ಕೋಲಾರ: ಲೋಕಸಭಾ ಚುನಾವಣೆಗಳಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಿರಂತರವಾಗಿ ಹೊಲೆಯ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ. ಸಮುದಾಯಕ್ಕೆ ಸೇರಿದ ಆಕಾಂಕ್ಷಿಗಳಿಗೆ ಟಿಕೆಟ್ ನಿರಾಕರಿಸುವ ಮೂಲಕ ಸಾಮಾಜಿಕ ನ್ಯಾಯಕ್ಕೂ ಧಕ್ಕೆ ತರುತ್ತಿದೆ ಎಂದು ಜಿ. ಪಂ. ಮಾಜಿ ಸದಸ್ಯ ಬಾಲಾಜಿ ಚೆನ್ನಯ್ಯ ಆರೋಪಿಸಿದರು.
ನಗರದಲ್ಲಿ ಮಂಗಳವಾರ ಹೊಲೆಯರ ಕ್ಷೇಮಾಭಿವೃದ್ಧಿ ಸಂಘವು ‘ಮುಂದಿನ ರಾಜಕೀಯ ನಿಲುವು’ ಕುರಿತು ಏರ್ಪಡಿಸಿದ್ದ ಸಂಕಿರಣದಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕ್ಷೇತ್ರದಲ್ಲಿ, ಅಸ್ಪೃಶ್ಯತೆಯ ಕರಾಳ ನೆರಳಿನಲ್ಲಿ ನಲುಗಿದ ಹೊಲೆಯ ಸಮುದಾಯಕ್ಕೆ ಸೇರಿದ ಸುಮಾರು 4.50 ಲಕ್ಷ ಮತದಾರರಿದ್ದಾರೆ. ಬಹುಸಂಖ್ಯಾತ ಮತದಾರರಿರುವ ಸಮುದಾಯವನ್ನು ಈ ಪಕ್ಷಗಳು ನಿರ್ಲಕ್ಷಿಸುತ್ತಲೇ ಬರುತ್ತಿವೆ.
ಪರಿಶಿಷ್ಟ ಜಾತಿಯಲ್ಲೇ ಸ್ಪೃಶ್ಯ ಸಮುದಾಯಕ್ಕೆ ಸೇರಿದ ಭೋವಿ ಆಕಾಂಕ್ಷಿಗಳಿಗೆ ಮಣೆ ಹಾಕುತ್ತಿವೆ ಎಂದು ದೂರಿದರು.
ಅಸ್ಪೃಶ್ಯತೆಯನ್ನು ಸರ್ಕಾರ ನಿಷೇಧಿಸಿದ್ದರೂ, ಈ ರಾಜಕೀಯ ಪಕ್ಷಗಳು ಹೊಲೆಯರನ್ನು ಇನ್ನೂ ಅಸ್ಪೃಶ್ಯರನ್ನಾಗಿಯೇ ಪರಿಗಣಿಸಿವೆ. ಸಮುದಾಯಕ್ಕೆ ರಾಜಕೀಯ ಮಹತ್ವಾಕಾಂಕ್ಷೆ ಇರಬಾರದು ಎಂದು ಟಿಕೆಟ್ ಆಕಾಂಕ್ಷಿಗಳನ್ನು ಕಡೆಗಣಿಸಲಾಗುತ್ತಿದೆ ಎಂದರು.
ಹೊಲೆಯ ಸಮುದಾಯದ ಮತದಾರರು ಮತ ಹಾಕದೇ ಇದ್ದರೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಗೆಲ್ಲಲು ಸಾಧ್ಯವೇ ಇಲ್ಲ. ಇಂಥ ವಾಸ್ತವಿಕವಾದ ಮಹತ್ವದ ಅಂಶವನ್ನು ಕೂಡ ಪಕ್ಷಗಳು ಕಡೆಗಣಿಸಿವೆ. ಹೀಗಾಗಿ ಎರಡೂ ಪಕ್ಷಗಳ ಅಭ್ಯರ್ಥಿಗಳು ಸೋಲುತ್ತಾರೆ ಎಂದು ಭವಿಷ್ಯ ನುಡಿದರು.
ಕೆಜಿಎಫ್‌ನ ಪ್ರಭಾವತಿ ಮಾತನಾಡಿ, ತಮ್ಮನ್ನು ಹೊಲೆಯರೆಂದು ಇತರರು ಕರೆದರೆ ಬೇಸರವಾಗುತ್ತದೆ. ಆದರೆ ಇಂದು ಹೊಲೆಯರು ತಮ್ಮ ನಿಕೃಷ್ಟ ಸ್ಥಿತಿಯನ್ನು ತಾವೇ ಮುಂದೊಡ್ಡಿ ರಾಜಕೀಯ ಅವಕಾಶಕ್ಕಾಗಿ ಗೋಗರೆಯುವ ಸನ್ನಿವೇಶ ನಿರ್ಮಾಣವಾಗಿದೆ. ಮೂಲಸೌಕರ್ಯಗಳೂ ಇಲ್ಲದೆ, ಸಮಾಜದಲ್ಲಿ ಅವಕಾಶಗಳೂ ಇಲ್ಲದೆ ಹೊಲೆಯ ಸಮುದಾಯ ಅನ್ಯಾಯಕ್ಕೆ ಈಡಾಗಿದೆ. ಚುನಾವಣೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳೂ ಅನ್ಯಾಯ ಮಾಡಿವೆ ಎಂದು ಆರೋಪಿಸಿದರು.
ಗೊಂದಲ: ಸಂಕಿರಣದಲ್ಲಿ, ರಾಜಕೀಯ ವಿಷಯಗಳ ಕುರಿತು ಯಾರೂ ಮಾತನಾಡಬಾರದು ಎಂದು ಬೆಳಗಾನಹಳ್ಳಿ ಮುನಿವೆಂಕಟಪ್ಪ ಹೇಳಿಕೆ ನೀಡಿದ್ದು ಕೆಲ ಕಾಲ ಗೊಂದಲದ ಸನ್ನಿವೇಶ ನಿರ್ಮಾಣವಾಗಿತ್ತು. ‘ಮುಂದಿನ ರಾಜಕೀಯ ನಿಲುವು’ ಎಂಬ ಶೀರ್ಷಿಕೆ ಅಡಿ ನಡೆಸುತ್ತಿರುವ ಕಾರ್ಯಕ್ರಮದಲ್ಲಿ ರಾಜಕೀಯ ವಿಷಯಗಳ ಪ್ರಸ್ತಾಪ ಮಾಡಬಾರದು ಎಂದು ಹೇಳುವುದು ಸರಿಯೇ ಎಂದು ಸಭಿಕರೊಬ್ಬರು ಪ್ರಶ್ನಿಸಿದರು. ನಂತರ ಸನ್ನಿವೇಶ ತಿಳಿಯಾಯಿತು.
ಕುರುಗಲ್ ಕೃಷ್ಣಪ್ಪ, ಹೂವಳ್ಳಿ ನಾಗರಾಜ್, ರಾಜಣ್ಣ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.