ADVERTISEMENT

ಹಂದಿ ಸಾಕಣೆದಾರರಿಗೆ ಒಳ್ಳೆಯ ಕಾಲ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 9:25 IST
Last Updated 11 ಫೆಬ್ರುವರಿ 2012, 9:25 IST

ಕೋಲಾರ: ಜಿಲ್ಲೆಯ ಹಂದಿ ಸಾಕಣೆದಾರರಿಗೆ, ಅದರಲ್ಲೂ ಸಣ್ಣ ಮಟ್ಟದಲ್ಲಿ ಹಂದಿ ಸಾಕಣೆದಾರರಿಗೆ ಒಳ್ಳೆಯ ಕಾಲ ಬಂದಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿ ಪಶುಪಾಲನೆ ಇಲಾಖೆಯು ಹಂದಿ ಸಾಕಣೆ ಮತ್ತು ಮಾರಾಟಕ್ಕೆ ನೆರವಿನ ಹಸ್ತ ಚಾಚಿದೆ. ಇಲಾಖೆ ನಿಯಂತ್ರಣದಲ್ಲೆ ಕಾರ್ಯನಿರ್ವಹಿಸುವ ಸಲುವಾಗಿ ಜಿಲ್ಲಾ ಮಟ್ಟದ ಹಂದಿ ಸಾಕಣೆದಾರರ ಸಹಕಾರ ಸಂಘವೂ ಸ್ಥಾಪನೆಯಾಗಿದ್ದು, ಆ ಮೂಲಕ ಸಹಾಯಧನ ದೊರಕಲಿದೆ. ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹತ್ತಾರು ಮಂದಿಗೆ ಈಚೆಗಷ್ಟೆ ಸೌಲಭ್ಯ ವಿತರಣೆಯೂ ಆಗಿದೆ. ಉಳಿದ ನಾಲ್ಕು ತಾಲ್ಲೂಕುಗಳ ಸಾಕಣೆದಾರರಿಗೆ ಮೂರ‌್ನಾಲ್ಕು ತಿಂಗಳಲ್ಲಿ ನೆರವು ದೊರೆಯಲಿದೆ.

ಯೋಜನೆ ಏನು ? : ಸಹಕಾರ ತತ್ವದ ಅಡಿಯಲ್ಲೆ ಸಾಕಣೆದಾರರಿಗೆ ನೆರವು ಮತ್ತು ಉತ್ತೇಜನ ನೀಡುವ ಯೋಜನೆ ಇದು. ಸಂಘ ಸ್ಥಾಪನೆಗೊಂಡಾಗ ಅದರಲ್ಲಿ 304 ಸದಸ್ಯರಿದ್ದರು. ಈಗ ಇನ್ನೂ 24 ಮಂದಿ ಸದಸ್ಯರ ಸೇರ್ಪಡೆಯಾಗಿದೆ. ಸಂಘಕ್ಕೆ ಶೇರು ಬಂಡವಾಳವಾಗಿ ರೂ. 10 ಸಾವಿರ ಮತ್ತು ಸುತ್ತು ನಿಧಿಯಾಗಿ 1 ಲಕ್ಷ ರೂಪಾಯಿ ದೊರೆತಿದೆ. ಎರಡು ವರ್ಷದ ಹಿಂದೆ ಯೋಜನೆ ರೂಪುಗೊಂಡರೂ ಜಿಲ್ಲೆಯಲ್ಲಿ ಕಳೆದ ಸಾಲಿನಿಂದ ಅನುಷ್ಠಾನ ಪ್ರಕ್ರಿಯೆ ಆರಂಭವಾಗಿದೆ. ಜನವರಿಯಿಂದ ಸವಲತ್ತುಗಳ ವಿತರಣೆಗೂ ಚಾಲನೆ ನೀಡಲಾಗಿದೆ ಎಂದು ಇಲಾಖೆ ಸಹಾಯಕ ಯೋಜನಾಧಿಕಾರಿ ಹಾಗೂ ಸಂಘದ ಪದನಿಮಿತ್ತ ಕಾರ್ಯದರ್ಶಿ ಡಾ.ಕೆ.ಕೆಂಪರಾಜು ಗುರುವಾರ `ಪ್ರಜಾವಾಣಿ~ಗೆ ತಿಳಿಸಿದರು.

ಸಂಘದ ಆಡಳಿತ ಮಂಡಳಿಯಲ್ಲಿ ಇಲಾಖೆ ಉಪನಿರ್ದೇಶಕರು ಮತ್ತು ಸಹಾಯಕ ಯೋಜನಾಧಿಕಾರಿ ಸೇರಿ 16 ಸದಸ್ಯರಿದ್ದಾರೆ. 2011-12ನೇ ಸಾಲಿನಲ್ಲಿ 123 ಸದಸ್ಯರಿಗೆ ರೂ. 7.75 ಲಕ್ಷ ಸಹಾಯಧನ ನೀಡಲಾಗುವುದು. ಅದರ ಜೊತೆಗೆ ಹಂದಿ ಮಾರಾಟ ಮಳಿಗೆ ಸ್ಥಾಪನೆಗೆ ರೂ. 2.05 ಲಕ್ಷ ಸಹಾಯಧನ ನೀಡಲಾಗುವುದು. ಸದ್ಯಕ್ಕೆ ಪಶುಪಾಲನ ಇಲಾಖೆ ಕಟ್ಟಡದಲ್ಲೆ ಮಾರಾಟ ಮಳಿಗೆ ಸ್ಥಾಪಿಸಲಾಗುವುದು. ಸಂಘವೇ ಮಾರಾಟ ಮಳಿಗೆಗೆ ಕಟ್ಟಡ ಪಡೆದ ಬಳಿಕ ಸ್ಥಳಾಂತರಿಸಲಾಗುವುದು ಎಂದು ಅವರು ತಿಳಿಸಿದರು.

ಜಮೀನಿಗೆ ಮನವಿ:
ಯೋಜನೆ ಅಡಿ ಹಂದಿ ಸಾಕಣೆ ಕೇಂದ್ರ ಮತ್ತು ಕಸಾಯಿಖಾನೆ ಸ್ಥಾಪಿಸಲಾಗುವುದು. ಈ ನಿಟ್ಟಿನಲ್ಲಿ 2  ಎಕರೆ ಜಮೀನು ಮಂಜೂರು ಮಾಡುವಂತೆ ಕಂದಾಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.

ಜಮೀನು ಮಂಜೂರಾದರೆ, ದೊಡ್ಡ ನಗರಗಳಲ್ಲಿರುವ ಬಹುವಿಧಧ ವಿಶೇಷವುಳ್ಳ ಆಧುನಿಕ ಮಾಲ್‌ಗಳ ರೀತಿಯಲ್ಲೆ ಸಾಕಣೆ ಕೇಂದ್ರ ಮತ್ತು ಕಸಾಯಿಖಾನೆ ರೂಪಿಸಲಾಗುವುದು ಎಂದು ಮಾಹಿತಿ ನೀಡಿದರು.
ನೂರಾರು ಮಂದಿ: ಯೋಜನೆಯಿಂದ ಪ್ರತಿ ವರ್ಷ 125ರಿಂದ 150 ಮಂದಿಗೆ ಸಾಲ ಸೌಲಭ್ಯ ದೊರಕಲಿದೆ. ಉತ್ತಮ ಬೆಲೆ ನೀಡಿ ಸಂಘವೇ ಹಂದಿಗಳನ್ನು ಖರೀದಿಸುತ್ತದೆ.

ಸಾಕಣೆದಾರರಿಂದ ಸಾಕಣೆದಾರರಿಗೆ ಸಂಘ ಕೆಲಸ ಮಾಡುತ್ತದೆ. ಕನಿಷ್ಠ 4ರಿಂದ 5 ವರ್ಷ ಸರ್ಕಾರದಿಂದ ನೆರವು ಸಿಗುವ ಸಾಧ್ಯತೆ ಇದೆ. ಸಂಘ ಸ್ವಾವಲಂಬನೆ ಸಾಧಿಸಿದ ಬಳಿಕ ಸರ್ಕಾರ ಮತ್ತು ಇಲಾಖೆ ಹಿಂದೆ ಸರಿಯುತ್ತದೆ ಎಂದರು.

ಸಾಲ, ಸಹಾಯಧನದ ಬಗ್ಗೆ ಮಾಹಿತಿ ಪಡೆದವರು ಸದಸ್ಯರಾಗಲು ಆಸಕ್ತಿ ತೋರುತ್ತಿದ್ದಾರೆ. ಹಂದಿ ಸಾಕಣೆ, ಮಾರಾಟ ಮತ್ತು ಮೇವು ಪೂರೈಕೆಯಲ್ಲಿ ತೊಡಗಿರುವವರು ಸದಸ್ಯರಾಗಲು ಅರ್ಹರು. ಬೇರೆ ಯೋಜನೆಗಳ ಅಡಿಯಲ್ಲೂ ಕೆಲಸ ಮಾಡಲು ಸಂಘದಿಂದ ಸಾಲ ನೀಡಲಾಗುವುದು ಎಂದು ಅವರು ಹೇಳಿದರು.

ಬಂಗಾರಪೇಟೆಯ ಹಂದಿ ಸಾಕಣೆ ಕೇಂದ್ರದಲ್ಲಿ ಉತ್ತಮ ತಳಿಯ 100 ಹಂದಿಮರಿಗಳಿವೆ. ಬೆಂಗಳೂರಿನ ಹೆಸರುಘಟ್ಟದ ಕೇಂದ್ರದಿಂದಲೂ ಪಡೆಯಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.