ADVERTISEMENT

ಸ್ನಾತಕೋತ್ತರ ಕೇಂದ್ರ ಶೀಘ್ರ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 28 ಜೂನ್ 2012, 19:30 IST
Last Updated 28 ಜೂನ್ 2012, 19:30 IST
ಸ್ನಾತಕೋತ್ತರ ಕೇಂದ್ರ ಶೀಘ್ರ ಸ್ಥಳಾಂತರ
ಸ್ನಾತಕೋತ್ತರ ಕೇಂದ್ರ ಶೀಘ್ರ ಸ್ಥಳಾಂತರ   

ಕೋಲಾರ: ನಗರದಲ್ಲಿರುವ ಸ್ನಾತಕೋತ್ತರ ಕೇಂದ್ರವನ್ನು ಶೀಘ್ರ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿತ್ತಾಧಿಕಾರಿ ಡಾ.ಎಸ್.ರಂಗಸ್ವಾಮಿ ಅವರು ಭರವಸೆ        ನೀಡಿದರು.

ನಗರದ ಸ್ನಾತಕೋತ್ತರ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಹೊಸ ಕಟ್ಟಡಕ್ಕೆ ಕೇಂದ್ರವನ್ನು ಸ್ಥಳಾಂತರಿಸಲು ಬೇಕಾದ ಎಲ್ಲ ಕ್ರಮಗಳನ್ನು ಕುಲಪತಿಗಳು ಕೈಗೊಂಡಿದ್ದಾರೆ ಎಂದು ತಿಳಿಸಿದರು.

ಕಟ್ಟಡ ಸೌಕರ್ಯವೊಂದನ್ನು ಹೊರತುಪಡಿಸಿ ಉಳಿದವನ್ನು ಈಗಾಗಲೇ ನೀಡಲಾಗಿದೆ. ಕೊರತೆ ನಡುವೆಯೇ ವಿದ್ಯಾರ್ಥಿಗಳು ಶ್ಲಾಘನೀಯ ಸಾಧನೆ ಮಾಡಿರುವುದು ವಿಶೇಷ. ಕೇಂದ್ರದಲ್ಲಿ ಓದಿ ರ‌್ಯಾಂಕ್ ಗಳಿಸಿದ ಹಲವರು ಈಗ ಉನ್ನತ ಸ್ಥಾನಗಳಲ್ಲಿದ್ದಾರೆ ಎಂದರು.

ADVERTISEMENT

ವಿಶ್ವವಿದ್ಯಾಲಯದಲ್ಲಿರುವ ಬೃಹತ್ ಗ್ರಂಥಾಲಯವನ್ನು ಈಗ ವಿದ್ಯಾರ್ಥಿಗಳು ಹೆಚ್ಚು ಬಳಸುತ್ತಿಲ್ಲ. ಆನ್‌ಲೈನ್ ಗ್ರಂಥಾಲಯದ ಕಡೆಗೆ ನಡೆದಿರುವುದು ಅದಕ್ಕೆ ಕಾರಣ. ಆದರೆ ಕೇಂದ್ರದಲ್ಲಿರುವ ಗ್ರಂಥಾಲಯವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿರುವುದು ಖುಷಿಯ ಸಂಗತಿ ಎಂದು ಹೇಳಿದರು.

ಉನ್ನತ ಶಿಕ್ಷಣ ಕೇವಲ ನಾಲ್ಕು ಗೋಡೆಯ ಮಧ್ಯದ ತರಗತಿಗಳಿಗೆ ಮಾತ್ರ ಸೀಮಿತವಾಗಬಾರದು ಎಂದು ಅಭಿಪ್ರಾಯಪಟ್ಟರು.

ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಸೇರಿದಂತೆ ಭವಿಷ್ಯ ರೂಪಿಸುವ ಕಾರ್ಯಕ್ರಮಗಳಲ್ಲೂ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.

ಕೇಂದ್ರದ ನಿರ್ದೇಶಕ ಡಾ.ಸಿ.ನಾಗಭೂಷಣ್ ಅಧ್ಯಕ್ಷತೆ ವಹಿಸಿದ್ದರು.

ವಿಶ್ವವಿದ್ಯಾಲಯದ ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿ ನಿರ್ದೇಶಕ ಡಾ.ಟಿ.ಡಿ.ಕೆಂಪರಾಜು, ಕಾನೂನು ನಿಕಾಯ ಡೀನ್ ಡಾ.ಕೆ.ಎಂ.ಹನುಮಂತರಾಯಪ್ಪ, ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ.ಸುಂದರರಾಜ ಅರಸ್ ಅವರು ವೇದಿಕೆಯಲ್ಲಿದ್ದರು. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.