ADVERTISEMENT

ಹೋರಾಟದಿಂದ ಮಾತ್ರ ಗಡಿ ಸಮಸ್ಯೆಗೆ ಪರಿಹಾರ

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2018, 8:50 IST
Last Updated 14 ಮಾರ್ಚ್ 2018, 8:50 IST
ಕರ್ನಾಟಕ ರಕ್ಷಣಾ ವೇದಿಕೆಯು ಮುಳಬಾಗಿಲಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗಡಿನಾಡ ಕನ್ನಡ ಸಮ್ಮೇಳನವನ್ನು ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಟಿ.ಎ.ನಾರಾಯಣಗೌಡ ಉದ್ಘಾಟಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯು ಮುಳಬಾಗಿಲಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗಡಿನಾಡ ಕನ್ನಡ ಸಮ್ಮೇಳನವನ್ನು ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಟಿ.ಎ.ನಾರಾಯಣಗೌಡ ಉದ್ಘಾಟಿಸಿದರು.   

ಮುಳಬಾಗಿಲು: ‘ಹೋರಾಟದಿಂದ ಮಾತ್ರ ರಾಜ್ಯದ ಗಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅಭಿಪ್ರಾಯಪಟ್ಟರು.

ಕರ್ನಾಟಕ ರಕ್ಷಣಾ ವೇದಿಕೆಯು ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗಡಿನಾಡ ಕನ್ನಡ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ‘ಸಂಘಟನೆ ಸದಸ್ಯರು ರೈತರ, ಬಡವರ ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳ ಪರವಾಗಿ ಹೋರಾಟ ನಡೆಸುತ್ತಾರೆ. ಈ ಹೋರಾಟದಲ್ಲಿ ಸ್ವಾರ್ಥವಿಲ್ಲ’ ಎಂದು ಹೇಳಿದರು.

‘ರಾಜ್ಯವು ಹಳೇ ಮೈಸೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹೈದರಾಬಾದ್ ಕರ್ನಾಟಕ ಎಂದು ನಾನಾ ಭಾಗಗಳಾಗಿ ವಿಂಗಡಣೆಯಾಗಿದ್ದು, ಒಂದೊಂದು ಪ್ರದೇಶದ ಸಮಸ್ಯೆ ಬೇರೆ ಬೇರೆಯಾಗಿದೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕನ್ನಡಿಗರು ಸಂಘಟಿತರಾಗಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

ಇಚ್ಛಾಶಕ್ತಿ ಇಲ್ಲ: ‘ಅವಿಭಜಿತ ಕೋಲಾರ ಜಿಲ್ಲೆಯ ನೀರಿನ ಸಮಸ್ಯೆ ಬಗೆಹರಿಸಲು ಇಲ್ಲಿನ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಇಲ್ಲ. ರಾಜ್ಯದಲ್ಲಿ ಈವರೆಗೆ ಆಡಳಿತ ನಡೆಸಿರುವ ಎಲ್ಲಾ ರಾಜಕೀಯ ಪಕ್ಷಗಳು ನೀರಾವರಿ ಯೋಜನೆಗಳ ವಿಚಾರದಲ್ಲಿ ಈ ಭಾಗದ ಜನರಿಗೆ ಅನ್ಯಾಯ ಮಾಡಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವ ನದಿ ಮೂಲಗಳಿಂದ ಜಿಲ್ಲೆಗೆ ನೀರು ಹರಿಸಬಹುದೆಂಬ ಬಗ್ಗೆ ನೀರಾವರಿ ತಜ್ಞರಿಂದ ಮಾಹಿತಿ ಪಡೆದು ಹೋರಾಟ ರೂಪಿಸಬೇಕು. ಯೋಜನೆ ಜಾರಿಯಾಗುವವರೆಗೂ ನಿರಂತರ ಹೋರಾಟ ನಡೆಸುವ ಮೂಲಕ ಸರ್ಕಾರವನ್ನು ಎಚ್ಚರಿಸಬೇಕು ಎಂದು ಹೇಳಿದರು.

ಸೌಹಾರ್ದಯುತ ಜೀವನ: ‘ಗಡಿ ಭಾಗದಲ್ಲಿ ಕನ್ನಡ ಮತ್ತು ತೆಲುಗು ಭಾಷಿಕರು ಸೌಹಾರ್ದಯುತ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ವೈವಾಹಿಕ ಸಂಬಂಧಗಳು, ವ್ಯಾವಹಾರಿಕ ಚಟುವಟಿಕೆಗಳು ಇದಕ್ಕೆ ಕಾರಣ’ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್‌ ಅಭಿಪ್ರಾಯಪಟ್ಟರು.

‘ಕನ್ನಡಿಗರು ವಿದೇಶದಲ್ಲೂ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಂಗಲಿ ಗಡಿ ಭಾಗದ ಟೋಲ್‌ನಲ್ಲಿ ಅನ್ಯ ಭಾಷಿಕರೇ ಕೆಲಸ ಮಾಡುತ್ತಿರುವುದು ಗಮನಕ್ಕೆ ಬಂದ ಮೇಲೆ ಕನ್ನಡಿಗರಿಗೂ ಉದ್ಯೋಗಾವಕಾಶ ಕಲ್ಪಿಸುವ ಪ್ರಯತ್ನ ಮಾಡಿದೆ. ಇದರಿಂದ 80 ಮಂದಿ ಕನ್ನಡಿಗರಿಗೆ ಉದ್ಯೋಗ ಸಿಕ್ಕಿದೆ’ ಎಂದು ಹೇಳಿದರು.

ಹೋರಾಟದಿಂದ ಮಾತ್ರ ಸಾಧನೆ ಮಾಡಬಹುದು ಎಂಬುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಉತ್ತಮ ಉದಾಹರಣೆ. ತಾನು ಆರಂಭದಿಂದಲೂ ಕನ್ನಡಪರ ಹೋರಾಟಗಳಿಗೆ ಬೆಂಬಲ ನೀಡುತ್ತಿದ್ದೇನೆ. ಮುಂದೆಯೂ ಕನ್ನಡಪರ ಹೋರಾಟಗಳಿಗೆ ಧ್ವನಿಯಾಗುತ್ತೇನೆ ಎಂದರು.

ಕನ್ನಡ ಕಟ್ಟುವ ಕೆಲಸ: ‘ಗಡಿ ಜಿಲ್ಲೆಗಳಲ್ಲಿ ಕನ್ನಡ ಕಟ್ಟುವ ಕೆಲಸ ಆಗಬೇಕಿದ್ದು, ಈ ನಿಟ್ಟಿನಲ್ಲಿ ಯುವಕರು ಕಾರ್ಯೋನ್ಮುಖರಾಗಬೇಕು. ಒಂದನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ ಕನ್ನಡ ಭಾಷೆಯಲ್ಲೇ ಶಿಕ್ಷಣ ಸಿಗಬೇಕು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಜೆ.ಜಿ.ನಾಗರಾಜ್ ಹೇಳಿದರು.

‘ಖಾಸಗಿ ಶಾಲೆಗಳಲ್ಲಿ ಒಂದನೇ ತರಗತಿಗೆ 6 ಮಂದಿ ಶಿಕ್ಷಕರಿದ್ದರೆ, ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೂ ಒಬ್ಬರೇ ಶಿಕ್ಷಕರಿರುತ್ತಾರೆ. ಖಾಸಗಿ ಶಾಲೆಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತಿವೆ. ಆದರೆ, ಸರ್ಕಾರಿ ಶಾಲೆಗಳು ನಿಂತ ನೀರಾಗಿವೆ’ ಎಂದು ವಿಷಾದಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಸಿ.ನೀಲಕಂಠೇಗೌಡ, ಕೋಚಿಮುಲ್ ನಿರ್ದೇಶಕ ಆರ್.ಆರ್.ರಾಜೇಂದ್ರಗೌಡ, ಜಿಲ್ಲಾ ಪರಿಸರ ಅಧಿಕಾರಿ ಸಿ.ಆರ್.ಮಂಜುನಾಥ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ರಾಘವೇಂದ್ರ, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಂಜೀವಪ್ಪ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಲತಾಬಾಯಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.