ADVERTISEMENT

ಅಪೌಷ್ಟಿಕತೆ : ಸಾವಿನ ದವಡೆಯಲ್ಲಿ 123 ಮಕ್ಕಳು

ಜಿಲ್ಲೆಯ ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಳ: ಆತಂಕಕಾರಿ ಸಂಗತಿ ಸಮೀಕ್ಷೆಯಲ್ಲಿ ಬಯಲು

ಜೆ.ಆರ್.ಗಿರೀಶ್
Published 17 ಜುಲೈ 2021, 11:49 IST
Last Updated 17 ಜುಲೈ 2021, 11:49 IST
ಎಂ.ಜಿ.ಪಾಲಿ
ಎಂ.ಜಿ.ಪಾಲಿ   

ಕೋಲಾರ: ಜಿಲ್ಲೆಯಲ್ಲಿ ಅಪೌಷ್ಟಿಕತೆ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ದಿಢೀರ್‌ ಏರಿಕೆಯಾಗಿದ್ದು, ಈ ಮಕ್ಕಳು ಸಾವಿನ ದವಡೆಯಲ್ಲಿ ಸಿಲುಕಿವೆ ಎಂಬ ಆತಂಕಕಾರಿ ಸಂಗತಿ ಸಮೀಕ್ಷೆಯಿಂದ ಬಯಲಾಗಿದೆ.

ಕೋವಿಡ್ ಹಾಗೂ ಲಾಕ್‌ಡೌನ್‌ ಕಾರಣಕ್ಕೆ ಕಳೆದೊಂದು ವರ್ಷದಿಂದ ಅಂಗನವಾಡಿಗಳು ಬಂದ್‌ ಆಗಿವೆ. ಮತ್ತೊಂದೆಡೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಕೋವಿಡ್‌ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಹೀಗಾಗಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಮೀಕ್ಷೆ ಜಿಲ್ಲೆಯಲ್ಲಿ ಕುಂಠಿತಗೊಂಡಿತ್ತು.

ಜಿಲ್ಲೆಯಲ್ಲಿ 2,080 ಅಂಗನವಾಡಿ ಕೇಂದ್ರಗಳಿದ್ದು, ಈ ಕೇಂದ್ರಗಳಿಗೆ ಬರುವ ಹುಟ್ಟಿನಿಂದ 6 ವರ್ಷ ವಯೋಮಾನದವರೆಗಿನ 98,569 ಮಕ್ಕಳ ತೂಕ, ಬೆಳವಣಿಗೆ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ಜಂಟಿ ಸಮೀಕ್ಷೆ ನಡೆಸಿದ್ದಾರೆ.

ADVERTISEMENT

ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್‌ಒ) ಮಾರ್ಗಸೂಚಿ ಪ್ರಕಾರ ಮಕ್ಕಳ ವಯಸ್ಸು ಮತ್ತು ತೂಕದ ಆಧಾರದ ಮೇಲೆ ಬೆಳವಣಿಗೆಯನ್ನು ಗ್ರೇಡ್ ಆಧಾರದಲ್ಲಿ ಗುರುತಿಸಲಾಗುತ್ತದೆ. ಅದರ ಪ್ರಕಾರ ಸಾಮಾನ್ಯ, ಸಾಧಾರಣ ಮತ್ತು ತೀವ್ರ ಕಡಿಮೆ ತೂಕ ಹೊಂದಿರುವ ಮಕ್ಕಳೆಂದು ನಿರ್ಧರಿಸಲಾಗುತ್ತದೆ.

ಮೇ ಅಂತ್ಯದವರೆಗೆ ಜಿಲ್ಲೆಯಲ್ಲಿ ಸಾಧಾರಣ ಅಪೌಷ್ಟಿಕತೆ (ಮಾಡರೇಟ್‌ ಅಕ್ಯೂಟ್‌ ಮಾಲ್‌ನ್ಯೂಟ್ರಿಷನ್‌– ಮ್ಯಾಮ್‌) ಸಮಸ್ಯೆಯಿಂದ ಬಳಲುತ್ತಿದ್ದ ಮಕ್ಕಳ ಸಂಖ್ಯೆ 2,532 ಮತ್ತು ತೀವ್ರ ಅಪೌಷ್ಟಿಕತೆಗೆ (ಸಿವಿಯರ್‌ ಅಕ್ಯೂಟ್‌ ಮಾಲ್‌ನ್ಯೂಟ್ರಿಷನ್‌–ಸ್ಯಾಮ್‌) ತುತ್ತಾಗಿರುವ ಮಕ್ಕಳ ಸಂಖ್ಯೆ 93 ಇತ್ತು.

ಜೂನ್‌ನಲ್ಲಿ ನಡೆದ ಸಮೀಕ್ಷೆಯಲ್ಲಿ ಹೊಸದಾಗಿ 1,039 ಮಂದಿ ಮ್ಯಾಮ್‌ ಮಕ್ಕಳು ಹಾಗೂ 30 ಮಂದಿ ಸ್ಯಾಮ್‌ ಮಕ್ಕಳು ಪತ್ತೆಯಾಗಿದ್ದಾರೆ. ಇದರೊಂದಿಗೆ ಮ್ಯಾಮ್‌ ಮಕ್ಕಳ ಸಂಖ್ಯೆ 3,571ಕ್ಕೆ ಮತ್ತು ಸ್ಯಾಮ್‌ ಮಕ್ಕಳ ಸಂಖ್ಯೆ 123ಕ್ಕೆ ಏರಿಕೆಯಾಗಿದೆ. ಸಾಧಾರಣ ತೂಕ ಹೊಂದಿರುವ ಮಕ್ಕಳಲ್ಲಿ ಸಾಧಾರಣ ಅಪೌಷ್ಟಿಕತೆ ಹಾಗೂ ತೀರಾ ಕಡಿಮೆ ತೂಕ ಹೊಂದಿರುವ ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ ಇರುವುದು ಸಮೀಕ್ಷೆಯಿಂದ ಗೊತ್ತಾಗಿದೆ.

ಬೆಳವಣಿಗೆ ಕುಂಠಿತ: ಬಡ, ಮಧ್ಯಮ ಮತ್ತು ಮೇಲ್ವರ್ಗ, ಗಂಡು ಹಾಗೂ ಹೆಣ್ಣು ಹೀಗೆ ಎಲ್ಲಾ ವರ್ಗದ ಮಕ್ಕಳಲ್ಲೂ ಅಪೌಷ್ಟಿಕತೆ ಕಾಣಿಸಿಕೊಂಡಿದೆ. ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಭಾಗದ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಅಪೌಷ್ಟಿಕತೆಗೆ ತುತ್ತಾಗಿದ್ದಾರೆ. ಈ ಮಕ್ಕಳಲ್ಲಿ ಅಂಗವೈಕಲ್ಯ, ಕಡಿಮೆ ಬುದ್ಧಿಶಕ್ತಿ, ಕುರುಡುತನ, ಹೃದಯ ಸಂಬಂಧಿ ಸಮಸ್ಯೆ ಕಾಣಿಸಿಕೊಂಡಿದ್ದು, ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗಿದೆ.

ಕಾರಣಗಳೇನು?: ಬಾಲ್ಯವಿವಾಹ, ಗರ್ಭಿಣಿಯರಲ್ಲಿನ ರಕ್ತಹೀನತೆ, ಅವಧಿಪೂರ್ವ ಹೆರಿಗೆ, ಹುಟ್ಟು ನ್ಯೂನತೆ, ಕಡಿಮೆ ತೂಕ, ಸೋಂಕು, ಶುದ್ಧ ನೀರು ಹಾಗೂ ಆಹಾರದ ಕೊರತೆ, ನೈರ್ಮಲ್ಯ ಸಮಸ್ಯೆ, ಪೋಷಕರಲ್ಲಿ ಮಕ್ಕಳ ಪಾಲನೆಯ ತಿಳಿವಳಿಕೆ ಇಲ್ಲದಿರುವುದು, ಒಂದು ಹೆರಿಗೆಗೂ ಮತ್ತೊಂದು ಹೆರಿಗೆಗೂ ಹೆಚ್ಚಿನ ಅಂತರ ಇಲ್ಲದಿರುವುದು, ರಕ್ತ ಸಂಬಂಧದಲ್ಲಿನ ಮದುವೆಯು ಅಪೌಷ್ಟಿಕತೆಗೆ ಮುಖ್ಯ ಕಾರಣಗಳೆಂದು ವೈದ್ಯರು ಗುರುತಿಸಿದ್ದಾರೆ.

ಸಾವಿನತ್ತ ಹೆಜ್ಜೆ: ಆರು ವರ್ಷದೊಳಗಿನ ಮಕ್ಕಳ ಸಾವಿಗೆ ಕಾರಣವಾಗುವ ಅಂಶಗಳಲ್ಲಿ ಅಪೌಷ್ಟಿಕತೆಯು ಪ್ರಮುಖವಾಗಿದ್ದು, ಸ್ಯಾಮ್‌ ಮಕ್ಕಳ ಆರೋಗ್ಯದ ಮೇಲೆ ಹೆಚ್ಚು ನಿಗಾ ಇಡಲಾಗಿದೆ. ತೀರಾ ಕಡಿಮೆ ತೂಕ ಹೊಂದಿರುವ ಸ್ಯಾಮ್‌ ಮಕ್ಕಳನ್ನು ವೈದ್ಯಕೀಯವಾಗಿ ಆರೋಗ್ಯ ಕಾರ್ಯಕರ್ತರ ಪರಿಭಾಷೆಯಲ್ಲಿ ಸಾವಿನತ್ತ ಹೆಜ್ಜೆ ಹಾಕಿರುವ ಮಕ್ಕಳೆಂದೇ ಪರಿಗಣಿಸಲಾಗುತ್ತದೆ.

ಸ್ಯಾಮ್‌ ಮಕ್ಕಳನ್ನು ಜಿಲ್ಲಾ ಆಸ್ಪತ್ರೆಯಲ್ಲಿನ ಪೌಷ್ಟಿಕ ಆಹಾರ ಪುನರ್ವಸತಿ ಕೇಂದ್ರಕ್ಕೆ ಕರೆತಂದು ಆರೈಕೆ ಮಾಡಲಾಗುತ್ತದೆ. 15 ದಿನಗಳ ಕಾಲ ಮಕ್ಕಳನ್ನು ಕೇಂದ್ರದಲ್ಲೇ ಇರಿಸಿಕೊಂಡು ತೂಕ ಮತ್ತು ಬೆಳವಣಿಗೆ ವೃದ್ಧಿಗೆ ಪೂರಕವಾದ ಪೌಷ್ಟಿಕ ಆಹಾರ ಪದಾರ್ಥ ಕೊಡಲಾಗುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸ್ಯಾಮ್‌ ಮಕ್ಕಳಲ್ಲಿನ ಅಪೌಷ್ಟಿಕತೆ ದೂರ ಮಾಡಲು ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.