ADVERTISEMENT

ಮತ್ತೆ 59 ಮಂದಿಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 15:47 IST
Last Updated 14 ಸೆಪ್ಟೆಂಬರ್ 2020, 15:47 IST

ಕೋಲಾರ: ಜಿಲ್ಲೆಯಲ್ಲಿ ಹೊಸದಾಗಿ 59 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಸೋಮವಾರ ದೃಢಪಟ್ಟಿದ್ದು, ಇದರೊಂದಿಗೆ ಸಕ್ರಿಯ ಸೋಂಕಿತರ ಸಂಖ್ಯೆ 762ಕ್ಕೆ ಏರಿಕೆಯಾಗಿದೆ.

ಮುಖ್ಯವಾಗಿ ವಿಷಮ ಶೀತ ಜ್ವರದಿಂದ ಬಳಲುತ್ತಿರುವವರಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಂಡಿದೆ. ವಿಷಮ ಶೀತ ಜ್ವರವಿರುವ 32 ಮಂದಿಗೆ ಮತ್ತು ಸೋಂಕಿತರ ಸಂಪರ್ಕದಿಂದ 23 ಮಂದಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.

ಕೋಲಾರ ತಾಲ್ಲೂಕಿನಲ್ಲಿ ಅತಿ ಹೆಚ್ಚು 23 ಮಂದಿಗೆ ಸೋಂಕು ಬಂದಿದೆ. ವಿಷಮ ಶೀತ ಜ್ವರಪೀಡಿತ 18 ಮಂದಿಗೆ, ಸೋಂಕಿತರ ಸಂಪರ್ಕದಿಂದ 3 ಮಂದಿಗೆ ಮತ್ತು ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಇಬ್ಬರಿಗೆ ಸೋಂಕು ಹರಡಿದೆ.

ADVERTISEMENT

ಮಾಲೂರು ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರಕ್ಕೆ ತುತ್ತಾಗಿರುವ 3 ಮಂದಿಗೆ ಮತ್ತು ಸೋಂಕಿತರ ಸಂಪರ್ಕದಿಂದ ಇಬ್ಬರಿಗೆ, ಬಂಗಾರಪೇಟೆ ತಾಲ್ಲೂಕಿನಲ್ಲಿ ಸೋಂಕಿತರ ಸಂಪರ್ಕದಿಂದ 7 ಮಂದಿಗೆ ಹಾಗೂ ತೀವ್ರ ಉಸಿರಾಟ ಸಮಸ್ಯೆಯಿರುವ ಒಬ್ಬರಿಗೆ, ಶ್ರೀನಿವಾಸಪುರ ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರಕ್ಕೆ ತುತ್ತಾಗಿರುವ ಇಬ್ಬರಿಗೆ, ಸೋಂಕಿತರ ಸಂಪರ್ಕದಿಂದ 3 ಮಂದಿಗೆ ಮತ್ತು ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಒಬ್ಬರಿಗೆ ಸೋಂಕು ಬಂದಿದೆ.

ಕೆಜಿಎಫ್‌ ತಾಲ್ಲೂಕಿನಲ್ಲಿ 8 ಮಂದಿಗೆ ಮತ್ತು ಮುಳಬಾಗಿಲು ತಾಲ್ಲೂಕಿನಲ್ಲಿ 9 ಮಂದಿಗೆ ಸೋಂಕು ತಗುಲಿದೆ. ಇವರೆಲ್ಲರೂ ವಿಷಮ ಶೀತ ಜ್ವರದಿಂದ ಬಳಲುತ್ತಿದ್ದಾರೆ. ಸೋಂಕಿತರ ಮನೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಲಾಗಿದೆ.

81 ಮಂದಿ ಗುಣಮುಖ: ಕೋವಿಡ್‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರ ಪೈಕಿ 81 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಸೋಮವಾರ ಮನೆಗೆ ಮರಳಿದರು. ಕೋಲಾರ ತಾಲ್ಲೂಕಿನ 32 ಮಂದಿ, ಮಾಲೂರು ತಾಲ್ಲೂಕಿನ 18, ಬಂಗಾರಪೇಟೆ ತಾಲ್ಲೂಕಿನ ಇಬ್ಬರು, ಕೆಜಿಎಫ್‌ ತಾಲ್ಲೂಕಿನ 11, ಮುಳಬಾಗಿಲು ತಾಲ್ಲೂಕಿನ 10 ಹಾಗೂ ಶ್ರೀನಿವಾಸಪುರ ತಾಲ್ಲೂಕಿನ 8 ಮಂದಿಯನ್ನು ಆಸ್ಪತ್ರೆಯಿಂದ ಬೀಳ್ಕೊಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.