ADVERTISEMENT

56 ಕ್ಷೇತ್ರದಲ್ಲಿ ಪಿಪಿಐ ಅಭ್ಯರ್ಥಿಗಳು

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 15:51 IST
Last Updated 10 ಏಪ್ರಿಲ್ 2019, 15:51 IST

ಕೋಲಾರ: ‘ರಾಜಕೀಯ ಬದಲಾವಣೆಗಾಗಿ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಪಕ್ಷದ ಅಭ್ಯರ್ಥಿ ಎನ್.ಎಂ.ಸರ್ವೇಶ್ ಅವರನ್ನು ಗೆಲ್ಲಿಸಬೇಕು’ ಎಂದು ಪಿರಮಿಡ್ ಪಾರ್ಟಿ ಆಫ್ ಇಂಡಿಯಾ (ಪಿಪಿಐ) ರಾಜ್ಯ ಘಟಕದ ಅಧ್ಯಕ್ಷ ಟಿ.ಕೆ.ಪ್ರೇಮ್‌ಕುಮಾರ್‌ ಮನವಿ ಮಾಡಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘20 ವರ್ಷಗಳ ಹಿಂದೆ ಸ್ಥಾಪನೆಯಾದ ಪಕ್ಷವು ನೋಂದಾಯಿತ ರಾಷ್ಟ್ರೀಯ ಪಕ್ಷವಾಗಿದೆ. ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಆತ್ಮಜ್ಞಾನಿಗಳು, ಅಹಿಂಸಾ ವಾದಿಗಳು ಆಡಳಿತ ಪಾಲಕರಾದರೆ ದೇಶ ಸುಭಿಕ್ಷಾವಾಗುತ್ತದೆ’ ಎಂದರು.

‘ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ 56 ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳು ಸ್ವರ್ಧಿಸಿದ್ದಾರೆ. ಅಹಿಂಸ ಭಾರತ ನಿರ್ಮಾಣ, ಅಧಿಕಾರ ವಿಕೇಂದ್ರೀಕರಣ, ಗ್ರಾಮ ಸ್ವರಾಜ್ ಸ್ಥಾಪನೆ, ಕುಲ, ಮತ, ವರ್ಣ, ವರ್ಗರಹಿತ ಭಾರತ ನಿರ್ಮಾಣ, ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ಹಕ್ಕು ನೀಡುವುದು ಪಕ್ಷದ ಪ್ರಮುಖ ಉದ್ದೇಶ’ ಎಂದು ವಿವರಿಸಿದರು.

ADVERTISEMENT

‘ಈ ಹಿಂದೆ ಜನಸಂಘ ಬಿಜೆಪಿಯ ಇಬ್ಬರು ಅಭ್ಯರ್ಥಿಗಳಿದ್ದವರು 2 ದಶಕದ ನಂತರ ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಅದೇ ರೀತಿ ಭವಿಷ್ಯದಲ್ಲಿ ನಮ್ಮ ಪಕ್ಷ ಹಂತ ಹಂತವಾಗಿ ಬೆಳೆಯುತ್ತದೆ. ಪಕ್ಷದಲ್ಲಿ 5 ಲಕ್ಷ ಸದಸ್ಯರು ಮತ್ತು 10 ಕೋಟಿಗೂ ಹೆಚ್ಚು ಬೆಂಬಲಿಗರಿದ್ದಾರೆ’ ಎಂದು ಮಾಹಿತಿ ನೀಡಿದರು.

ಅಖಿಲ ಭಾರತ ವಿಶ್ವಕರ್ಮ ಸಂಘಟನಾ ಶಕ್ತಿ ಅಧ್ಯಕ್ಷ ಚಿನ್ನಣ್ಣಚಾರಿ, ಸದಸ್ಯ ಬಾಬು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.