ADVERTISEMENT

ದೆಹಲಿ ರೈಲು ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2019, 15:57 IST
Last Updated 5 ಮಾರ್ಚ್ 2019, 15:57 IST
ಸಂಸದ ಕೆ.ಎಚ್‌.ಮುನಿಯಪ್ಪ ಹಾಗೂ ಸಾರ್ವಜನಿಕರು ಬೆಂಗಳೂರಿನ ಯಶವಂತಪುರ ಮತ್ತು ದೆಹಲಿಯ ನಿಜಾಮುದ್ದೀನ್‌ ನಡುವೆ ಮಂಗಳವಾರ ಸಂಚಾರ ಆರಂಭಿಸಿದ ರೈಲನ್ನು ಕೋಲಾರ ನಿಲ್ದಾಣದಲ್ಲಿ ಸ್ವಾಗತಿಸಿದರು.
ಸಂಸದ ಕೆ.ಎಚ್‌.ಮುನಿಯಪ್ಪ ಹಾಗೂ ಸಾರ್ವಜನಿಕರು ಬೆಂಗಳೂರಿನ ಯಶವಂತಪುರ ಮತ್ತು ದೆಹಲಿಯ ನಿಜಾಮುದ್ದೀನ್‌ ನಡುವೆ ಮಂಗಳವಾರ ಸಂಚಾರ ಆರಂಭಿಸಿದ ರೈಲನ್ನು ಕೋಲಾರ ನಿಲ್ದಾಣದಲ್ಲಿ ಸ್ವಾಗತಿಸಿದರು.   

ಕೋಲಾರ: ‘ಬಹು ವರ್ಷಗಳ ನಂತರ ಕೋಲಾರ ಮಾರ್ಗವಾಗಿ ಬೆಂಗಳೂರಿನ ಯಶವಂತಪುರದಿಂದ ದೆಹಲಿಗೆ ರೈಲು ಸಂಚಾರ ಆರಂಭವಾಗಿದ್ದು, ಜಿಲ್ಲೆಯ ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು’ ಎಂದು ಸಂಸದ ಕೆ.ಎಚ್.ಮುನಿಯಪ್ಪ ಮನವಿ ಮಾಡಿದರು.

ಬೆಂಗಳೂರಿನಿಂದ ದೆಹಲಿಗೆ ಮಂಗಳವಾರ ಸಂಚಾರ ಆರಂಭಿಸಿದ ರೈಲಿಗೆ ಇಲ್ಲಿ ಹಸಿರು ನಿಶಾನೆ ತೋರಿ ಮಾತನಾಡಿ, ‘ಬಹು ನಿರೀಕ್ಷಿತ ಈ ರೈಲು ಯಶವಂತಪುರದಿಂದ ಸಂಚಾರ ಆರಂಭಿಸಿ ಅವಿಭಜಿತ ಕೋಲಾರ ಜಿಲ್ಲೆ ಮೂಲಕ ಸಾಗಿ ತಿರುಪತಿ ಮಾರ್ಗವಾಗಿ ದೆಹಲಿಯ ನಿಜಾಮುದ್ದೀನ್‌ಗೆ ಹೋಗುತ್ತದೆ’ ಎಂದರು.

‘ಜಿಲ್ಲಾ ಕೇಂದ್ರದಿಂದ ರೈಲಿನಲ್ಲಿ ದೆಹಲಿಗೆ ಹೋಗಬೇಕು ಎಂಬುದು ಬಹು ದಿನದ ಕನಸಾಗಿತ್ತು. ಮಾಜಿ ರೈಲ್ವೆ ಸಚಿವ ದಿವಂಗತ ಸಿ.ಕೆ.ಜಾಫರ್ ಷರೀಫ್ ಮತ್ತು ಹಾಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ಸಹಕಾರದಿಂದ ಈ ಕನಸು ನನಸಾಗಿದೆ’ ಎಂದು ಸ್ಮರಿಸಿದರು.

ADVERTISEMENT

‘ಬೆಂಗಳೂರಿನಿಂದ ಬಂಗಾರಪೇಟೆವರೆಗೆ ಬ್ರಾಡ್‌ ಗೇಜ್‌ ನಿರ್ಮಾಣ ಮಾಡಲಾಗಿದೆ. ದೇಶದ ಪ್ರಮುಖ ಸ್ಥಳಗಳಿಗೆ ಕೋಲಾರದಿಂದ ರೈಲುಗಳು ಸಂಚರಿಸಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ಸರಕು ಸಾಗಣೆ ರೈಲು ಸಹ ಈ ಮಾರ್ಗದಲ್ಲಿ ಸಂಚಾರ ಆರಂಭಿಸಲಿದೆ’ ಎಂದು ವಿವರಿಸಿದರು.

ಮಾಜಿ ಸಚಿವ ನಿಸಾರ್ ಅಹಮ್ಮದ್, ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ, ಮಾಜಿ ಅಧ್ಯಕ್ಷ ಶ್ರೀನಿವಾಸ್, ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್‌ಬಾಬು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.