ADVERTISEMENT

ಸರ್ಕಾರಿ ಶಾಲೆ ಉಳಿವಿಗೆ ಸಂಕಲ್ಪ ಅಗತ್ಯ

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ನಾಗಾನಂದ ಕೆಂಪರಾಜ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 8:24 IST
Last Updated 18 ಜೂನ್ 2018, 8:24 IST

ಕೋಲಾರ: ‘ಪ್ರತಿಭೆ ದೇಶದ ಪ್ರಗತಿಗೆ ರಹದಾರಿ ಇದ್ದಂತೆ. ಬಡವರಿಗೆ ಗುಣಮಟ್ಟದ ಶಿಕ್ಷಣ ನೀಡುವ ಸರ್ಕಾರಿ ಶಾಲೆಗಳ ನವೀಕರಣಕ್ಕೆ ಸರ್ಕಾರ ಮುಂದಾಗಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ನಾಗಾನಂದ ಕೆಂಪರಾಜ್ ಸಲಹೆ ನೀಡಿದರು.

ನಗರದಲ್ಲಿ ಭಾನುವಾರ ಸಿರಿಗನ್ನಡ ವೇದಿಕೆ ವತಿಯಿಂದ ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡದಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿ ಮಾತನಾಡಿ, ‘ಪ್ರತಿಭಾನ್ವಿತರನ್ನಾಗಿ ತಯಾರು ಮಾಡಲು ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸ ಆಗಬೇಕಿದೆ’ ಎಂದರು.

‘ಶಿಕ್ಷಣದಲ್ಲಿ ಒಂದೊಂದು ಹಂತವೂ ಮುಖ್ಯ. ತಂದೆ– ತಾಯಿಯ ಕಷ್ಟ ನಿಮಗೆ ಶಿಕ್ಷಣ ಪಡೆಯಬೇಕೆಂಬ ಸ್ಫೂರ್ತಿ ನೀಡಲಿ, ಅದು ನಿಮ್ಮ ಗುರಿಯಾಗಿರಲಿ. ಪೋಷಕರ ಕನಸು ನನಸು ಮಾಡುವ ಜವಾಬ್ದಾರಿ ಮಕ್ಕಳ ಮೇಲಿದೆ. ಗುರುಹಿರಿಯರ ಮಾರ್ಗದರ್ಶನ ಸ್ವೀಕರಿಸಿದರೆ ಉತ್ತಮ ವ್ಯಕ್ತಿಗಳಾಗಿ ಬೆಳೆಯಬಹುದು’ ಎಂದು ಹೇಳಿದರು.

ADVERTISEMENT

‘125ಕ್ಕೆ 125 ಅಂಕ ಪಡೆದಿರುವ ಮಕ್ಕಳು ಕನ್ನಡಾಂಬೆಯ ಮಕ್ಕಳು. ಕನ್ನಡವನ್ನು ಬೆಳೆಸುವ ಶಕ್ತಿ ನಿಮ್ಮಲ್ಲಿದೆ. ಕನ್ನಡತನವಿರಲಿ. ಇಸ್ರೇಲ್, ಚೀನಾ, ಕೊರಿಯಾ, ಜಪಾನ್, ಫ್ರಾನ್ಸ್, ಜರ್ಮನಿ ರಷ್ಯಾ ರಾಷ್ಟ್ರಗಳು ಮಾತೃಭಾಷೆಗೆ ಪ್ರಾಮುಖ್ಯತೆ ನೀಡಿರುವಾಗ ನಮ್ಮ ನಾಡಿನಲ್ಲಿ ಕನ್ನಡಕ್ಕೆ ಆದ್ಯತೆ ನೀಡುವುದು ಸಹಜ ನ್ಯಾಯ. ಜಾಗತೀಕರಣದಲ್ಲಿ ಎಲ್ಲ ಪ್ರಮುಖ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಬೇಕಿದೆ’ ಎಂದರು.

‘ಶಾಲಾ– ಕಾಲೇಜುಗಳಲ್ಲಿ ಗಳಿಸುವ ಜ್ಞಾನ ಕಟ್ಟಿಕೊಳ್ಳುವ ಚಾರಿತ್ರ್ಯ, ರೂಪಿಸಿಕೊಳ್ಳುತ್ತಿರುವ ಶಾರೀರಿಕ ಸಾಮರ್ಥ್ಯಗಳ ಮೇಲೆ ಭಾರತದ ನವ ಮನ್ವಂತರರು ಹುಟ್ಟಬೇಕಿದೆ. ನಿಮ್ಮಿಂದ ಭಾರತದ ಪ್ರಗತಿ ಸಾಧ್ಯ. ನಿಮ್ಮಿಂದಲೇ ಕನ್ನಡವೂ ಬೆಳೆಯಬೇಕಿದ್ದು, ಕನ್ನಡ ಭಾಷೆಯ ಹೊಸ ಮನ್ವಂತರ ಆರಂಭವಾಗಬೇಕಿದೆ’ ಎಂದು ತಿಳಿಸಿದರು.

‘ಸರ್ಕಾರಿ ಸೌರ್ಯಗಳು ಸದ್ಬಳಕೆಯಾದರೆ ಪ್ರತಿಭಾವಂತರನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ’ ಎಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಜಿ.ಎಂ.ವೆಂಕಟರಮಣ ಅಭಿಪ್ರಾಯಪಟ್ಟರು.

‘ಕೆಎಎಸ್, ಐಎಎಸ್ ಪಾಸ್ ಮಾಡಿದರೆ ಹತ್ತಾರು ಜನರಿಗೆ ಸೇವೆ ಮಾಡುವ ಅವಕಾಶ ಸಿಗುತ್ತದೆ. ಸಹಕಾರದಿಂದ ಅಭಿವೃದ್ಧಿ, ಏಳಿಗೆ ಸಾಧ್ಯವೇ ಹೊರತು, ಕಾಲೆಳೆಯುವುದರಿಂದ ಸಾಧ್ಯವಿಲ್ಲ’ ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ ಕನ್ನಡ ವಿಷಯದಲ್ಲಿ ಹೆಚ್ಚು ಅಂಕ ಗಳಿಸಿದ ವಿ.ಪಿ.ರಮ್ಯಾ, ಚರಣ್‌ಕುಮಾರ್, ಬಿ.ಆರ್.ಬೇಬಿ, ವಿ.ಗೌತಮಿ ಅವರಿಗೆ ನಗದು ಪುರಸ್ಕಾರ ನೀಡಲಾಯಿತು.

ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಎಂ.ಜೆ. ಉಪಾಧ್ಯಕ್ಷ ಟಿ.ಸುಬ್ಬರಾಮಯ್ಯ, ಖಜಾಂಚಿ ರವೀಂದ್ರ ಸಿಂಗ್, ಕಾರ್ಯದರ್ಶಿ ಪಿ.ನಾರಾಯಣಪ್ಪ, ಪದಾಧಿಕಾರಿಗಳಾದ ಸೌಭಾಗ್ಯಮ್ಮ, ಡಾ.ಪ್ರಕಾಶ್, ಮುಳಬಾಗಿಲು ತಾಲೂಕು ಘಟಕದ ಅಧ್ಯಕ್ಷ ಮುನಿರಾಜು, ಕೃಷ್ಣಪ್ಪ ಕನ್ನಡ ಸಾಹಿತ್ಯ ಪರಿಷತ್ತಿನ ಕೆಜಿಎಫ್ ಘಟಕದ ಮಾಜಿ ಅಧ್ಯಕ್ಷ ಕೃಷ್ಣಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.