ADVERTISEMENT

ವಾಣಿಜ್ಯ ಮಳಿಗೆ ಬಾಡಿಗೆ ಹೆಚ್ಚಳಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2011, 8:55 IST
Last Updated 6 ಫೆಬ್ರುವರಿ 2011, 8:55 IST

ಕೆಜಿಎಫ್: ರಾಬರ್ಟಸನ್‌ಪೇಟೆ ಎಂ.ಜಿ.ಮಾರುಕಟ್ಟೆ ವಾಣಿಜ್ಯ ಸಂಕೀರ್ಣದಲ್ಲಿರುವ ಅಂಗಡಿಗಳ ಬಾಡಿಗೆ ದರ ಹೆಚ್ಚಳ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲು ಶುಕ್ರವಾರ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.ವಾಣಿಜ್ಯ ಸಂಕೀರ್ಣದಲ್ಲಿರುವ ಅಂಗಡಿ ಮಾಲೀಕರು ನಗರಸಭೆಗೆ ಮನವಿ ನೀಡಿದ್ದಾರೆ. ಮುಂಭಾಗದ ಅಂಗಡಿಗಳ ಬಾಡಿಗೆಯನ್ನು ಶೇ.100 ಮತ್ತು ಹಿಂಭಾಗದ ಅಂಗಡಿಗಳ ಬಾಡಿಗೆಯನ್ನು ಶೇ.50ರಷ್ಟು ಹೆಚ್ಚಿಸುವ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಅಧಿವೇಶನದಲ್ಲಿ ಮನವಿಯ ವಿಷಯ ಮಂಡನೆ ಮಾಡಲಾಯಿತು.

ಈ ಸಂಬಂಧ ಅಂಗಡಿ ಹರಾಜು ಮಾಡುವುದು ಸೂಕ್ತ ಎಂದು ಆಯುಕ್ತ ಭೀಮನೇಡಿ ಅಭಿಪ್ರಾಯ ಸೂಚಿಸಿದರು. ಅದಕ್ಕೆ ಸದಸ್ಯೆ ತಂಗತಾಯಿ ಸಹ ಅನುಮೋದನೆ ನೀಡಿದರು. ಆದರೆ ಬಹುತೇಕ ಸದಸ್ಯರು ಬಾಡಿಗೆ ಹೆಚ್ಚಿಸಿ ಈಗಿನ ಅಂಗಡಿ ಮಾಲೀಕರೇ ಮುಂದುವರೆಯಲು ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ನಂತರ ವಾಣಿಜ್ಯ ಸಂಕೀರ್ಣದ ಮುಂಭಾಗದ ಅಂಗಡಿಗಳಿಗೆ ಶೇ.150ರಷ್ಟು ಹಾಗೂ ಹಿಂಭಾಗದ ಅಂಗಡಿಗಳಿಗೆ ಶೇ.100ರಷ್ಟು ಬಾಡಿಗೆ ಹೆಚ್ಚು ಮಾಡಲು ಸಭೆ ನಿರ್ಧಾರ ಮಾಡಿತು.ಚರ್ಚೆ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಎಂ.ಭಕ್ತವತ್ಸಲಂ ಸದಸ್ಯರ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದಾಗ, ಕಾಂಗ್ರೆಸ್ ಸದಸ್ಯ ರಷೀದ್‌ಖಾನ್ ಆಕ್ಷೇಪ ವ್ಯಕ್ತಪಡಿಸಿದರು.

ಅಧ್ಯಕ್ಷರು ಇರುವಾಗ ಉಪಾಧ್ಯಕ್ಷರು ಉತ್ತರ ನೀಡುವುದು ಸರಿಯಲ್ಲ ಎಂದರು. ಈ ಸಂದರ್ಭದಲ್ಲಿ ಕುಮಾರ್ ಮತ್ತು ಕುಲಶೇಖರ್ ರಷೀದ್‌ಖಾನ್ ವಿರುದ್ಧ ವಾಗ್ದಾಳಿ ನಡೆಸಿದಾಗ ಸಭೆಯಲ್ಲಿ ಗಂಭೀರ ವಾತಾವರಣ ಉಂಟಾಯಿತು.

ಎಂ.ಜಿ.ಮಾರುಕಟ್ಟೆಯಲ್ಲಿ ನಗರಸಭೆ ವತಿಯಿಂದ ಅಂಗಡಿಗಳನ್ನು ನಡೆಸುತ್ತಿರುವ ಮಾಲೀಕರು ತಮ್ಮ ಮುಂದಿನ ಜಾಗವನ್ನು ಫುಟ್‌ಪಾತ್ ವ್ಯಾಪಾರಿಗಳಿಗೆ ದಿನನಿತ್ಯದ ನೆಲ ಬಾಡಿಗೆ ನೀಡಿ ಆದಾಯ ಗಳಿಸುತ್ತಿದ್ದಾರೆ ಎಂದು ವಿಷಯವಾಗಿ ಸಭೆಯಲ್ಲಿ ಚರ್ಚೆ ನಡೆದು, ಇನ್ನು ಮುಂದೆ ಫುಟ್‌ಪಾತ್ ವ್ಯಾಪಾರಿಗಳಿಂದ ನೆಲ ಬಾಡಿಗೆಯನ್ನು ನಗರಸಭೆಯೆ ವಸೂಲಿ ಮಾಡಿ ಸಂಪನ್ಮೂಲ ಕ್ರೋಢೀಕರಣ ಮಾಡಬೇಕು ಎಂದು ತೀರ್ಮಾನಿಸಲಾಯಿತು.

ಪ್ರಸ್ತುತ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ತಾರತಮ್ಯ ಎಸಗಲಾಗುತ್ತಿದೆ ಎಂದು ತಂಗತಾಯಿ ದೂರಿದರು. ಮುಂದಿನ ಕಾಮಗಾರಿಗಳಲ್ಲಿ ಈಗ ಉಂಟಾಗಿರುವ ಲೋಪಗಳನ್ನು ಸರಿಪಡಿಸುವುದಾಗಿ ಅಧ್ಯಕ್ಷ ದಯಾನಂದ ಭರವಸೆ ನೀಡಿದರು.ನಗರಸಭೆ ವ್ಯಾಪ್ತಿಯಲ್ಲಿರುವ ಖಾಲಿ ನಿವೇಶನ ಮತ್ತು ಅಂಗಡಿಗಳನ್ನು ಹರಾಜು ಹಾಕಲು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶ್ರೀಧರ್ ಸ್ವಾಗತಿಸಿದರು. ವ್ಯವಸ್ಥಾಪಕ ಶ್ರೀಕಾಂತ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.