ADVERTISEMENT

ವಿದ್ಯುತ್ ಶಾರ್ಟ್‌ ಸರ್ಕೀಟ್: ಹೊತ್ತಿ ಉರಿದ ಕಾರ್ಖಾನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2015, 5:13 IST
Last Updated 18 ಫೆಬ್ರುವರಿ 2015, 5:13 IST

ಮಾಲೂರು: ಪಟ್ಟಣದ ರೈಲ್ವೆ ಸೇತುವೆ ಬಳಿ ಇರುವ ಚಿಂದಿ ಬಟ್ಟೆಯಿಂದ ವೇಸ್ಟ್ ತಯಾರಿಸುವ ಘಟಕದಲ್ಲಿ ಮಂಗಳವಾರ ಬೆಂಕಿ ಅನಾಹುತ ಸಂಭವಿಸಿತು. ಯಂತ್ರಗಳು ಸೇರಿದಂತೆ ಚಿಂದಿ ಬಟ್ಟೆಗಳ ಮೂಟೆಗಳು ಸುಟ್ಟು ಕರಕಲಾದವು.

ಕೆಲವೇ ಕ್ಷಣದಲ್ಲಿ ಬೆಂಕಿ ಆವಸರಿದ್ದರಿಂದ ಶೆಡ್‌­ನಲ್ಲಿದ್ದ ಯಂತ್ರಗಳು, ಬಟ್ಟೆ– ವೇಸ್ಟ್‌ ತುಂಬಿದ್ದ ಚೀಲ­ಗಳು ಸುಟ್ಟು ಹೋದವು. ಕಾರ್ಮಿಕರು ಕಾರ್ಖಾನೆ­ಯಿಂದ ಹೊರ ಬಂದು ಸಹಾಯಕ್ಕಾಗಿ ಕೂಗಿ­ಕೊಂಡರು. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಅಕ್ಕ–ಪಕ್ಕದ ಮನೆಯವರ ನೆರವಿನಿಂದ ಟ್ಯಾಂಕರ್‌­ಗಳ ಮೂಲಕ ೨ ಗಂಟೆ ಕಾಲ ನೀರು ಸಿಂಪಡಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಆಕ್ರೋಶ: ತಾಲ್ಲೂಕಿನ ವಿವಿಧೆಡೆ ಕಾರ್ಖಾನೆಗಳು ಪ್ರಾರಂಭವಾಗಿದೆ. ಆದರೆ ಯಾವುದೇ ಬೆಂಕಿ ಅವಘಡ ನಡೆದರೂ ಅಗ್ನಿಶಾಮಕ ದಳದ ಸಹಾಯ ಸಿಗುವು­ದಿಲ್ಲ. ಅಗ್ನಿ ಅನಾಹುತ ಸಂಭವಿಸಿ­ದಾಗ ಕೋಲಾರ ಅಥವಾ ಹೊಸಕೋಟೆಯಿಂದ ಅಗ್ನಿ­ಶಾಮಕ ವಾಹನ­ಗಳು ಬರಬೇಕು.

ಅವು ಬರುವ ಹೊತ್ತಿಗೆ ಬೆಂಕಿ ವ್ಯಾಪಕವಾಗಿ ಆವರಿಸಿ­ರುತ್ತದೆ. ಪಟ್ಟಣದಲ್ಲಿ ಕಳೆದ ೫ ವರ್ಷದಿಂದ ಅಗ್ನಿಶಾಮಕ ಠಾಣೆ ಕಟ್ಟಡ ನಿರ್ಮಾಣ ಕುಂಟುತ್ತಾ ಸಾಗಿದೆ. ಅಧಿಕಾರಿಗಳು ಶೀಘ್ರ ಎಚ್ಚೆತ್ತುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.

ವಿದ್ಯುತ್ ಕಂಬಕ್ಕೆ ಆಟೊ ಡಿಕ್ಕಿ
ಮುಳಬಾಗಲು: ತಾಲ್ಲೂಕಿನ ವಿರೂಪಾಕ್ಷಿ ಗ್ರಾಮದಲ್ಲಿ ಸೋಮವಾರ ರಾತ್ರಿ ಆಟೊ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ನಿವಾಸಿ ಗಣೇಶ್ ಗಾಯಗೊಂಡರು. ವಿದ್ಯುತ್ ಕಂಬ ಮುರಿದಿದೆ.

ರಸ್ತೆಯು ಚಿಕ್ಕದಾಗಿದೆ. ರಾತ್ರಿ ವೇಳೆ ಎದುರಿನಿಂದ ಬರುವ ವಾಹನಗಳ ಪ್ರಖರ ಬೆಳಕಿನ ಕಾರಣ ದಾರಿ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ರಸ್ತೆಗೆ ಹೊಂದಿಕೊಂ­ಡಂ­ತಿರುವ ವಿದ್ಯುತ್ ಕಂಬಗಳು ಸುರಕ್ಷೆಗೆ ಅಪಾಯ ತಂದೊಡ್ಡಿವೆ ಎಂದು ನುಡಿದರು.

ಆಟೊ ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ಮುರಿದಿದೆ. ಆದರೆ ಕಂಬದ ಕಂಬಿಗಳು ಸಿಮೆಂಟ್‌ ತುಣುಕುಗಳನ್ನು ಹಿಡಿದುಕೊಂಡಿರುವುದರಿಂದ ಕಂಬ ನೆಲಕ್ಕೆ ಉರುಳಿಲ್ಲ. ರಸ್ತೆಗೆ ಹೊಂದಿಕೊಂಡಂತಿರುವ ಕಂಬಗಳನ್ನು ಸ್ಥಳಾಂ­ತರಿಸ­ಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿ­ದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.