ADVERTISEMENT

ಸೌಕರ್ಯಕ್ಕಾಗಿ ಸ್ನಾತ್ತಕೋತ್ತರ ವಿದ್ಯಾರ್ಥಿಗಳ ಧರಣಿ

ಶುಲ್ಕ ಹೆಚ್ಚಳ ವಿರೋಧಿಸಿ ಬಂಗಾರಪೇಟೆಯಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 6:14 IST
Last Updated 14 ಸೆಪ್ಟೆಂಬರ್ 2013, 6:14 IST

ಕೋಲಾರ: ಅಭಿವೃದ್ಧಿ ಶುಲ್ಕ ವಸೂಲು ಮಾಡುವ ಮುನ್ನ ಮೂಲಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ನಗರದ ಬಾಲಕರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಶುಕ್ರವಾರ ಧರಣಿ ನಡೆಸಿದರು.

ಕಾಲೇಜಿನ ಮುಖ್ಯ ಗೇಟ್‌ನ ಒಳ ಆವರಣದಲ್ಲಿ ಮಧ್ಯಾಹ್ನ ಧರಣಿ ಆರಂಭಿಸಿದ ವಿದ್ಯಾರ್ಥಿಗಳು, ಕಾಲೇಜಿನ ಒಳ ಆವರಣದಲ್ಲಿರುವ ಹಳೆಯ ಕಟ್ಟಡದಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ಆದರೆ ಅಲ್ಲಿ ಸಮಪರ್ಪಕ ಗಾಳಿ–ಬೆಳಕಿಲ್ಲ. ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯೇ ಇಲ್ಲವಾಗಿದೆ. ಗ್ರಂಥಾಲಯದಲ್ಲಿ ಅಗತ್ಯವಿರುವ ಪುಸ್ತಕಗಳಿಲ್ಲ ಎಂದು ದೂರಿದರು.

ಕಾಲೇಜಿನಲ್ಲಿ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳುತ್ತಿಲ್ಲ. ದೈಹಿಕ ಶಿಕ್ಷಣ ನಿರ್ದೇಶಕರು ಯಾರೆಂಬುದೇ ತಿಳಿಯದ ಸನ್ನಿವೇಶವಿದೆ. ಶೈಕ್ಷಣಿಕ ಚಟುವಟಿಕೆಗೆ ಅಗತ್ಯವಿರುವ ಪ್ರಾಜೆಕ್ಟ್  ಕೊಠಡಿಗಳಿಲ್ಲ. ಇಂಥ ಸನ್ನಿವೇಶದಲ್ಲಿ ಅಭಿವೃದ್ಧಿ ಶುಲ್ಕವೆಂದು ರೂ.1328 ಅನ್ನು ಯಾವ ಅನುಕೂಲಕ್ಕಾಗಿ ವಿದ್ಯಾರ್ಥಿಗಳು ಪಾವತಿಸಬೇಕು? ಎಂದು ಪ್ರಶ್ನಿಸಿದರು.

ಕಾಲೇಜಿನಲ್ಲಿ ಅಭಿವೃದ್ಧಿ ಸಮಿತಿಯನ್ನೇ ರಚಿಸದೆ  ಶುಲ್ಕವನ್ನು ವಿದ್ಯಾರ್ಥಿಗಳಿಂದ ವಸೂಲು ಮಾಡಲು ಮುಂದಾಗಿರುವುದು ಹಾಸ್ಯಾಸ್ಪದ ವಿಷಯವಾಗಿದೆ. ಕೂಡಲೇ ಪ್ರಾಂಶುಪಾಲರು ಮತ್ತು ಕಾಲೇಜು ಶಿಕ್ಷಣ ಇಲಾಖೆಯು ಮೂಲಸೌಕರ್ಯಗಳನ್ನು ಕಲ್ಪಿಸಲಿ ಎಂದು ಆಗ್ರಹಿಸಿದರು.

ಕಳೆದ ವರ್ಷವೂ ಅಭಿವೃದ್ಧಿ ಶುಲ್ಕವನ್ನು ವಸೂಲು ಮಾಡಲಾಗಿತ್ತು. ಆದರೆ ಇದುವರೆಗೆ ಯಾವುದೇ ಸೌಕರ್ಯಗಳನ್ನು ನೀಡದೆ ವಿದ್ಯಾರ್ಥಿಗಳನ್ನು ವಂಚಿಸಲಾಗಿದೆ ಎಂದು ಆರೋಪಿಸಿದರು. ಪ್ರಾಂಶುಪಾಲರು ಮತ್ತು ಕಾಲೇಜು ಶಿಕ್ಷಣ ಇಲಾಖೆ ವಿರುದ್ಧ ಧಿಕ್ಕಾರ ಕೂಗಿದರು.

ವಿದ್ಯಾರ್ಥಿಗಳಾದ ಹರಿಕೃಷ್ಣ, ನಾಗರಾಜ, ನರೇಶ್‌, ವಿಜಯಕುಮಾರ, ಮೀನಾಕ್ಷಿ, ವೀಣಾ, ರೋಹಿಣಿ ನೇತೃತ್ವ ವಹಿಸಿದ್ದರು.

ಶುಲ್ಕ ಹೆಚ್ಚಳ ವಿರುದ್ಧ ಪ್ರತಿಭಟನೆ
ಬಂಗಾರಪೇಟೆ:
ಪರೀಕ್ಷಾ ಶುಲ್ಕ ಹೆಚ್ಚಳ, ಹಿಂದುಳಿದ ವಿದ್ಯಾಥಿರ್ಗಳ ಪರೀಕ್ಷಾ ಶುಲ್ಕ ರಿಯಾಯಿತಿಗೆ ವಿಶ್ವವಿದ್ಯಾಲಯ 11 ಸಾವಿರ ರೂಪಾ­ಯಿ­ಯನ್ನು ಆದಾಯಕ್ಕೆ ಮಿತಿ ಗೊಳಿಸಿ­ರುವು­ದನ್ನು ವಿರೋಧಿಸಿ ಕೆ.ಸಿ.ರೆಡ್ಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಕರ್ನಾಟಕ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸಾಮಾಜಿಕ ನ್ಯಾಯದ ಪರಿಕಲ್ಪನೆ ಹಿನ್ನೆಲೆ­ಯಲ್ಲಿ ಸರ್ಕಾರವು ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವಾಗುವ ನೀತಿ ರೂಪಿಸಲಾಗಿತ್ತು. ಈಗ ಅದನ್ನು ಗಾಳಿಗೆ ತೂರಿ ಬಡ ಮಕ್ಕಳಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

ಏಕಾಏಕಿ 600ಕ್ಕಿಂತ ಹೆಚ್ಚು ಶುಲ್ಕ ಕಟ್ಟುವ ಅನಿವಾರ್ಯತೆ ಎದುರಾಗಿದೆ. ಇದರಿಂದ ಗ್ರಾಮೀಣ ಭಾಗದ ಬಡ ವಿದ್ಯಾಥಿರ್ಗಳಿಗೆ ತೊಂದರೆಯಾಗಿದೆ. ಸರ್ಕಾರ ಅನುಸರಿಸುತ್ತಿರುವ ದ್ವಂದ್ವ ನೀತಿಗಳಿಂದ ಈ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿವೆ. ತಾಲ್ಲೂಕು ಕಚೇರಿಗಳಲ್ಲಿ ರೂ.12,15,18ಸಾವಿರಕ್ಕೆ ಆದಾಯ ಪ್ರಮಾಣ ಪತ್ರ ನೀಡಲಾಗುತ್ತಿದೆ. ಇದರಿಂದ ಯಾವುದೇ ಶುಲ್ಕ ರಿಯಾಯಿತಿ ನೀಡುತ್ತಿಲ್ಲ ಎಂದು ಅಲವತ್ತುಕೊಂಡರು.

ಹಿಂದಿನಂತೆ ಪರೀಕ್ಷಾ ಶುಲ್ಕದ ಒಂದು ಭಾಗ ವಿದ್ಯಾರ್ಥಿಗಳಿಂದ ಪಡೆದು ಉಳಿದುದ್ದನ್ನು ಸರ್ಕಾರ ಭರಿಸಬೇಕು ಎಂದು ಆಗ್ರಹಿಸಿದರು.

ಶುಲ್ಕ ರಿಯಾಯಿತಿಗೆ ವಿಶ್ವವಿದ್ಯಾಲಯ ಪರಿಗಣಿಸಿರುವ ಮಾನದಂಡಕ್ಕೂ ಪ್ರಮಾಣ ಪತ್ರ ನೀಡುವ ತಾಲ್ಲೂಕು ಕಚೇರಿ ಮಾನದಂಡಕ್ಕೆ ವ್ಯತ್ಯಾಸ ಇರುವುದರಿಂದ ಗೊಂದಲ ಉಂಟಾಗಿದೆ. ಇರುವ ಸಮಸ್ಯೆ ಪರಿಹಾರವಾಗುವವರೆಗೂ ಶುಲ್ಕ ಪಾವತಿ ದಿನಾಂಕ ವಿಸ್ತರಿಸಬೇಕು ಎಂದು ಹೇಳಿದರು.

ಶಿಕ್ಷಣ ವೆಚ್ಚ ಹೆಚ್ಚಿಸುವ, ಶಿಕ್ಷಣದ ವ್ಯಾಪಾರೀಕರಣಕ್ಕೆ ಕಾರಣವಾಗುವ ಯಾವುದೆ ನೀತಿಯನ್ನು ಸರ್ಕಾರ ರೂಪಿಸಬಾರದು ಎಂದು ಒತ್ತಾಯಿಸಿದರು.  

ವಿದ್ಯಾರ್ಥಿ ಮುಖಂಡರಾದ ಟಿ.ಸಂತೋಷ್‌, ಸುನಿಲ್ ಕುಮಾರ್, ಕೆ.ಅಂಬರೀಶ್, ಎ.ವಿಜಯಕುಮಾರ್, ಎಸ್.ಬಿ.ದಶರಥರಾವ್ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.