ADVERTISEMENT

ವಿಧಾನಸಭಾ ಕ್ಷೇತ್ರವಾರು ಫಲಾನುಭವಿ ಸಮಾವೇಶ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ನಾಲ್ಕು ವರ್ಷ ಪೂರ್ಣ: ಸಂಸದ ಪಿ.ಸಿ.ಮೋಹನ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:41 IST
Last Updated 16 ಜೂನ್ 2018, 9:41 IST

ಕೋಲಾರ: ‘ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಬೇರೆ ಪಕ್ಷಗಳು ಹಿಂದಿನ 7 ದಶಕದಲ್ಲಿ ಮಾಡದಷ್ಟು ಅಭಿವೃದ್ಧಿ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು 4 ವರ್ಷದಲ್ಲಿ ಮಾಡಿದೆ’ ಎಂದು ಸಂಸದ ಪಿ.ಸಿ.ಮೋಹನ್‌ ಹೇಳಿದರು.

ನಗರದಲ್ಲಿ ಶುಕ್ರವಾರ ಕೇಂದ್ರದ ನಾಲ್ಕು ವರ್ಷದ ಸಾಧನೆಗಳ ಕಿರುಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿ, ‘ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಮೇ 16ಕ್ಕೆ ನಾಲ್ಕು ವರ್ಷವಾಯಿತು. ಈ ಅವಧಿಯಲ್ಲಿ ಲಕ್ಷಾಂತರ ಮಂದಿ ಫಲಾನುಭವಿಗಳು ಕೇಂದ್ರದ ಯೋಜನೆಗಳ ಪ್ರಯೋಜನ ಪಡೆದಿದ್ದಾರೆ’ ಎಂದರು.

‘ಕೇಂದ್ರದ ಸಾಧನೆಗಳ ಕುರಿತು ಸದ್ಯದಲ್ಲೇ ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಫಲಾನುಭವಿಗಳ ಮತ್ತು ಬುದ್ಧಿಜೀವಿಗಳ ಸಮಾವೇಶ ನಡೆಸುತ್ತೇವೆ. ಆ ಮೂಲಕ ಕೇಂದ್ರದ ಯೋಜನೆಗಳ ವ್ಯಾಪಕ ಪ್ರಚಾರ ಮಾಡುತ್ತೇವೆ. ಜತೆಗೆ ಯೋಜನೆಗಳನ್ನು ಮನೆ ಮನೆಗೂ ತಲುಪಿಸುವ ಪ್ರಯತ್ನ ಮಾಡುತ್ತೇವೆ’ ಎಂದು ತಿಳಿಸಿದರು.

ADVERTISEMENT

‘ಬಿಜೆಪಿಯು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ ದೇಶದಲ್ಲಿ ಸುಮಾರು 3 ಕೋಟಿ ಮಂದಿ ಬ್ಯಾಂಕ್ ಖಾತೆ ಹೊಂದಿದ್ದರು. ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಜನಧನ್ ಯೋಜನೆ ಮೂಲಕ 31.52 ಕೋಟಿ ಮಂದಿಗೆ ಬ್ಯಾಂಕ್ ಖಾತೆ ಮಾಡಿಸಿದೆ. ಜಾಗತಿಕವಾಗಿ ಬ್ಯಾಂಕ್‌ ಖಾತೆ ಹೊಂದಿರುವವರ ಪೈಕಿ ಶೇ 55ರಷ್ಟು ಮಂದಿ ಇದ್ದಾರೆ. ಇದು ಹೆಮ್ಮೆಯ ಸಂಗತಿ’ ಎಂದರು.

ಆಹಾರ ಭದ್ರತೆ: ‘ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯಲ್ಲಿ (ಪಿಎಂಎಸ್‌ಬಿವೈ) ಯೋಜನೆಯಲ್ಲಿ 1.30 ಕೋಟಿ ಮಂದಿ ವಿಮೆ ಸೌಲಭ್ಯ ಪಡೆದಿದ್ದಾರೆ. ಅಟಲ್ ಪಿಂಚಣಿ ಯೋಜನೆಯಿಂದ 1 ಕೋಟಿ ಮಂದಿಗೆ ಪ್ರಯೋಜನವಾಗಿದೆ. 80 ಕೋಟಿಗೂ ಅಧಿಕ ಮಂದಿಗೆ ಆಹಾರ ಭದ್ರತೆ ಕಲ್ಪಿಸಲಾಗಿದೆ’ ಎಂದು ವಿವರಿಸಿದರು.

‘ಸ್ವಚ್ಛ ಭಾರತ್ ಯೋಜನೆ ಬಗ್ಗೆ ಪೊರಕೆ ಹಿಡಿದ ಕಸ ಗುಡಿಸುವುದೆಂದು ವಿಪಕ್ಷದವರು ಟೀಕೆ ಮಾಡುತ್ತಿದ್ದರು. ಆದರೆ, ಈ ಯೋಜನೆಯಡಿ ದೇಶದ 3.62 ಲಕ್ಷ ಹಳ್ಳಿಗಳ 7.25 ಕೋಟಿ ಕುಟುಂಬಗಳು ಶೌಚಾಲಯ ಪ್ರಯೋಜನ ಪಡೆದಿವೆ. ಈ ಬಗ್ಗೆ ವಿಪಕ್ಷಗಳ ಮುಖಂಡರು ಬಾಯಿ ಬಿಡುವುದಿಲ್ಲ’ ಎಂದು ಟೀಕಿಸಿದರು.

ಐಐಟಿ ಮಂಜೂರು: ‘ದೇಶದಲ್ಲಿ 2015ರವರೆಗೆ 16 ಭಾರತೀಯ ತಂತ್ರಜ್ಞಾನ ಸಂಸ್ಥೆಗಳಿದ್ದವು (ಐಐಟಿ). ರಾಜ್ಯದಲ್ಲಿ ಒಂದೂ ಐಐಟಿ ಇರಲಿಲ್ಲ. ಮೋದಿ ಆಡಳಿತಾವಧಿಯಲ್ಲಿ ರಾಜ್ಯದ ಧಾರವಾಡಕ್ಕೆ ಹಿಂದಿನ ವರ್ಷ ಮೊದಲ ಐಐಟಿ ಮಂಜೂರು ಮಾಡಿತು. ಜತೆಗೆ 3 ವೈದ್ಯಕೀಯ ಕಾಲೇಜುಗಳನ್ನು ನೀಡಿದೆ. ರಾಜ್ಯದ 7 ಲಕ್ಷ ಮನೆಗಳಿಗೆ ಸೌಭಾಗ್ಯ ಯೋಜನೆಯಡಿ ವಿದ್ಯುತ್ ಸೌಲಭ್ಯ ಕಲ್ಪಿಸಿದೆ’ ಎಂದು ಮಾಹಿತಿ ನೀಡಿದರು.

‘ಕೇಂದ್ರವು ರೈತರಿಗೆ ನೂರಾರು ಸೌಲಭ್ಯ ಕಲ್ಪಿಸಿದ್ದು, ಬೇವು ಲೇಪಿತ ಯೂರಿಯ ಗೊಬ್ಬರದಿಂದ ಉತ್ತಮವಾಗಿ ಬೆಳೆ ಬೆಳೆಯಲು ಸಾಧ್ಯವಾಗಿದೆ. ಮಣ್ಣಿನ ಗುರುತಿನ ಚೀಟಿ ನೀಡಲಾಗುತ್ತಿದೆ. ಫಸಲ್ ಬಿಮಾ ಯೋಜನೆಯಡಿ ರಾಜ್ಯದ ರೈತರು ₹ 11 ಸಾವಿರ ಕೋಟಿ ಬೆಳೆ ಪರಿಹಾರ ಪಡೆದಿದ್ದಾರೆ’ ಎಂದು ವಿವರಿಸಿದರು.

ಬಿಜೆಪಿ ವಲಯ ಪ್ರಮುಖ್‌ ಸಚ್ಚಿದಾನಂದಮೂರ್ತಿ, ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ, ನಗರ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ಗ್ರಾಮಾಂತರ ಘಟಕದ ಅಧ್ಯಕ್ಷ ಬೈಚಪ್ಪ ಪಾಲ್ಗೊಂಡಿದ್ದರು.

ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ರಾಜ್ಯಕ್ಕೆ ₹ 70 ಸಾವಿರ ಕೋಟಿ ಬಿಡುಗಡೆಯಾಗಿತ್ತು. ಆದರೆ, ಬಿಜೆಪಿ ಸರ್ಕಾರವು 4 ವರ್ಷದಲ್ಲೇ ₹ 2.19 ಲಕ್ಷ ಕೋಟಿ ಅನುದಾನ ಮಂಜೂರು ಮಾಡಿದೆ
–ಪಿ.ಸಿ.ಮೋಹನ್‌, ಬಿಜೆಪಿ ಸಂಸದ

ಅಂಕಿ ಅಂಶ.....
* 1.30 ಕೋಟಿ ಮಂದಿಗೆ ವಿಮೆ ಸೌಲಭ್ಯ
* 7 ಲಕ್ಷ ಮನೆಗಳಿಗೆ ವಿದ್ಯುತ್ ಸವಲತ್ತು
* 7.25 ಕೋಟಿ ಕುಟುಂಬಗಳಿಗೆ ಶೌಚಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.