ADVERTISEMENT

2 ವರ್ಷದ ಬಾಕಿ ಕೂಲಿ 21 ಕೋಟಿ

ಉದ್ಯೋಗ ಖಾತ್ರಿ ಅಸಮರ್ಪಕ ಅನುಷ್ಠಾನ

​ಪ್ರಜಾವಾಣಿ ವಾರ್ತೆ
Published 22 ಜೂನ್ 2013, 12:10 IST
Last Updated 22 ಜೂನ್ 2013, 12:10 IST

ಕೋಲಾರ: 2009-10 ಮತ್ತು 2010-11ನೇ ಸಾಲಿನಲ್ಲಿ ನಡೆದ ಉದ್ಯೋಗ ಖಾತ್ರಿ ಕಾಮಗಾರಿಗಳಲ್ಲಿ ಕೆಲಸ ಮಾಡಿದವರಿಗೆ ರೂ 21 ಕೋಟಿ ರೂಪಾಯಿ ಕೂಲಿ ಬಾಕಿ ಕೊಡಬೇಕಾಗಿದೆ. ಆ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡದಿರಲು ಯೋಜನೆಯ ಅಸಮರ್ಪಕ ಅನುಷ್ಠಾನವೇ ಕಾರಣ ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಆರ್ಥಿಕ ವರ್ಷದ ಆರಂಭದಿಂದಲೂ ಸುಮ್ಮನಿದ್ದು ಕೊನೆಯ ಮೂರು ತಿಂಗಳಲ್ಲಿ 1 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಬಿಲ್ ಸಲ್ಲಿಸುವ ಪರಿಪಾಠ ಜಿಲ್ಲೆಯಲ್ಲಿ ಕಂಡು ಬಂದಿದೆ. ಕೇಂದ್ರ ಸರ್ಕಾರ ಇದನ್ನು ಒಪ್ಪುವುದಿಲ್ಲ ಎಂದು ಹೇಳಿದರು.

2 ವರ್ಷದಲ್ಲಿ ಆಗಿರುವ ಕೆಲಸಗಳ ಪೈಕಿ ದಾಖಲೆ ಸಲ್ಲಿಸಿರುವ ಕಾಮಗಾರಿಗಳಿಗೆ ಮಾತ್ರ ಕೇಂದ್ರ ಹಣ ಬಿಡುಗಡೆ ಮಾಡಿದೆ. ಆದರೆ ಕಾಮಗಾರಿಯ ದಾಖಲಾತಿಗಳೇ ಇಲ್ಲದೆ ಕೆಲಸ ಆಗಿದೆ ಎಂದು ಸಲ್ಲಿಸಲಾಗಿರುವ ಬಿಲ್‌ಗಳನ್ನು ತಿರಸ್ಕರಿಸಲಾಗಿದೆ. ಎಂಐಎಸ್‌ನಲ್ಲಿ ದಾಖಲಾದ ಹಣಕ್ಕಷ್ಟೇ ಅನುಮೋದನೆ ನೀಡಿದೆ ಎಂದರು.

ಸದ್ಬಳಕೆ ಆಗಲಿ: ಉದ್ಯೋಗ ಖಾತ್ರಿ, ಕುಡಿಯುವ ನೀರು, ಸ್ವರೋಜ್‌ಗಾರ್ ಸೇರಿದಂತೆ ಕೇಂದ್ರ ಸರ್ಕಾರವು ವಿವಿಧ ಯೋಜನೆಗಳಿಗೆ ನೀಡುವ ಹಣವನ್ನು ಸಕಾಲದಲ್ಲಿ ಬಳಸಿ ಜನರಿಗೆ ಅನುಕೂಲ ಕಲ್ಪಿಸುವ ಕಡೆಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಸೂಚಿಸಿದರು.

ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡಿದವರಿಗೆ 2 ವರ್ಷದ ಕೂಲಿ ಸಿಕ್ಕಿಲ್ಲ. ಟ್ಯಾಂಕರ್ ನೀರು ಪೂರೈಸಿದವರಿಗೆ ಕೋಟ್ಯಂತರ ಹಣ ನೀಡಿಲ್ಲ ಎಂಬ ಸಂಗತಿಗಳು ಬೇಸರ ತರಿಸುವಂಥವು. ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಮತ್ತು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಸ್ತು ಕ್ರಮ ಕೈಗೊಳ್ಳಲು ಹಿಂಜರಿಯಬಾರದು ಎಂದರು.

ಜಮೀನು ಕೊಡಿ: ಪ್ರತಿ ಹೋಬಳಿ ಕೇಂದ್ರದಲ್ಲೂ ಪರಿಶಿಷ್ಟ ಜಾತಿ, ವರ್ಗದವರಿಗೆ ವಸತಿ ಶಾಲೆ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಪ್ರತಿ ಶಾಲೆಗೆ ಕನಿಷ್ಠ 10 ಎಕರೆ ಜಮೀನು ನೀಡಲು ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಮರಳು ಮಾಫಿಯಾ: ಕೆರೆಗಳಲ್ಲಿ ಅಕ್ರಮವಾಗಿ ಮರಳು ತೆಗೆದು ಸಾಗಿಸುವವರನ್ನು ಹಿಡಿದು ಕ್ರಿಮಿನಲ್ ಮೊಕದ್ದಮೆ ಹೂಡಲು ಸ್ಥಳೀಯರು ಸಹಕರಿಸುತ್ತಿಲ್ಲ ಎಂದು ಜಿಲ್ಲಾಧಿಕಾರಿ ವಿಶ್ವನಾಥ್ ದೂರಿದರು.

ಮರಳು ಮಾಫಿಯಾದವರನ್ನು ಹಿಡಿದು ಮೊಕದ್ದಮೆ ಹೂಡಲು ಮಹಜರ್ ನಡೆಸಿ ಅದಕ್ಕೆ ಸಹಿ ಹಾಕಿ ಎಂದರೆ ಆಯಾ ಗ್ರಾಮದ ಯಾರೊಬ್ಬರೂ ಮುಂದೆ ಬರುತ್ತಿಲ್ಲ. ಹೀಗಾಗಿ ನ್ಯಾಯಾಲಯದಲ್ಲಿ ಪ್ರಕರಣಗಳಿಗೆ ಹಿನ್ನಡೆಯಾಗುತ್ತಿದೆ ಎಂದು ತಿಳಿಸಿದರು. ಮರಳು ಮಾಫಿಯಾದಿಂದ ಆಗುವ ತೊಂದರೆಗಳ ಬಗ್ಗೆ ಸ್ಥಳೀಯರಿಗೆ ಜ್ಞಾನೋದಯ ಆಗುವವರೆಗೂ ಅದನ್ನು ನಿಲ್ಲಿಸುವುದು ಕಷ್ಟಸಾಧ್ಯ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.