ADVERTISEMENT

ಕೋಲಾರ: 3 ಸೋಂಕಿತರ ಸಾವು, 49 ಮಂದಿಗೆ ಸೋಂಕು

ಜಿಲ್ಲೆಯಲ್ಲಿ ಮುಂದುವರಿದ ಕೋವಿಡ್‌ ಸಾವಿನ ಸರಣಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2020, 15:37 IST
Last Updated 5 ಆಗಸ್ಟ್ 2020, 15:37 IST
ಕೋಲಾರ ತಾಲ್ಲೂಕಿನ ನರಸಾಪುರ ಗ್ರಾಮದಲ್ಲಿ ಬುಧವಾರ ಪತ್ತೆಯಾದ ಕೊರೊನಾ ಸೋಂಕಿತ ವ್ಯಕ್ತಿಯ ಮನೆ ಸುತ್ತಮುತ್ತಲಿನ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಯಿತು.
ಕೋಲಾರ ತಾಲ್ಲೂಕಿನ ನರಸಾಪುರ ಗ್ರಾಮದಲ್ಲಿ ಬುಧವಾರ ಪತ್ತೆಯಾದ ಕೊರೊನಾ ಸೋಂಕಿತ ವ್ಯಕ್ತಿಯ ಮನೆ ಸುತ್ತಮುತ್ತಲಿನ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಯಿತು.   

ಕೋಲಾರ: ಜಿಲ್ಲೆಯಲ್ಲಿ ಬುಧವಾರ 3 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಾವಿನ ಸಂಖ್ಯೆ 32ಕ್ಕೆ ಏರಿಕೆಯಾಗಿದೆ.

ಮಾಲೂರು ಪಟ್ಟಣದ ಕೃಷ್ಣಪ್ಪ ಲೇಔಟ್‌ ಹಾಗೂ ಮಾರುತಿ ಬಡಾವಣೆಯ ಇಬ್ಬರು ಸೋಂಕಿತ ವೃದ್ಧರು ಮತ್ತು ಕೋಲಾರ ತಾಲ್ಲೂಕಿನ ಸೋಂಕಿತ ವ್ಯಕ್ತಿಯೊಬ್ಬರು ಜಿಲ್ಲಾ ಕೇಂದ್ರದ ಆರ್‌.ಎಲ್‌.ಜಾಲಪ್ಪ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಇದರ ಬೆನ್ನಲ್ಲೇ ಹೊಸದಾಗಿ 49 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 698ಕ್ಕೆ ಹೆಚ್ಚಳವಾಗಿದೆ. ಮಾಲೂರು ತಾಲ್ಲೂಕಿನಲ್ಲಿ ಮೂವರಿಗೆ ಮತ್ತು ಮುಳಬಾಗಿಲು ತಾಲ್ಲೂಕಿನಲ್ಲಿ ಒಬ್ಬರಿಗೆ ಸೋಂಕು ಬಂದಿದೆ. ಈ 4 ಮಂದಿಯೂ ವಿಷಮ ಶೀತ ಜ್ವರದಿಂದ ಬಳಲುತ್ತಿದ್ದಾರೆ.

ADVERTISEMENT

ಬಂಗಾರಪೇಟೆ ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರಕ್ಕೆ ತುತ್ತಾಗಿರುವ 4 ಮಂದಿಗೆ ಮತ್ತು ಸೋಂಕಿತರ ಸಂಪರ್ಕದಿಂದ ಒಬ್ಬರಿಗೆ ಸೋಂಕು ತಗುಲಿದೆ. ಕೆಜಿಎಫ್‌ ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರದಿಂದ ಬಳಲುತ್ತಿರುವ ಇಬ್ಬರಿಗೆ, ಸೋಂಕಿತರ ಸಂಪರ್ಕದಿಂದ ಒಬ್ಬರಿಗೆ ಮತ್ತು ಹೊರ ಜಿಲ್ಲೆಗೆ ಹೋಗಿದ್ದ ಒಬ್ಬರಿಗೆ ಸೋಂಕು ಹರಡಿದೆ.

ಸೋಂಕಿತರ ನಂಟು: ಕೋಲಾರ ತಾಲ್ಲೂಕಿನಲ್ಲಿ 26 ಮಂದಿಗೆ ಸೋಂಕು ಹರಡಿದೆ. ವಿಷಮ ಶೀತ ಜ್ವರದಿಂದ ಬಳಲುತ್ತಿರುವ 15 ಮಂದಿಗೆ, ಸೋಂಕಿತ ವ್ಯಕ್ತಿ ಸಂಖ್ಯೆ 1,45,196ರ ಸಂಪರ್ಕದಿಂದ 4 ಮಂದಿಗೆ, ಸೋಂಕಿತ ವ್ಯಕ್ತಿ ಸಂಖ್ಯೆ 1,51,500ರ ಸಂಪರ್ಕದಿಂದ 3 ಮಂದಿಗೆ ಹಾಗೂ ಇತರೆ ಸೋಂಕಿತರ ಸಂಪರ್ಕದಿಂದ 4 ಮಂದಿಗೆ ಸೋಂಕು ತಗುಲಿದೆ.

ಶ್ರೀನಿವಾಸಪುರ ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರಕ್ಕೆ ತುತ್ತಾಗಿರುವ 5 ಮಂದಿಗೆ, ಸೋಂಕಿತ ವ್ಯಕ್ತಿ ಸಂಖ್ಯೆ 1,07,820ರ ಸಂಪರ್ಕದಿಂದ 4 ಮಂದಿಗೆ ಮತ್ತು ಸೋಂಕಿತ ವ್ಯಕ್ತಿ ಸಂಖ್ಯೆ 1,37,297ರ ಸಂಪರ್ಕದಿಂದ ಒಬ್ಬರಿಗೆ ಸೋಂಕು ಬಂದಿದೆ.

ಸೋಂಕಿತರ ಮನೆ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ. ಅಲ್ಲದೇ, ಸುರಕ್ಷತಾ ಕ್ರಮವಾಗಿ ಇಡೀ ಪ್ರದೇಶದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಕ್ವಾರಂಟೈನ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.