ADVERTISEMENT

ಸಿಲಿಂಡರ್‌ ಸ್ಫೋಟ: ಇಬ್ಬರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 8:41 IST
Last Updated 28 ಅಕ್ಟೋಬರ್ 2017, 8:41 IST

ಕೋಲಾರ: ನಗರದ ಕೋಟೆ ಬಡಾವಣೆಯ ಮನೆಯೊಂದರಲ್ಲಿ ಶುಕ್ರವಾರ ನಸುಕಿನಲ್ಲಿ ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಗಾಯಗೊಂಡಿದ್ದು, ಮನೆಯ ಚಾವಣಿ ಕುಸಿದಿದೆ. ಕೋಟೆ ಬಡಾವಣೆ ನಿವಾಸಿ ರಮೇಶ್‌ ಎಂಬುವರ ಮನೆಯಲ್ಲಿ ಈ ದುರ್ಘಟನೆ ನಡೆದಿದ್ದು, ಮಣಿಕಂಠ (14) ಮತ್ತು ವೇಣುಗೋಪಾಲ್ (16) ಎಂಬುವರು ಗಾಯಗೊಂಡಿದ್ದಾರೆ.

ರಮೇಶ್‌ ಅವರ ಮನೆಯಲ್ಲಿ ಮದುವೆ ಸಮಾರಂಭವಿತ್ತು. ಕುಟುಂಬ ಸದಸ್ಯರು ಬೆಳಗಿನ ಜಾವ ಸ್ನಾನಕ್ಕೆ ಗ್ಯಾಸ್‌ ಸ್ಟೌನಲ್ಲಿ ನೀರು ಕಾಯಿಸುತ್ತಿದ್ದಾಗ ಅನಿಲ ಸೋರಿಕೆಯಾಗಿ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಮನೆಯ ಮೇಲ್ಛಾವಣಿ ಶೀಟ್‌ಗಳು ಛಿದ್ರವಾಗಿವೆ. ಗೋಡೆಗಳು ಬಿರುಕು ಬಿಟ್ಟಿದ್ದು, ಮನೆಯ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ.

ವಿದ್ಯುತ್‌ ಉಪಕರಣಗಳು ಹಾಗೂ ಪೀಠೋಪಕರಣಗಳಿಗೆ ಹಾನಿಯಾಗಿದೆ. ಬಟ್ಟೆ ಹಾಗೂ ಹಾಸಿಗೆಗಳು ಸುಟ್ಟು ಹೋಗಿವೆ. ಸ್ಫೋಟದ ಶಬ್ಧ ಕೇಳಿ ನೆರೆಹೊರೆಯವರು ಕೆಲ ಕಾಲ ಆತಂಕಗೊಂಡಿದ್ದರು. ಮಣಿಕಂಠ ಮತ್ತು ವೇಣುಗೋಪಾಲ್‌ಗೆ ಶೇ 30ರಷ್ಟು ಸುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಚಿನ್ನಾಭರಣ ಕಳವು ಮುಳಬಾಗಿಲು ತಾಲ್ಲೂಕಿನ ತಾಯಲೂರು ಗ್ರಾಮದ ನಿವಾಸಿ ಮಂಜುಳಾ ಎಂಬುವರ ಮನೆಯಲ್ಲಿ ಕಳ್ಳರು ಗುರುವಾರ ರಾತ್ರಿ ಚಿನ್ನಾಭರಣ ಹಾಗೂ ಹಣ ಕಳವು ಮಾಡಿದ್ದಾರೆ. ಮಂಜುಳಾ ಮತ್ತು ಕುಟುಂಬ ಸದಸ್ಯರು ಮನೆಗೆ ಬೀಗ ಹಾಕಿಕೊಂಡು ಸಂಬಂಧಿಕರ ಮನೆಗೆ ಹೋಗಿದ್ದಾಗ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಮನೆಯ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ಅಲ್ಮೇರಾದಲ್ಲಿದ್ದ ಸುಮಾರು 250 ಗ್ರಾಂ ಚಿನ್ನಾಭರಣ, 800 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ ₹ 25 ಸಾವಿರ ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅತ್ಯಾಚಾರ ಆರೋಪ; ಬಂಧನ
ಬಂಗಾರಪೇಟೆ: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ನಡೆಸಿದ ಆರೋಪದಡಿ ತಾಲ್ಲೂಕಿನ ಪಿಚ್ಚಹಳ್ಳಿ ಗ್ರಾಮದ ನಾಗರಾಜ್ ಎಂಬ ವ್ಯಕ್ತಿಯನ್ನು ಪೊಲೀಸರು ಪೊಕ್ಸೊ ಕಾಯ್ದೆಯಡಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮದುವೆ ಆಗುವುದಾಗಿ ಬಾಲಕಿಯನ್ನು ನಂಬಿಸಿದ್ದ ಆರೋಪಿ ಎರಡು ತಿಂಗಳಿಂದ ಆಕೆಯನ್ನು ಹಿಂಬಾಲಿಸುತ್ತಿದ್ದ. ನಾಲ್ಕು ದಿನದ ಹಿಂದೆ ಅಪಹರಿಸಿ ದ್ವಿಚಕ್ರ ವಾಹನದಲ್ಲಿ ರಾಯ
ಚೂರಿಗೆ ಕರೆದುಕೊಂಡು ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿ ಅಪಹರಣದ ಬಗ್ಗೆ ಬಾಲಕಿಯ ಪೋಷಕರು ಅ.25 ರಂದು ಕಾಮಸಮುದ್ರ ಠಾಣೆಯಲ್ಲಿ ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.