ADVERTISEMENT

ಶಾಸಕರ ಬಂಧನಕ್ಕೆ ಒತ್ತಾಯ: ಧರಣಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 8:50 IST
Last Updated 2 ಫೆಬ್ರುವರಿ 2018, 8:50 IST

ಕೋಲಾರ: ದಲಿತರ ಭೂಮಿ ಕಬಳಿಸಿದ ಆರೋಪ ಎದುರಿಸುತ್ತಿರುವ ಶಾಸಕ ವರ್ತೂರು ಪ್ರಕಾಶ್‌ ಹಾಗೂ ಅವರ ಆಪ್ತರನ್ನು ಬಂಧಿಸುವಂತೆ ಒತ್ತಾಯಿಸಿ ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ (ಆರ್‌ಪಿಐ) ಕಾರ್ಯಕರ್ತರು ನಗರದಲ್ಲಿ ಗುರುವಾರ ಡಿವೈಎಸ್ಪಿ ಕಚೇರಿ ಎದುರು ಧರಣಿ ನಡೆಸಿದರು.

‘ವರ್ತೂರು ಪ್ರಕಾಶ್ ಮತ್ತು ಬೆಂಬಲಿಗರು ನಕಲಿ ದಾಖಲೆಪತ್ರ ಸೃಷ್ಟಿಸಿ ತಾಲ್ಲೂಕಿನ ಚಿನ್ನೇನಹಳ್ಳಿಯ ಸರ್ವೆ ನಂಬರ್‌ 21ರಲ್ಲಿರುವ ಮುನಿಯಪ್ಪ ಎಂಬ ದಲಿತರಿಗೆ ಸೇರಿದ 1 ಎಕರೆ 30 ಗುಂಟೆ ಜಮೀನನ್ನು ಕಬಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸಲು ಮೀನಾಮೇಷ ಎಣಿಸುತ್ತಿದ್ದಾರೆ’ ಎಂದು ದೂರಿದರು.

‘ಜಮೀನಿನ ಮಾಲೀಕರಾದ ಮುನಿಯಪ್ಪ ಅವರ ಕುಟುಂಬ ಸದಸ್ಯರನ್ನು ವರ್ತೂರು ಪ್ರಕಾಶ್ ಜಾತಿ ನಿಂದನೆ ಮಾಡಿದ್ದಾರೆ. ಅಲ್ಲದೇ, ಅವರಿಗೆ ಜೀವ ಬೆದರಿಕೆ ಹಾಕಿ ಜಮೀನಿನ ವಿಷಯವನ್ನು ಬಹಿರಂಗಪಡಿಸದಂತೆ ಹೆದರಿಸಿದ್ದಾರೆ. ಶಾಸಕರ ವರ್ತನೆಯಿಂದ ಕ್ಷೇತ್ರದ ತಲೆ ತಗ್ಗಿಸುವಂತಾಗಿದೆ’ ಎಂದು ಆರ್‌ಪಿಐ ರಾಜ್ಯ ಯುವ ಘಟಕದ ಅಧ್ಯಕ್ಷ ಎನ್.ಅಂಬರೀಶ್ ಹೇಳಿದರು.

ADVERTISEMENT

ಶಾಸಕರು ಅಧಿಕಾರಿಗಳ ಮೇಲೆ ಒತ್ತಡ ತಂದು ಮುನಿಯಪ್ಪರ ಜಮೀನನ್ನು ತಮ್ಮ ಅಣ್ಣನ ಮಗನ ಹೆಸರಿಗೆ ಮಾಡಿಸಿಕೊಂಡಿದ್ದಾರೆ. ಶಾಸಕರ ಪರಮಾಪ್ತರಾದ ತಾಲ್ಲೂಕು ದರಖಾಸ್ತು ಸಮಿತಿಯ ಮಾಜಿ ಅಧ್ಯಕ್ಷ ಬೆಗ್ಲಿ ಪ್ರಕಾಶ್‌, ಮುನಿಯಪ್ಪರ ಕುಟುಂಬ ಸದಸ್ಯರಿಗೆ ಹಣದ ಆಮಿಷವೊಡ್ಡಿ ಪ್ರಕರಣ ಮುಚ್ಚಿ ಹಾಕುವ ಸಂಚು ಮಾಡಿದ್ದರು ಎಂದು ಆರೋಪಿಸಿದರು.

ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು. ಮುನಿಯಪ್ಪರ ಕುಟುಂಬ ಸದಸ್ಯರಿಗೆ ಪೊಲೀಸ್‌ ರಕ್ಷಣೆ ನೀಡಬೇಕು. ಪ್ರಕರಣ ಸಂಬಂಧ ನ್ಯಾಯಯುತ ತನಿಖೆ ನಡೆಸಬೇಕು. ಭೂ ಅಕ್ರಮಕ್ಕೆ ಸಹಕರಿಸಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಇಲ್ಲದಿದ್ದರೆ ತಾಲ್ಲೂಕಿನಾದ್ಯಂತ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಧರಣಿನಿರತರು ಎಚ್ಚರಿಕೆ ನೀಡಿದರು.

ಆರ್‌ಪಿಸಿ ರಾಜ್ಯ ಘಟಕದ ಉಪಾಧ್ಯಕ್ಷ ಟಿ.ವಿಜಯಕುಮಾರ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಲಕ್ಷ್ಮೀಪತಿ, ಪ್ರಧಾನ ಕಾರ್ಯದರ್ಶಿ ವಿ.ವಾಸು, ತಾಲ್ಲೂಕು ಯುವ ಘಟಕದ ಅಧ್ಯಕ್ಷ ಮುನೇಶ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.