ADVERTISEMENT

ಜಿಲ್ಲೆಯಲ್ಲಿ ಕಳೆಗಟ್ಟಿದ ಸುಗ್ಗಿ ಹಬ್ಬದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 16 ಜನವರಿ 2018, 9:52 IST
Last Updated 16 ಜನವರಿ 2018, 9:52 IST
ಮಕರ ಸಂಕ್ರಾಂತಿ ಅಂಗವಾಗಿ ಕೋಲಾರದ ಗಲ್‌ಪೇಟೆಯಲ್ಲಿ ಸೋಮವಾರ ಚೌಡೇಶ್ವರಿ ದೇವಿ ರಥೋತ್ಸವ ನಡೆಯಿತು
ಮಕರ ಸಂಕ್ರಾಂತಿ ಅಂಗವಾಗಿ ಕೋಲಾರದ ಗಲ್‌ಪೇಟೆಯಲ್ಲಿ ಸೋಮವಾರ ಚೌಡೇಶ್ವರಿ ದೇವಿ ರಥೋತ್ಸವ ನಡೆಯಿತು   

ಕೋಲಾರ: ಜಿಲ್ಲೆಯಾದ್ಯಂತ ಸೋಮವಾರ ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯ ಸಂಭ್ರಮ ಕಳೆಗಟ್ಟಿತು. ಮಾನವೀಯ ಸಂಬಂಧ ಬೆಸೆಯುವ ಉತ್ತರಾಯಣ ಪುಣ್ಯಕಾಲದ ಸಂಕ್ರಾಂತಿಯನ್ನು ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

ಮಹಿಳೆಯರು ಮನೆಯ ಮುಂದೆ ನಸುಕಿನಲ್ಲೇ ಬಣ್ಣ ಬಣ್ಣದ ರಂಗೋಲಿ ಹಾಕಿ ಅಂಗಳವನ್ನು ಚಿತ್ತಾರಗೊಳಿಸಿದ್ದರು. ಬಹುಪಾಲು ಮನೆಗಳ ಮುಂದೆ ಹಬ್ಬದ ಶುಭಾಶಯ ಕೋರುವ ಸಂದೇಶ ಸಾಮಾನ್ಯವಾಗಿತ್ತು. ಮನೆಯ ಬಾಗಿಲಿಗೆ ತೋರಣ ಕಟ್ಟಿ ಹೂಗಳಿಂದ ಸಿಂಗರಿಸಲಾಗಿತ್ತು.

ಜಿಲ್ಲೆಯಲ್ಲಿ ಹಿಂದಿನ ವರ್ಷ ಉತ್ತಮ ಮಳೆಯಾಗಿದ ಕಾರಣ ಫಸಲು ಚೆನ್ನಾಗಿ ಬಂದಿದ್ದು, ರೈತರು ಹೆಚ್ಚು ಉತ್ಸಾಹದಿಂದ ಹಬ್ಬ ಆಚರಿಸಿದರು. ಗ್ರಾಮೀಣ ಭಾಗದಲ್ಲಿ ಸಂಪ್ರದಾಯದಂತೆ ಸಗಣಿಯಿಂದ ಬೆನಪ ಮಾಡಿ ಬಾಗಿಲ ಮುಂದೆ ಇಟ್ಟು, ದವಸ ಧಾನ್ಯಗಳನ್ನು ದಾನ ಮಾಡಲಾಯಿತು.

ADVERTISEMENT

ದೇವಸ್ಥಾನಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಕೋಲಾರಮ್ಮ, ಸೋಮೇಶ್ವರ, ವೆಂಕಟ ರಮಣಸ್ವಾಮಿ, ಕೊಂಡರಾಜನಹಳ್ಳಿಯ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಭಕ್ತರು ದೇವರ ದರ್ಶನಕ್ಕಾಗಿ ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದಲೇ ಸಾಲುಗಟ್ಟಿ ನಿಂತಿದ್ದರು. ದೇವರಿಗೆ ಅಭಿಷೇಕ ಮಾಡಲಾಯಿತು. ಪೂಜೆಯ ನಂತರ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.

ಎಳ್ಳು ಬೆಲ್ಲ ಹಂಚಿಕೆ: ಮನೆಗಳಲ್ಲಿ ಹಬ್ಬಕ್ಕಾಗಿ ಸಿಹಿ ಪೊಂಗಲ್‌, ಅವರೆಕಾಳು ಸಾಂಬರು, ಬೋಂಡ, ವಡೆ, ಪಾಯಸ, ಕಿಚಡಿ, ಕೋಸಂಬರಿ ಸೇರಿದಂತೆ ವಿವಿಧ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು. ಪೂಜೆಯ ನಂತರ ಮನೆ ಮಂದಿಯೆಲ್ಲಾ ಒಟ್ಟಾಗಿ ಕುಳಿತು ಹಬ್ಬದೂಟ ಸವಿದರು. ಹೆಣ್ಣು ಮಕ್ಕಳು ಹೊಸ ಬಟ್ಟೆ ಧರಿಸಿ ಮನೆ ಮನೆಗೆ ತೆರಳಿ ಎಳ್ಳು ಬೆಲ್ಲ ಹಂಚಿ ಹಬ್ಬದ ಶುಭಾಶಯ ಕೋರಿದರು.

ರಾಸುಗಳಿಗೆ ಅಲಂಕಾರ: ವರ್ಷ ವಿಡೀ ಜಮೀನುಗಳಲ್ಲಿ ರೈತರೊಂದಿಗೆ ಹೆಗಲು ಕೊಟ್ಟು ದುಡಿದ ರಾಸುಗಳ ಮೈ ತೊಳೆದು ಕೊಂಬುಗಳಿಗೆ ಬಣ್ಣ ಬಳಿದು ಅಲಂಕಾರ ಮಾಡಲಾಗಿತ್ತು. ವಾದ್ಯಗಳೊಂದಿಗೆ ರಾಸುಗಳನ್ನು ಸಾಮೂಹಿಕ ಮೆರವಣಿಗೆ ಮಾಡಿ ಪೂಜೆ ಸಲ್ಲಿಸಿ, ಸಂಜೆ ಕಿಚ್ಚು ಹಾಯಿಸಲಾಯಿತು.

ರೈತರು ಕಿಚ್ಚು ಹಾಯುವ ರಾಸುಗಳೊಂದಿಗೆ ಓಡುತ್ತಾ ಸಂಭ್ರಮಿಸಿದರು. ರೈತ ಮಹಿಳೆಯರು ಮನೆ ಮನೆಗೆ ತೆರಳಿ ಸುಗ್ಗಿ ಹಾಡುಗಳನ್ನು ಹಾಡಿ ದವಸ ಧಾನ್ಯ ಸಂಗ್ರಹಿಸಿದರು.

ಸೂತಕದಂತೆ ಆಚರಣೆ

ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದಲ್ಲಿ ಈ ಹಬ್ಬವನ್ನು ಸೂತಕದಂತೆ ಆಚರಿಸಲಾಗುತ್ತದೆ. ಗ್ರಾಮದಲ್ಲಿ ಸಂಕ್ರಾಂತಿ ಹಬ್ಬ ಮಾಡಿ ಹಲವು ದಶಕಗಳೇ ಕಳೆದಿವೆ. ಸಂಕ್ರಾಂತಿ ಆಚರಿಸಿದರೆ ದನಕರುಗಳು ಸಾಯುತ್ತವೆ ಎಂಬ ಭಯ ಗ್ರಾಮಸ್ಥರಲ್ಲಿ ಮನೆ ಮಾಡಿದೆ. ಹೀಗಾಗಿ ಗ್ರಾಮದ ಯಾವುದೇ ಕುಟುಂಬ ಈ ಹಬ್ಬ ಆಚರಣೆಗೆ ಆಸಕ್ತಿ ತೋರುವುದಿಲ್ಲ. ಅದೇ ರೀತಿ ಈ ಬಾರಿಯೂ ಹಬ್ಬ ಆಚರಿಸಲಿಲ್ಲ.

ಗ್ರಾಮದಲ್ಲಿ ನಾಲ್ಕು ದಶಕದ ಹಿಂದೆ ರಾಸುಗಳಿಗೆ ಪೂಜೆ ಸಲ್ಲಿಸಲಾಗಿತ್ತು. ಆಗ ಗ್ರಾಮದ ದನಕರುಗಳೆಲ್ಲ ಸತ್ತಿದ್ದವು. ಅಂದು ಸಭೆ ಸೇರಿದ ಗ್ರಾಮಸ್ಥರು ಗ್ರಾಮದಲ್ಲಿ ಸಂಕ್ರಾಂತಿ ಆಚರಿಸದಿರುವ ನಿರ್ಧಾರ ಮಾಡಿದರು. ಪೂರ್ವಜರ ಈ ನಿರ್ಧಾರವನ್ನು ಗ್ರಾಮಸ್ಥರು ಪಾಲನೆ ಮಾಡಿಕೊಂಡು ಬರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.