ADVERTISEMENT

ಸಿರಿಧಾನ್ಯ ಬಳಕೆಗೆ ಒತ್ತು ನೀಡಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 8:39 IST
Last Updated 30 ಜನವರಿ 2018, 8:39 IST

ಕುಶಾಲನಗರ : ‘ಪ್ರತಿಯೊಬ್ಬರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕು’ ಎಂದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮಾನ್ಯುಕುಮಾರ್ ಸಲಹೆ ನೀಡಿದರು.

ಇಲ್ಲಿನ ಎಪಿಸಿಎಂಎಸ್ಸಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಬೆಳ್ತಂಗಡಿ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಎರಡು ದಿನಗಳ ಕಾಲ ಆಯೋಜಿಸಿರುವ ಸಿರಿಧಾನ್ಯ ಆಹಾರ ಮೇಳ ಮತ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ಕೃಷಿ ಆಧಾರಿತ ರಾಷ್ಟ್ರವಾಗಿದೆ. ದೇಶದ ಮೂಲ ಕಸುಬು ಕೃಷಿಯಾಗಿದ್ದು, ಈ ದೇಶದ ಆರ್ಥಿಕತೆಯ ಬೆನ್ನೆಲುಬಾಗಿದೆ. ಆದ್ದರಿಂದ ಕೃಷಿಗೆ ಉತ್ತೇಜನ ನೀಡದಿದ್ದರೆ ಸಂಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಹೇಳಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಆರ್.ಮಂಜುಳಾ ಮಾತನಾಡಿ, ರೈತರು ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸುವ ಮೂಲಕ ಮಣ್ಣಿನ ಫಲವತ್ತತೆಯನ್ನು ಸಂರಕ್ಷಣೆ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಚ್.ಎಸ್.ರಾಜಶೇಖರ್ ಮಾತನಾಡಿ, ಕೃಷಿ ಇಲಾಖೆಯಿಂದ ರೈತರಿಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಈ ಎಲ್ಲ ಸೌಲಭ್ಯಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕ ಸೀತಾರಾಮ ಶೆಟ್ಟಿ, ಸಿರಿ ಗ್ರಾಮೋದ್ಯೋಗ ಸಂಸ್ಥೆ ನಿರ್ದೇಶಕಿ ಮನೋರಾಮ್ ಭಟ್ ಮಾತನಾಡಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಜಗದೀಶ್, ಸದಸ್ಯರಾದ ಎಂ.ಎಂ.ಚರಣ್, ಕಾಫಿ ಮಂಡಳಿ ಸದಸ್ಯ ಜಿ.ಎಲ್.ನಾಗರಾಜು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ರೈ, ಸಿರಿಗ್ರಾಮೋದ್ಯೋಗ ಸಂಸ್ಥೆ ಮೇಲ್ವಿಚಾರಕ ಹರೀಶ್ ಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಕೆ.ಹರೀಶ್, ಕಾರ್ಯಕರ್ತರಾದ ಜಯಲಕ್ಷ್ಮಿ, ಜೆ.ಆರ್.ಚಂದ್ರವತಿ, ಯಶೋದಾ ಉಪಸ್ಥಿತರಿದ್ದರು.

ಗಮನ ಸೆಳೆದ ವಸ್ತುಪ್ರದರ್ಶನ : ಸಿರಿಧಾನ್ಯಗಳಾದ ನವಣೆ, ಸಾವೆ, ಊದಲು, ಹಾರಕ, ಕೊರಲೆ, ಸಜ್ಜೆ ಜೋಳ, ಬರಗು ಮತ್ತು ರಾಗಿ ಮತ್ತಿತರರ ಧಾನ್ಯಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

ಸೋಮವಾರಪೇಟೆ ಹಾಗೂ ಪಿರಿಯಾಪಟ್ಟಣ ತಾಲ್ಲೂಕು ವ್ಯಾಪ್ತಿಗಳಿಂದ ಬಂದಿದ್ದ ನೂರಾರು ಸ್ವಸಹಾಯ ಸಂಘದ ಸದಸ್ಯರು ಸಿರಿಧಾನ್ಯಗಳನ್ನು ಖರೀದಿಸಿದರು.

ರುಚಿಕರ ಸಿರಿಧಾನ್ಯ ಆಹಾರ : ಮೇಳದಲ್ಲಿ ಸಿರಿಧಾನ್ಯಗಳಿಂದ ತಯಾರಾದ ತಿಂಡಿ ತಿನ್ನಿಸುಗಳಾದ ದೋಸೆ, ಇಡ್ಲಿ, ಫುಲಾವ್, ಕೇಸರಿ ಬಾತ್, ಪಾಯಸ, ಗಂಜಿ, ಸಜ್ಜೆ ಹಾಲು, ರಾಗಿ ಹಾಲು, ಚಿಲ್ಲಿ ಹಾಟ್, ಜ್ಯೂಸ್, ವೆಜ್ ಬಿರಿಯಾನಿ, ಅಮೃತಪಾನಕ ಇನ್ನಿತರ ತಿನಿಸುಗಳು ಆಹಾರ ಪ್ರಿಯರನ್ನು ಆಕರ್ಷಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.