ADVERTISEMENT

ಕೋಮು ಅಜೆಂಡಾ ಸಾಕಾರದ ಸಂಚು: ಕೋಟಿಗಾನಹಳ್ಳಿ ರಾಮಯ್ಯ ವಿಷಾದ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2020, 12:22 IST
Last Updated 9 ಏಪ್ರಿಲ್ 2020, 12:22 IST
ಕೋಟಿಗಾನಹಳ್ಳಿ ರಾಮಯ್ಯ
ಕೋಟಿಗಾನಹಳ್ಳಿ ರಾಮಯ್ಯ   

ಕೋಲಾರ: ‘ಜಿಲ್ಲೆಯು ಧರ್ಮ ನಿರಪೇಕ್ಷ, ಸಾಮಾಜಿಕ ನ್ಯಾಯ, ದಲಿತ- ಮತ್ತು ಎಡ ಚಳವಳಿಯ ಮೂಸೆಯಲ್ಲಿ ಬೆಳೆಯುತ್ತಾ ಬಂದಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಇತಿಹಾಸಕ್ಕೆ ಮಸಿ ಬಳಿಯುವ ಘಟನೆಗಳು ನಡೆಯುತ್ತಿವೆ’ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ವಿಷಾದ ವ್ಯಕ್ತಪಡಿಸಿದ್ದಾರೆ.

‘ಕೊರೊನಾ ಸೋಂಕಿನಿಂದ ಸಮಾಜದಲ್ಲಿ ಆತಂಕ ಮನೆ ಮಾಡಿದೆ. ಕೆಲ ಮಂದಿ ಇಂತಹ ಗಂಭೀರ ಸಂದರ್ಭವನ್ನು ತಮ್ಮ ಕೋಮು ಅಜೆಂಡಾ ಸಾಕಾರಗೊಳಿಸಿಕೊಳ್ಳಲು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.

‘ಕೋಮುವಾದಿ ಮನಸ್ಸುಗಳು ಪರಿಸ್ಥಿತಿಯ ಲಾಭ ಪಡೆಯುವ ಉದ್ದೇಶದಿಂದ ಅನ್ಯ ಧರ್ಮೀಯರ ವಿರುದ್ಧ ಇತರೆ ಸಮುದಾಯಗಳನ್ನು ಎತ್ತಿ ಕಟ್ಟುತ್ತಿರುವುದು ಕೊರೊನಾ ಸೋಂಕಿಗಿಂತಲೂ ಅಪಾಯಕಾರಿ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಸಮಾಜದಲ್ಲಿ ದ್ವೇಷಮಯ ವಾತಾವರಣ ಸೃಷ್ಟಿಯಾಗುತ್ತದೆ. ಎಲ್ಲಾ ಸಮುದಾಯದವರು ಸಂಯಮ ಕಾಯ್ದುಕೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

ADVERTISEMENT

‘ಕೋಮುವಾದಿಗಳು ಸುಳ್ಳು ಸುದ್ದಿ, ನಕಲಿ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಅನ್ಯ ಧರ್ಮೀಯರ ವಿರುದ್ಧ ವೈರತ್ವ ಬೆಳೆಸುತ್ತಿದ್ದಾರೆ. ಇದು ಅತ್ಯಂತ ವ್ಯವಸ್ಥಿತ ಸಂಚಾಗಿದ್ದು, ಇದರ ವಿರುದ್ಧ ಎಲ್ಲಾ ಮಾನವೀಯ ಮನಸ್ಸುಗಳು ಎಚ್ಚೆತ್ತುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದ್ದಾರೆ.

‘ತಬ್ಲಿಗ್ ಜಮಾತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದವರು ಈ ಮಾಹಿತಿಯನ್ನು ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಯೊಂದಿಗೆ ಹಂಚಿಕೊಳ್ಳಬೇಕು. ಈ ಕೆಲಸವನ್ನು ಜವಾಬ್ದಾರಿಯಿಂದ ಮಾಡಬೇಕು. ಇಡೀ ಸಮಾಜ ಅತ್ಯಂತ ಜವಾಬ್ದಾರಿಯಿಂದ ವರ್ತಿಸಬೇಕು. ಕೋಮು ಭಾವನೆ ಸೃಷ್ಟಿಗೆ ಅವಕಾಶವಾಗದಂತೆ ಎಚ್ಚರ ವಹಿಸಬೇಕು’ ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.