ADVERTISEMENT

42 ಮಂದಿಗೆ ಸೋಂಕು: ಗ್ರಾಮ ಸೀಲ್‌ಡೌನ್‌

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 11:52 IST
Last Updated 20 ಏಪ್ರಿಲ್ 2021, 11:52 IST
ಕೋಲಾರ ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ 42 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಮವನ್ನು ಸೀಲ್‌ಡೌನ್‌ ಮಾಡಿರುವುದು.
ಕೋಲಾರ ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ 42 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಮವನ್ನು ಸೀಲ್‌ಡೌನ್‌ ಮಾಡಿರುವುದು.   

ಕೋಲಾರ: ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ವಿದ್ಯಾರ್ಥಿಯಿಂದ 42 ಮಂದಿಗೆ ಕೊರೊನಾ ಸೋಂಕು ಹರಡಿರುವುದು ಮಂಗಳವಾರ ದೃಢಪಟ್ಟಿದ್ದು, ಇಡೀ ಗ್ರಾಮವನ್ನು ಸೀಲ್‌ಡೌನ್ ಮಾಡಲಾಗಿದೆ.

ಬೆಂಗಳೂರಿನಲ್ಲಿ ಓದುತ್ತಿದ್ದ ಲಕ್ಷ್ಮೀಸಾಗರದ ವಿದ್ಯಾರ್ಥಿಯೊಬ್ಬ ಅನಾರೋಗ್ಯದ ಕಾರಣಕ್ಕೆ ಇತ್ತೀಚೆಗೆ ಗ್ರಾಮಕ್ಕೆ ಮರಳಿದ್ದ. ಆತನಿಗೆ ಕೋವಿಡ್‌ ಪರೀಕ್ಷೆ ಮಾಡಿದಾಗ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆತನ ಸಂಪರ್ಕಕ್ಕೆ ಬಂದ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರಿಗೆ ಸೋಂಕು ಹರಡಿದೆ.

ಗ್ರಾಮದ ಜನಸಂಖ್ಯೆ ಸುಮಾರು 700 ಇದ್ದು, ಈ ಪೈಕಿ 182 ಮಂದಿಗೆ ಕೋವಿಡ್‌ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 41 ಮಂದಿಗೆ ಸೋಂಕು ತಗುಲಿರುವ ಖಚಿತವಾಗಿದೆ. ಉಳಿದ ಗ್ರಾಮಸ್ಥರಿಗೂ ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದ್ದು, ಸೋಂಕಿತರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯಿದೆ.

ADVERTISEMENT

ಇಡೀ ಗ್ರಾಮವನ್ನು ಕಂಟೈನ್‌ಮೆಂಟ್‌ ವಲಯವಾಗಿ ಘೋಷಿಸಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಬಂದ್‌ ಮಾಡಿದ್ದಾರೆ. ಗ್ರಾಮಸ್ಥರು ಊರಿನಿಂದ ಹೊರಗೆ ಹೋಗದಂತೆ ಹಾಗೂ ಹೊರಗಿನ ವ್ಯಕ್ತಿಗಳು ಗ್ರಾಮಕ್ಕೆ ಬರದಂತೆ ರಸ್ತೆಗಳಿಗೆ ಬ್ಯಾರಿಕೇಡ್‌ ಹಾಕಲಾಗಿದೆ. ಸೋಂಕಿತರನ್ನು ಅವರ ಮನೆಗಳಲ್ಲೇ ಕ್ವಾರಂಟೈನ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.