ADVERTISEMENT

ಶಾಸಕರ ವಿರೋಧಿ ಗುಂಪಿಗೆ ಪಂಚಾಯಿತಿ ಆಡಳಿತ

ಕ್ಯಾಸಂಬಳ್ಳಿ ಗ್ರಾಮ ಪಂಚಾಯಿತಿ ಚುನಾವಣೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 10:44 IST
Last Updated 15 ಡಿಸೆಂಬರ್ 2012, 10:44 IST

ಕೆಜಿಎಫ್: ತೀವ್ರ ಕುತೂಹಲ ಕೆರಳಿಸಿದ್ದ ಕ್ಯಾಸಂಬಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಸದಸ್ಯರು ಎರಡು ಬಣಗಳಾಗಿ ಮಾರ್ಪಟ್ಟು, ಬಂಗಾರಪೇಟೆ ಶಾಸಕ ಎಂ.ನಾರಾಯಣಸ್ವಾಮಿ ಅವರ ವಿರೋಧಿ ಗುಂಪು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಶಾಸಕ ಎಂ.ನಾರಾಯಣಸ್ವಾಮಿ ಅವರ ಸ್ವಂತ ಊರಾದ ಕ್ಯಾಸಂಬಳ್ಳಿಯಲ್ಲಿ ಪಂಚಾಯಿತಿ ಆಡಳಿತದಲ್ಲಿ ಹಿಡಿತ ಸಾಧಿಸಲು ನಡೆಸಿದ ಶಾಸಕರ ಪ್ರಯತ್ನಕ್ಕೆ ಪಕ್ಷದಲ್ಲೇ ಇದ್ದ ಮತ್ತೊಂದು ಗುಂಪು ಅವಕಾಶ ಮಾಡಿಕೊಡಲಿಲ್ಲ.

ಹದಿನೆಂಟು ಸದಸ್ಯರ ಪಂಚಾಯಿತಿಯಲ್ಲಿ ಸುಜಾತಾ, ನಾರಾಯಣಮ್ಮ ತಲಾ 9 ಮತ ಪಡೆದು ಅಧ್ಯಕ್ಷೆ-ಉಪಾಧ್ಯಕ್ಷೆಯಾಗಿ ಚುನಾಯಿತರಾದರು. ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ನಡೆದ ಚುನಾವಣೆಯಲ್ಲಿ ಮುಂಜಾನೆಯಿಂದಲೂ ಬಿಗಿ ವಾತಾವರಣ ಏರ್ಪಟ್ಟಿತ್ತು. ಅಧ್ಯಕ್ಷ ಸ್ಥಾನಕ್ಕೆ ಶಾರದಮ್ಮ, ಸುಜಾತಾ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ನಾರಾಯಣಮ್ಮ, ಅನಿತಾ ಸ್ಪರ್ಧೆಯಲ್ಲಿದ್ದರು.

ಈ ಮಧ್ಯೆ ಮಡಿವಾಳ ಸದಸ್ಯ ರಾಮಚಂದ್ರ ಮತ ಚಲಾಯಿಸಲು ಬರಲಿಲ್ಲ. ಒಂದು ಗುಂಪು ತನ್ನ ಹೆಂಡತಿ ಅಪಹರಿಸಿದೆ ಎಂದು ಮಜರಾ ಗುಟ್ಟಹಳ್ಳಿ ಸದಸ್ಯೆ ರತ್ನಮ್ಮ ಅವರ ಪತಿ ಮನೋಹರ್ ಪೊಲೀಸ್ ಅಧಿಕಾರಿಗಳ ಬಳಿ ದೂರು ಹೇಳಿ, ಮತ ಹಾಕಲು ಬಂದಿರುವ ಹೆಂಡತಿಯನ್ನು ಸಂಪರ್ಕ ಮಾಡಲು ಅನುವು ಮಾಡಿಕೊಡುವಂತೆ ಒತ್ತಾಯಿಸಿದರು.

ಈ ಸಂದರ್ಭ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಕೂಗಾಟ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಕೂಡಲೇ ಮಧ್ಯೆ ಪ್ರವೇಶಿಸಿದ ಪೊಲೀಸರು ಗುಂಪುಗಳನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಚುನಾವಣೆ ನಂತರವೂ ವಿಜಯೋತ್ಸವಕ್ಕೆ ಪೊಲೀಸರು ಅವಕಾಶ ಮಾಡಿಕೊಡಲಿಲ್ಲ.

ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ನಾರಾಯಣಸ್ವಾಮಿ ಚುನಾವಣಾಧಿಕಾರಿಗಳಾಗಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಶ್ಮಿ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.