ADVERTISEMENT

ಹಲಸು ಮಹೋತ್ಸವಕ್ಕೆ ಹರಿದು ಬಂದ ಜನಸಾಗರ

​ಪ್ರಜಾವಾಣಿ ವಾರ್ತೆ
Published 2 ಜೂನ್ 2018, 10:28 IST
Last Updated 2 ಜೂನ್ 2018, 10:28 IST
ಕೋಲಾರದಲ್ಲಿ ಶುಕ್ರವಾರ ಆರಂಭವಾದ ಹಲಸು ಮಹೋತ್ಸವದಲ್ಲಿ ಸಾರ್ವಜನಿಕರು ಹಲಸು ಹಣ್ಣು ಖರೀದಿಸಿದರು.
ಕೋಲಾರದಲ್ಲಿ ಶುಕ್ರವಾರ ಆರಂಭವಾದ ಹಲಸು ಮಹೋತ್ಸವದಲ್ಲಿ ಸಾರ್ವಜನಿಕರು ಹಲಸು ಹಣ್ಣು ಖರೀದಿಸಿದರು.   

ಕೋಲಾರ: ನಗರದ ಹೊರವಲಯದ ತೋಟಗಾರಿಕಾ ವಿಶ್ವವಿದ್ಯಾಲಯದ ವಿಜ್ಞಾನ ಕೇಂದ್ರದ ಆವರಣದಲ್ಲಿ ಶುಕ್ರವಾರ ಆರಂಭವಾದ ಹಲಸು ಮಹೋತ್ಸವಕ್ಕೆ ಜನ ಸಾಗರವೇ ಹರಿದು ಬಂದಿತು.

ವಿ.ವಿ ಆವರಣದಲ್ಲೇ ಬೆಳೆಯಲಾಗಿರುವ 30ಕ್ಕೂ ಹೆಚ್ಚು ಹಲಸು ಹಣ್ಣಿನ ತಳಿಗಳು ಹಾಗೂ ಸುಮಾರು 20 ಬಗೆಯ ಹಲಸಿನ ಸಸಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಅಧಿಕಾರಿಗಳು, ರೈತರು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು, ಶಾಲಾ ಮಕ್ಕಳು, ಸಾರ್ವಜನಿಕರು ತಂಡೋಪತಂಡವಾಗಿ ಬಂದು ಪ್ರದರ್ಶನ ವೀಕ್ಷಿಸಿದರು.

ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳು, ಕೃಷಿಗೆ ಸಂಬಂಧಿಸಿದ ಪುಸ್ತಕಗಳು ಹಾಗೂ ಕೃಷಿ ಉಪಕರಣಗಳ 40ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದ್ದು, ಈ ಮಳಿಗೆಗಳು ಜನರಿಂದ ತುಂಬಿ ಹೋಗಿದ್ದವು. ಯುವಕ ಯುವತಿಯರು ಹಲಸು ಹಣ್ಣು ಮತ್ತು ಸಸಿಗಳ ಎದುರು ನಿಂತು ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಸಾರ್ವಜನಿಕರು ಹಲಸು ಹಣ್ಣು ಹಾಗೂ ಮೌಲ್ಯವರ್ಧಿತ ಉತ್ಪನ್ನಗಳನ್ನು ಖರೀದಿಸಿದರು. ಹಲಸು ಹಣ್ಣಿನಿಂದ ತಯಾರಿಸಿದ ಹಪ್ಪಳ, ಪಾಯಸ, ಚಿಪ್ಸ್, ಐಸ್‌ಕ್ರೀಮ್, ಹಲ್ವ, ಜಾಮ್, ಕುಲ್ಫಿ, ಕೇಕ್, ಬ್ರೆಡ್, ಬಿಸ್ಕತ್‌, ಬೋಂಡಾ, ತಂಪು ಪಾನೀಯಗಳು ಹಲಸು ಪ್ರಿಯರ ಬಾಯಲ್ಲಿ ನೀರೂರಿಸಿದವು.

ADVERTISEMENT

ಹಲಸು ಬೆಳೆಯ ಬಗ್ಗೆ ಮಾಹಿತಿ ನೀಡಲು ಕೃಷಿ ವಿಜ್ಞಾನಿಗಳು ಹಾಗೂ ವಿದ್ಯಾರ್ಥಿಗಳನ್ನು ಒಳಗೊಂಡ ಮಾಹಿತಿ ಕೇಂದ್ರ ತೆರೆಯಲಾಗಿದೆ. ಮಹೋತ್ಸವಕ್ಕೆ ಬಂದಿದ್ದ ರೈತರಿಗೆ ವಿಜ್ಞಾನಿಗಳು ಮಾಹಿತಿ ಹೊತ್ತಿಗೆ ನೀಡುವುದರ ಜತೆಗೆ ಮಾಹಿತಿ ಕೊಟ್ಟರು.

ಸಾಧಕರಿಗೆ ಸನ್ಮಾನ: ಹಲಸಿನ ಬೆಳೆಗೆ ಸಂಬಂಧಿಸಿದಂತೆ ಉನ್ನತ ಸಂಶೋಧನೆ ನಡೆಸಿದ ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರಗತಿಪರ ರೈತರಾದ ಅನಂತಮೂರ್ತಿ, ಅನಿಲ್, ವನಸಾರ ಫುಡ್ ಪ್ರೈವೇಟ್‌ ಲಿಮಿಟೆಡ್‌ ವ್ಯವಸ್ಥಾಪಕಿ ಸರಿತಾ, ಸ್ತ್ರಿಶಕ್ತಿ ಸ್ವಹಾಯ ಗುಂಪಿನ ಸದಸ್ಯೆ ರತ್ನಮ್ಮ, ಬೆಂಗಳೂರು ಕೃಷಿ ವಿ.ವಿ ಪ್ರಾಧ್ಯಾಪಕಿ ಎಸ್.ಶಾಮಲಮ್ಮ, ವಿಜ್ಞಾನಿ ಜಿ.ಕರುಣಾಕರನ್, ತುಮಕೂರಿನ ಪ್ರಗತಿಪರ ರೈತ ಮರಮೇಶ್ ಸಿದ್ದು ಅವರನ್ನು ಸನ್ಮಾನಿಸಲಾಯಿತು.

ಮಹೋತ್ಸವದ ಉದ್ಘಾಟನೆಗೆ ಆಗಮಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಶನಿವಾರವೂ (ಜೂನ್‌ 2) ಹಲಸು ಮಹೋತ್ಸವ ನಡೆಯಲಿದ್ದು, ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.