ADVERTISEMENT

ಶ್ರೀನಿವಾಸಪುರ: ಹೆಚ್ಚಿದ ಮೇಕೆ ಸಾಕಣೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2017, 6:52 IST
Last Updated 9 ಅಕ್ಟೋಬರ್ 2017, 6:52 IST

ಶ್ರೀನಿವಾಸಪುರ: ಗ್ರಾಮೀಣ ಪ್ರದೇಶದಲ್ಲಿ ಮೇಕೆ ಸಾಕಣೆ ಹೆಚ್ಚಿದೆ. ಈ ಹಿಂದೆ ಕುರಿ ಸಾಕುತ್ತಿದ್ದ ಹೆಚ್ಚಿನ ಸಂಖ್ಯೆಯ ರೈತರು ಮೇಕೆ ಸಾಕಾಣಿಕೆಯತ್ತ ಒಲವು ತೋರುತ್ತಿದ್ದಾರೆ.
ಬಯಲಿನ ಮೇಲೆ ಮೇಲೆ ಮೇಕೆ ಮೇಯಿಸುವುದು ಕಷ್ಟವಾದರೂ, ಅದು ಸಿಕ್ಕಿದ ಸೊಪ್ಪನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತದೆ.

ಆದ್ದರಿಂದಲೇ ಮೇಕೆಯನ್ನು ಬರದ ಪ್ರಾಣಿ ಎಂದು ಕರೆಯುತ್ತಾರೆ. ಮಳೆ ಪ್ರಮಾಣ ಕಡಿಮೆಯಾದಂತೆ ಕುರಿಗಳಿಗೆ ಮೇವು ಸಿಗುವುದು ಕಷ್ಟವಾಗುತ್ತಿದೆ. ಕುರಿಗಳಿಗೆ ತಗಲುವ ರೋಗಗಳ ಸಂಖ್ಯೆಯೂ ಹೆಚ್ಚಿದೆ. ಇವೇ ಮುಂತಾದ ಕಾರಣಗಳಿಂದ ಕುರಿ ಸಾಕಣೆಗೆ ಸ್ವಲ್ಪ ಹಿನ್ನಡೆಯಾಗಿದೆ.

ಹಿಂದೆ ಕುರಿ ಹಾಗೂ ಮೇಕೆ ಮಾಂಸದ ಮಧ್ಯೆ ಅಂತರ ಇರುತ್ತಿತ್ತು. ಈಗ ಹಾಗೇನಿಲ್ಲ. ಎರಡರ ಮಾಂಸದ ಬೆಲೆಯೂ ಒಂದೇ ಆಗಿದೆ. ಮೇಕೆಯಲ್ಲಿ ಕೊಬ್ಬಿನ ಅಂಶ ಕಡಿಮೆ ಇರುವುದರಿಂದ ಮೇಕೆ ಮಾಂಸ ತಿನ್ನುವವರ ಸಂಖ್ಯೆಯೂ ಬೆಳೆಯುತ್ತಿದೆ.

ADVERTISEMENT

ಗ್ರಾಮೀಣ ಪ್ರದೇಶದಲ್ಲಿ ಮೇಕೆ ಸಾಕಿರುವ ರೈತರು ಬೆಳಿಗ್ಗೆ ಹೋಗಿ ವಿವಿಧ ಸೊಪ್ಪುಗಳನ್ನು ಸಂಗ್ರಹಿಸಿ ತಂದು ಮೇಕೆಗಳಿಗೆ ಹಾಕುತ್ತಾರೆ. ಮೇಕೆ ಸಾಕುವ ಭರದಲ್ಲಿ ಬೆಳೆಯುವ ಗಿಡಗಳ ಸುಳಿಯನ್ನೂ ಲೆಕ್ಕಿಸದೆ ಕೊಯ್ದು ಕೊಂಡೊಯ್ಯುವ ವ್ಯಕ್ತಿಗಳಿಗೂ ಕೊರತೆಯಿಲ್ಲ. ಸಾಮಾನ್ಯವಾಗಿ ಮೇಕೆಗಳನ್ನು ಸರ್ಕಾರಿ ಕಾಡುಗಳಲ್ಲಿ ಮೇಯಲು ಅವಕಾಶ ಕೊಡುವುದಿಲ್ಲ. ಕಾರಣ ಅವು ಸಿಕ್ಕಿದ ಗಿಡಗಳ ಸುಳಿಗಳನ್ನು ತಿಂದು, ಗಿಡ ಬೆಳೆಯದಂತೆ ಮಾಡುತ್ತವೆ.

ಇಷ್ಟಾದರೂ ಮೇಕೆ ಸಾಕಣೆ ನಿಂತಿಲ್ಲ. ಕೆಲವರು ಮೇಕೆ ಫಾರಂಗಳನ್ನು ತೆರೆದು ಕಾಶ್ಮೀರಿ ಮೇಕೆಗಳನ್ನು ಮೇಯಿಸುತ್ತಿದ್ದಾರೆ. ಮೇಕೆ ಸಾಕಲೆಂದೇ ಬೆಟ್ಟಬೇವು ಮರಗಳನ್ನು ಬೆಳೆಯಲಾಗುತ್ತಿದೆ. ಇದೆಲ್ಲವೂ ಇತ್ತೀಚಿನ ವಿದ್ಯಮಾನ. ಒಂದೆರಡು ಮೇಕೆಗಳನ್ನು ವಿಶೇಷವಾಗಿ ಮೇಯಿಸಿ ವಿಶೇಷವಾದ ಹಬ್ಬಗಳ ಸಂದರ್ಭದಲ್ಲಿ ಮಾರಿ ಒಳ್ಳೆ ಲಾಭ ಮಾಡಿಕೊಳ್ಳುತ್ತಿರುವ ರೈತರಿಗೂ ಕೊರತೆಯಿಲ್ಲ.

ಮೇಕೆಗಳು ಹೆಚ್ಚಿನ ಸಂದರ್ಭಗಳಲ್ಲಿ ಒಂದಕ್ಕಿಂತ ಹೆಚ್ಚು ಮರಿಗಳನ್ನು ಹಾಕುತ್ತವೆ. ಇದೂ ಕೂಡ ಮೇಕೆ ಸಾಕಣೆಯನ್ನು ಪ್ರೋತ್ಸಾಹಿಸಿದೆ. ಮೇಕೆ ಹಾಲಿಗೂ ಬೇಡಿಕೆ ಇದೆ. ಕೆಲವರು ಮೇಕೆ ಹಾಲನ್ನು ಸಂಗ್ರಹಿಸಿ ಮಾರುವುದುಂಟು. ಈ ಎಲ್ಲ ಕಾರಣಗಳಿಂದ ಮೇಕೆ ಸಾಕಾಣಿಕೆಯತ್ತ ಕೃಷಿಕರ ಚಿತ್ತ ಹರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.