ADVERTISEMENT

ಶಾಲೆ ಮುಚ್ಚದಂತೆ ಒತ್ತಾಯಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2018, 10:25 IST
Last Updated 7 ಮಾರ್ಚ್ 2018, 10:25 IST

ಕೋಲಾರ: ತಾಲ್ಲೂಕಿನ ಪಾರ್ಶ್ವಗಾನಹಳ್ಳಿ ಬಳಿಯ ಸರಸ್ವತಿ ವಿದ್ಯಾಮಂದಿರ ಅನುದಾನಿತ ಶಾಲೆ ಮುಚ್ಚದಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ನಗರದಲ್ಲಿ ಮಂಗಳವಾರ ಧರಣಿ ನಡೆಸಿದರು.

ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಧರಣಿನಿರತರು, ಶಾಲೆ ಮುಂದುವರಿಸಿಕೊಂಡು ಹೋಗಬೇಕು. ಶಾಲೆ ಮುಚ್ಚಿದರೆ ಸುತ್ತಮುತ್ತಲ ಗ್ರಾಮಗಳ ಮಕ್ಕಳ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗುತ್ತದೆ ಎಂದು ಅಳಲು ತೋಡಿಕೊಂಡರು.

‘ಶ್ರೀನಿವಾಸ್‌ ಶರ್ಮಾ ಅವರು 1979ರಲ್ಲಿ ಈ ಶಾಲೆ ಆರಂಭಿಸಿದರು. ನಾಲ್ಕು ದಶಕದಿಂದ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಬಡ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಶ್ರೀನಿವಾಸ್‌ ಶರ್ಮಾ 2014ರಲ್ಲಿ ನಿಧನರಾದ ಬಳಿಕ ಅವರ ಸಹೋದರ ಸುಬ್ರಮಣ್ಯ ಶಾಸ್ತ್ರಿ ಸಂಸ್ಥೆಯ ಜವಾಬ್ದಾರಿ ವಹಿಸಿಕೊಂಡರು. ಆದರೆ, ಅವರ ಬೇಜವಾಬ್ದಾರಿಯಿಂದ ಶಾಲೆಯಲ್ಲಿ ಆಡಳಿತಾತ್ಮಕ ಸಮಸ್ಯ ಎದುರಾಗಿದೆ’ ಎಂದು ಪಾರ್ಶ್ವಗಾನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಅಶ್ವತ್ಥರಾಮ್‌ ದೂರಿದರು.

ADVERTISEMENT

ಶಾಲೆಯು ಒಂದನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ ಕನ್ನಡ ಮಾಧ್ಯಮಕ್ಕೆ ಮಾನ್ಯತೆ ಪಡೆದಿದೆ. ಒಂದನೇ ತರಗತಿಯಿಂದ ಐದನೇ ತರಗತಿವರೆಗೆ ಆಂಗ್ಲ ಮಾಧ್ಯಮಕ್ಕೆ ಮಾನ್ಯತೆ ಪಡೆದಿದೆ. ಆರನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ ಆಂಗ್ಲ ಮಾಧ್ಯಮಕ್ಕೆ ಅನುಮತಿ ಪಡೆಯುವಲ್ಲಿ ವಿಫಲವಾಗಿರುವ ಆಡಳಿತ ಮಂಡಳಿಯು ಸ್ವಾರ್ಥಕ್ಕಾಗಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಾಲೆ ಮುಚ್ಚಲು ನಿರ್ಧರಿಸಿದೆ ಎಂದು ಆರೋಪಿಸಿದರು.

ಸೂಚನೆ ನೀಡಬೇಕು: ಶಾಲೆ ಮುಚ್ಚಿದರೆ ಸುತ್ತಮುತ್ತಲ ಗ್ರಾಮಗಳ ಮಕ್ಕಳ ದೂರದ ಊರಿಗೆ ಹೋಗಿ ವಿದ್ಯಾಭ್ಯಾಸ ಮಾಡುವುದು ಕಷ್ಟ. ಆದ್ದರಿಂದ ಯಾವುದೇ ಕಾರಣಕ್ಕೂ ಶಾಲೆ ಮುಚ್ಚಬಾರದು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲೆ ಮುಂದುವರಿಸಿಕೊಂಡು ಹೋಗುವಂತೆ ಜಿಲ್ಲಾಡಳಿತವು ಶಾಲಾ ಆಡಳಿತ ಮಂಡಳಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.

ಸುತ್ತಮುತ್ತಲ ಗ್ರಾಮಸ್ಥರಾದ ಶ್ರೀನಿವಾಸ್‌ಮೂರ್ತಿ, ರಾಮಕೃಷ್ಣಪ್ಪ, ನಾರಾಯಣಸ್ವಾಮಿ, ಮೂರ್ತಿ, ಚಂದ್ರಪ್ಪ, ಶ್ರೀನಿವಾಸ್, ವಿದ್ಯಾರ್ಥಿಗಳಾದ ರಾಘವೇಂದ್ರ, ಲಾವಣ್ಯ, ರಂಜಿತ್, ವರುಣ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.