಸ್ಥೆಗಳ ವಂತಿಗೆ ಹಾವಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಪ್ರಜಾಸೇನೆ ಸದಸ್ಯರು ನಗರದಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

‘ಜಿಲ್ಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ವಂತಿಗೆ ಹಾವಳಿ ಮಿತಿ ಮೀರಿದ್ದು, ಇದಕ್ಕೆ ಕಡಿವಾಣ ಹಾಕುವಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಖಾಸಗಿ ಶಿಕ್ಷಣ ಸಂಸ್ಥೆಗಳು ವಂತಿಗೆ ದಂಧೆಗೆ ಇಳಿದಿವೆ. ಇದರಿಂದ ಬಡ ವಿದ್ಯಾರ್ಥಿಗಳು ಮತ್ತು ಪೋಷಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಂತಿಗೆ ದಂಧೆ ನಿಯಂತ್ರಿಸಬೇಕಾದ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ’ ಎಂದು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ವಿ.ಮುನಿರಾಜು ದೂರಿದರು.

ADVERTISEMENT

‘ವಂತಿಗೆ ಪಡೆಯಬಾರದೆಂದು ಸರ್ಕಾರದ ಆದೇಶವಿದೆ. ಆದರೆ, ಶಿಕ್ಷಣ ಸಂಸ್ಥೆಗಳು ಈ ಆದೇಶ ಉಲ್ಲಂಘಿಸಿ ಪೋಷಕರನ್ನು ಶೋಷಿಸುತ್ತಿವೆ. ಜನರಿಗೆ ಜೀವನ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲೂ ಖಾಸಗಿ ಶಿಕ್ಷಣ ಸಂಸ್ಥೆಗಳು ವಂತಿಗೆ ಸೋಗಿನಲ್ಲಿ ಪೋಷಕರ ರಕ್ತ ಹೀರುತ್ತಿವೆ’ ಎಂದರು.

ಶಿಕ್ಷಣ ಮೊಟಕು: ‘ಶಿಕ್ಷಣ ಸಂಸ್ಥೆಗಳು ಪ್ರವೇಶ ಶುಲ್ಕ, ಪಠ್ಯಪುಸ್ತಕ, ಬಸ್‌ ಸೌಲಭ್ಯ, ಸಿಇಟಿ ತರಬೇತಿ, ಸಮವಸ್ತ್ರ, ಮನೆಪಾಠ ಶುಲ್ಕದ ನೆಪ
ದಲ್ಲಿ ಪೋಷಕರಿಂದ ಹಣ ಸುಲಿಗೆ ಮಾಡುತ್ತಿವೆ. ಬಡ ವಿದ್ಯಾರ್ಥಿಗಳು ದುಬಾರಿ ವಂತಿಗೆ ಪಾವತಿಸಲಾಗದೆ ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸುತ್ತಿದ್ದಾರೆ. ಅಧಿಕಾರಿಗಳು ಶಿಕ್ಷಣ ಸಂಸ್ಥೆಗಳ ಜತೆ ಸೇರಿ ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ’ ಎಂದು ಧರಣಿನಿರತರು ಆರೋಪಿಸಿದರು.

‘ವಂತಿಗೆ ಪಾವತಿಸಲು ಸಾಧ್ಯವಾಗದ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲಾ ಕಾಲೇಜುಗಳಿಗೆ ಸೇರಿಸುತ್ತಿದ್ದಾರೆ. ಆದರೆ, ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಮೂಲಸೌಕರ್ಯ ಸಮಸ್ಯೆಯಿದೆ. ಉಪನ್ಯಾಸಕರು ಹಾಗೂ ಶಿಕ್ಷಕರ ಕೊರತೆಯಿಂದ ಪಠ್ಯ ಬೋಧನೆ ಸರಿಯಾಗಿ ನಡೆಯುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೀಗಮುದ್ರೆ ಹಾಕಬೇಕು: ‘ಸರ್ಕಾರಿ ಅಧಿಕಾರಿಗಳು, ನೌಕರರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಿಗೆ ದಾಖಲಿಸ
ಬೇಕೆಂದು ಸರ್ಕಾರ ಆದೇಶ ಹೊರಡಿಸಬೇಕು. ವಂತಿಗೆ ಪಡೆಯುವ ಶಿಕ್ಷಣ ಸಂಸ್ಥೆಗಳಿಗೆ ಬೀಗಮುದ್ರೆ ಹಾಕಬೇಕು. ಅಂತಹ ಸಂಸ್ಥೆಗಳಿಗೆ ದಂಡ ವಿಧಿಸಿ ಪರವಾನಗಿ ರದ್ದುಪಡಿಸಬೇಕು. ಜತೆಗೆ ಸಂಸ್ಥೆಗಳ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿದರು.

ಸಂಘಟನೆ ಸದಸ್ಯರಾದ ವೆಂಕಟೇಶ್, ಮುನಿಯಪ್ಪ, ರಮೇಶ್, ನಾರಾಯಣಸ್ವಾಮಿ, ಲಿಂಗತ್ವ ಮತ್ತು ಲೈಂಗಿಕ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷೆ ಅಶ್ವಿನಿ ರಾಜನ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.