ADVERTISEMENT

ಹಾಲು ಒಕ್ಕೂಟಗಳಿಗೆ 90 ಕೋಟಿ ನಷ್ಟ

ನಷ್ಟಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕೊರತೆ ಕಾರಣ: ಎಚ್.ಡಿ.ರೇವಣ್ಣ

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 8:52 IST
Last Updated 15 ಜೂನ್ 2013, 8:52 IST

ಮಾಲೂರು: ಮೂಲಸೌಲಭ್ಯ ಹಾಗೂ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಕರ್ನಾಟಕ ಹಾಲು ಮಹಾಮಂಡಲಕ್ಕೆ ಸೇರಿದ ಒಕ್ಕೂಟಗಳು ರೂ 90 ಕೋಟಿ ನಷ್ಟ ಅನುಭವಿಸುವಂತಾಗಿದೆ ಎಂದು ಶಾಸಕ ಹೆಚ್.ಡಿ.ರೇವಣ್ಣ ಆರೋಪಿಸಿದರು.

ಪಟ್ಟಣದ ತಿರುಮಲ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಿಬಿರ ಕಚೇರಿಯ ನೂತನ ಕಟ್ಟಡ ಶಂಕು ಸ್ಥಾಪನೆ ಹಾಗೂ ಶಾಸಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಹಾಲು ಉತ್ಪಾದಕರ, ಗ್ರಾಹಕರ ಹಾಗೂ ಒಕ್ಕೂಟದ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇದ್ದುದರಿಂದ ಪ್ರತಿ ವರ್ಷ ಮಂಡಳಿಯು ರೂ 90 ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದೆ. ರಾಜ್ಯ ಸರ್ಕಾರ ರೈತರು ಉತ್ಪಾದಿಸಿದ ಹಾಲಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸದಿದ್ದರೆ ಮುಂದಿನ ದಿನಗಳಲ್ಲಿ ಹೈನುಗಾರಿಕೆಯನ್ನು ನಂಬಿಕೊಂಡು ಜೀವನ ಸಾಗಿಸುವ ಕುಟುಂಬಗಳು ಬೀದಿಪಾಲಾಗುತ್ತವೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಹಾಲು ಒಕ್ಕೂಟಗಳಿಗೆ ಹೆಚ್ಚಿನ ಸಹಕಾರ ನೀಡಿ ಸೂಕ್ತ ಮಾರುಕಟ್ಟೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ. ಬಯಲು ಸೀಮೆ ಜನತೆಗೆ ಎತ್ತಿನಹೊಳೆ ಯೋಜನೆ ಶೀಘ್ರ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಬೇಕು. ಅದಕ್ಕೆ ಜೆಡಿಎಸ್ ಪೂರ್ಣ ಬೆಂಬಲ ನೀಡುತ್ತದೆ. ರಾಜ್ಯದ ಜನತೆ ಶೇ.25 ರಷ್ಟು ಮಾತ್ರ ಕಾವೇರಿ ನೀರನ್ನು ಬಳಸುತ್ತಿದ್ದಾರೆ.  ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಕೇಂದ್ರಕ್ಕೆ ಕಾವೇರಿ ನದಿ ನೀರಿನ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ಶಾಸಕ ಕೆ.ಎಸ್‌ಮಂಜುನಾಥ್, ಜಿಲ್ಲೆಗೆ ಜೀವನಾಡಿಯಾಗಲಿರುವ ಎತ್ತಿನಹೊಳೆ ಯೋಜನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದು ಜಿಲ್ಲೆಯ ಪ್ರತಿನಿಧಿಗಳು ರಾಜ್ಯ ಸರ್ಕಾರದ ಮೇಲೆ ಹಾಕಿದ ಒತ್ತಡದ ಫಲ ಎಂದು ನುಡಿದರು.

ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಸರ್ಕಾರದೊಡನೆ ಮಾತುಕತೆ ನಡೆಸಿದ ಪರಿಣಾಮ ವಿಧಾನಸಭೆ ಅಧಿವೇಶನವನ್ನು ಮೂರುದಿನಗಳ ಕಾಲ ಹೆಚ್ಚುವರಿಯಾಗಿ ನಡೆಸಲು ಸಾಧ್ಯವಾಯಿತು. ತಾಲ್ಲೂಕಿನ ಗಡಿ ಭಾಗದಲ್ಲಿರುವ ತಮಿಳುನಾಡಿಗೆ ಸೇರಿದ ಗ್ರಾಮಗಳಿಗೆ ಪೈಪ್‌ಲೈನ್ ಮುಖಾಂತರ ಕಾವೇರಿ ನೀರನ್ನು ತಮಿಳುನಾಡು ಸರ್ಕಾರ ಹರಿಸುತ್ತಿದೆ. ಆದರೆ ತಾಲ್ಲೂಕಿನ ಗಡಿ ಗ್ರಾಮದ ಜನತೆ ಕಾವೇರಿ ನೀರನ್ನು ಕದ್ದು-ಮುಚ್ಚಿ ತರುವಂತ ಪರಿಸ್ಥಿತಿ ಉದ್ಭವವಾಗಿದೆ ಎಂದು ವಿಷಾದಿಸಿದರು.

ಮಾಜಿ ಶಾಸಕ ಕೆ.ಶ್ರೀನಿವಾಸಗೌಡ, ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕ ಡಾ.ಎ.ವಿ.ಪ್ರಸನ್ನ, ಜಿಲ್ಲಾ ಪಂಚಾಯತ್ ಸದಸ್ಯರಾದ ರಾಮಸ್ವಾಮಿರೆಡ್ಡಿ, ಯಲ್ಲಮ್ಮ, ಯಶೋಧಮ್ಮ,  ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಪ್ಪ,  ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಎಟ್ಟಕೋಡಿ ಕೃಷ್ಣಾರೆಡ್ಡಿ, ಎ.ಪಿ.ಎಂ.ಸಿ ಅಧ್ಯಕ್ಷ ಬಾಬು, ಮುಖಂಡರಾದ ಪಿ.ನಾರಾಯಣಸ್ವಾಮಿ, ಬೈರ‌್ನಹಳ್ಳಿ ಪಾಪಣ್ಣ, ರವಿಶಂಕರ್, ಕೃಷ್ಣೇಗೌಡ ಮೊದಲಾದವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.